ಬೆಂಗಳೂರು: ಹಿರಿಯ ನಿರ್ದೇಶಕ ಭಗವಾನ್(89) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ:ಮೊರ್ಬಿ ಸೇತುವೆ ದುರಂತದ ಟ್ವೀಟ್: ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಬಂಧನ
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಡಾ.ಸಿ.ಎನ್.ಮಂಜುನಾಥ ನೇತೃತ್ವದಲ್ಲಿ ಭಗವಾನ್‌ಗೆ ಚಿಕಿತ್ಸೆ ಮುಂದುವರಿದಿದೆ.ನಟ, ನಿರ್ದೇಶಕ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ಭಗವಾನ್ ಗುರುತಿಸಿಕೊಂಡಿದ್ದರು. ಇದೀಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 89 ವರ್ಷದ ಭಗವಾನ್ ಶೀತದಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆಯಿಂದ 2 ದಿನದ ಹಿಂದೆಯೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಸದ್ಯದ ಮಾಹಿತಿ ಪ್ರಕಾರ, ನಿನ್ನೆ ರಾತ್ರಿ ಭಗವಾನ್ ಅವರಿಗೆ ಆ್ಯಂಜಿಯೋಗ್ರಾಮ್ ಪರೀಕ್ಷೆ ನಡೆಸಲಾಗಿದ್ದು, ಆರೋಗ್ಯದಲ್ಲಿ ಚೇತರಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಹಿರಿಯ ನಿರ್ದೇಶಕ ಭಗವಾನ್ ಅವರು ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಸೂಪರ್ ಹಿಟ್ ಸಿನಿಮಾಗಳಾದ ಕಸ್ತೂರಿ ನಿವಾಸ, ಎರಡು ಕನಸು, ಗಿರಿ ಕನ್ಯೆ, ಆಪರೇಶನ್ ಡೈಮಂಡ್ ರಾಕೆಟ್, ಹೊಸ ಬೆಳಕು ಸೇರಿದಂತೆ 55 ಸಿನಿಮಾಗಳನ್ನು ಸ್ನೇಹಿತ ದೊರೆರಾಜ್ ಜತೆ ಸೇರಿ ನಿರ್ದೇಶಿಸಿದ್ದ ಹೆಗ್ಗಳಿಕೆ ಅವರದ್ದಾಗಿದೆ.
ಎಸ್.ಕೆ.ಭಗವಾನ್ ಅವರು 1933ರ ಜುಲೈ 3ರಂದು ಜನಿಸಿದ್ದು, ಬೆಂಗಳೂರಿನ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಪಡೆದಿದ್ದರು. ಆರಂಭದಲ್ಲಿ ಭಗವಾನ್ ಅವರು ಹಿರಣ್ಯಯ್ಯ ಮಿತ್ರ ಮಂಡಳಿಯಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದರು. 1956ರಲ್ಲಿ ಕಣಗಲ್ ಪ್ರಭಾಕರ್ ಶಾಸ್ತ್ರಿಗಳ ಜತೆ ಸಹಾಯಕರಾಗಿ ಕೆಲಸ ಮಾಡುವ ಮೂಲಕ ಸಿನಿಮಾ ಜೀವನ ಆರಂಭಿಸಿದ್ದರು.