ಬೆಂಗಳೂರು: ನಕಲಿ ಸಿಮ್ ಕಾರ್ಡ್ ಬಳಸಿಕೊಂಡು ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಲಿಂಕ್ ಕಳುಹಿಸಿ ಸಾರ್ವಜನಿಕರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳ ಕಣ್ಣೂರು ಮೂಲದ ಶಾನೀದ್ ಅಬ್ದುಲ್ ಅಮೀದ್ (29) ಬಂಧಿತ. ಆರೋಪಿಯಿಂದ 222 ಸಿಮ್ ಕಾರ್ಡ್, 10 ಮೊಬೈಲ್, 10 ಡೆಬಿಟ್ ಕಾರ್ಡ್, ಪಾಸ್‌ಬುಕ್, ಚೆಕ್‌ಬುಕ್ ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಶಾನೀದ್ ಸ್ನೇಹಿತ ಮೊಹಮ್ಮದ್ ನಿಹಾಲ್ ಹಾಗೂ ಇತರರು ದುಬೈನಲ್ಲಿರುವ ಸುಳಿವು ಸಿಕ್ಕಿದ್ದು, ಇವರಿಗೆ ಪೊಲೀಸರು ನೋಟಿಸ್ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.
ಪ್ರಕರಣದ ವಿವರ: ಆರೋಪಿಯು ಕೆಲ ಟೆಲಿಗ್ರಾಂ ಗ್ರೂಪ್ ರಚಿಸಿಕೊಂಡಿದ್ದ. ಆ ಗ್ರೂಪ್‌ನಲ್ಲಿದ್ದ ಶಾನೀದ್‌ನ ಪರಿಚಿತ ಕೆಲ ವ್ಯಕ್ತಿಗಳು ನಕಲಿ ಸಿಮ್ ಕಾರ್ಡ್ ಹಾಗೂ ನಕಲಿ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಕೊರಿಯರ್ ಮೂಲಕ ಆತನಿಗೆ ಕಳುಹಿಸುತ್ತಿದ್ದರು. ಸ್ನೇಹಿತ ನಿಹಾಲ್ ಜತೆ ಸೇರಿಕೊಂಡು ಆರೋಪಿಯು ಈ ನಕಲಿ ಸಿಮ್ ಹಾಗೂ ಬ್ಯಾಂಕ್ ಖಾತೆ ಬಳಸಿಕೊಂಡು ಸಾರ್ವಜನಿಕರಿಗೆ ಲಿಂಕ್ ಕಳುಹಿಸುತ್ತಿದ್ದ. ಜತೆಗೆ, ಕ್ರಿಪ್ಟೋ ಕರೆನ್ಸಿ ಬಗ್ಗೆ ಮಾಹಿತಿಗಳನ್ನು ಶೇರ್ ಮಾಡುವುದು, ಇದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಬರಲಿದೆ ಎಂದು ನಂಬಿಸಿ ಸಾರ್ವಜನಿಕರನ್ನು ತನ್ನತ್ತ ಸೆಳೆಯಲು ಹಲವಾರು ಮೆಸೇಜ್‌ಗಳನ್ನು ಪೋಸ್ಟ್ ಮಾಡುತ್ತಿದ್ದ.
ಟ್ರೇಡಿಂಗ್ ನಡೆಸಲು ಲಿಂಕ್ ಕ್ಲಿಕ್ ಮಾಡಬೇಕು ಎಂದು ಒಂದು ಲಿಂಕ್ ಅನ್ನೂ ಕಳುಹಿಸುತ್ತಿದ್ದ. ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಸಾರ್ವಜನಿಕರ ಬ್ಯಾಂಕ್ ಖಾತೆ ವಿವರ, ಮೊಬೈಲ್ ನಂಬರ್ ಸೇರಿ ಎಲ್ಲ ಮಾಹಿತಿಗಳೂ ಆತನಿಗೆ ಸಿಗುತ್ತಿದ್ದವು. ಕೂಡಲೇ ಆ ಮಾಹಿತಿ ಬಳಿಸಿಕೊಂಡು ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ. ವಂಚನೆಗೊಳಗಾದವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ಆರೋಪಿ ಶಾನೀದ್‌ನ ಸುಳಿವು ಸಿಕ್ಕಿತ್ತು. ಶಾನೀದ್‌ನ ಮನೆಗೆ ತೆರಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ದುಬೈನಲ್ಲಿ ಕಿಂಗ್‌ಪಿನ್? : ಪ್ರಕರಣದ ಕಿಂಗ್‌ಪಿನ್ ದುಬೈನಲ್ಲಿ ತಲೆಮರೆಸಿಕೊಂಡಿರುವ ಸುಳಿವು ಸಿಕ್ಕಿದೆ. ಈ ಗ್ಯಾಂಗ್‌ನ ಸದಸ್ಯರು ದುಬೈನಲ್ಲಿ ಕುಳಿತುಕೊಂಡೇ ಶಾನೀದ್‌ನನ್ನು ಬಳಸಿಕೊಂಡು ಕೃತ್ಯ ಎಸಗುತ್ತಿದ್ದರು ಎಂದು ಹೇಳಲಾಗುತ್ತಿದೆ. ಆರೋಪಿಗಳು ಒಟ್ಟು 3 ಪ್ರತ್ಯೇಕ ಗಂಪು ರಚಿಸಿಕೊಂಡು ಸೈಬರ್ ಅಪರಾಧಗಳಲ್ಲಿ ತೊಡಗಿಸಿಕೊಂಡು, ನೂರಾರು ಮಂದಿಗೆ ಲಕ್ಷಾಂತರ ರೂ. ವಂಚಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೆಲಸ ಕೊಡಿಸುವುದು, ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಮಾಡಬಹುದಾದದ ನಕಲಿ ಸ್ಕೀಂಗಳು, ಕಡಿಮೆ ಬೆಲೆಗೆ ಕೆಲ ವಸ್ತುಗಳನ್ನು ಕೊಡುವುದಾಗಿ ಅಂತರ್ಜಾಲದ ಕೆಲ ವೆಬ್‌ಸೈಟ್‌ಗಳಲ್ಲಿ ಸುಳ್ಳು ಮಾಹಿತಿ ಹಾಕುತ್ತಿದ್ದರು. ಇದನ್ನು ನಂಬಿ ಸಾರ್ವಜನಿಕರು ಇವರನ್ನು ಸಂಪರ್ಕಿಸಿದರೆ ಲಿಂಕ್ ಕಳುಹಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕುವುದು, ತಮ್ಮ ಖಾತೆಗೆ ಮುಂಗಡ ಹಣ ಜಮೆ ಮಾಡುವಂತೆ ಹೇಳಿ ವಂಚಿಸುವ ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ