ಬೆಳಗಾವಿ: ಮಹಾರಾಷ್ಟ್ರದ ಇಬ್ಬರು ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಮತ್ತು ಶಂಭುರಾಜೆ ದೇಸಾಯಿ ಅವರು ಇದೇ ಡಿಸೆಂಬರ್ 3 ರಂದು ಬೆಳಗಾವಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಇಬ್ಬರು ಹಿರಿಯ ಸಚಿವರನ್ನು ಮಹಾರಾಷ್ಟ್ರದ ಜತ್ತ, ಅಕ್ಕಲಕೋಟೆ, ದಕ್ಷಿಣ ಸೊಲ್ಲಾಪುರ ಮತ್ತು ಪಂಢರಪುರ ಪ್ರದೇಶಗಳಿಗೆ ಕಳಿಸಲು ಆಗ್ರಹಿಸಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಆಗ್ರಹಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಒತ್ತಾಯಿಸಿರುವ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು ಗಡಿ ವಿವಾದ ವಿಷಯ ನ್ಯಾಯಾಲಯದಲ್ಲಿದೆ. ಹೀಗಿರುವಾಗ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬಂದು ಇಲ್ಲಿನ ಎಂಇಎಸ್ ನಾಯಕರ ಜೊತೆಗೆ ಸಭೆ ಮಾಡುವದರ ಹಿಂದೆ ಬೆಳಗಾವಿಯಲ್ಲಿನ ಸೌಹಾರ್ದ ವಾತಾವರಣ ಹಾಳುಮಾಡುವ ಉದ್ದೇಶವಿದೆ ಎಂದು ಟೀಕಿಸಿದ್ದಾರೆ.
ಮುಂದಿನ ತಿಂಗಳು ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಾತಾವರಣ ಕೆಡಿಸಲು ಎಂಇಎಸ್ ಕುತಂತ್ರ ನಡೆಸಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮಹಾರಾಷ್ಟ್ರದ ಸಚಿವರು ಇಲ್ಲಿಗೆ ಬಂದು ಸಭೆ ನಡೆಸದಂತೆ ನಿರ್ಭಂದ ವಿದಿಸಬೇಕು ಎಂದು ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರ ಸರಕಾರಕ್ಕೆ ತಕ್ಕ ಉತ್ತರ ನೀಡಲು ಮುಖ್ಯಮಂತ್ರಿಗಳು ನಮ್ಮ ಇಬ್ಬರು ಹಿರಿಯ ಸಚಿವರನ್ನು ಮಹಾರಾಷ್ಟ್ರದ ಸೊಲ್ಲಾಪುರ ಜತ್ತ ಅಕ್ಕಲಕೋಟ ಮತ್ತು ಪಂಡರಾಪುರಕ್ಕೆ ಕಳಿಸಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.