Advertisement

Plastic Selling: ಮಾರುಕಟ್ಟೆಯಲ್ಲಿ ಎಗ್ಗಿಲ್ಲದೆ ಪ್ಲಾಸ್ಟಿಕ್‌ ಮಾರಾಟ

12:28 PM Sep 21, 2023 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳ ಬಳಕೆ ಎಗ್ಗಿಲ್ಲದೆ ನಡೆದಿದೆ. ಈ ಹಿಂದೆ ಸರ್ಕಾರ 2016ರ ಮಾ.11ರಿಂದ ಜಾರಿಗೆ ಬರುವಂತೆ ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕೆ, ಸಾಗಣೆ, ಸಂಗ್ರಹ ಮತ್ತು ಮಾರಾಟ ನಿಷೇಧಿಸಿ ಅಧಿಸೂಚನೆ ಹೊರಡಿಸಿತ್ತು. ಆರಂಭದಲ್ಲಿ ಅಧಿಕಾರಿಗಳ ದಾಳಿ ಮತ್ತು ದಂಡ ಪ್ರಯೋಗದಿಂದಾಗಿ ಪ್ಲಾಸ್ಟಿಕ್‌ ಬಳಕೆ ಹಾವಳಿ ಕಡಿಮೆಯಾಗಿತ್ತು. ಆದರೆ, ಈಗ ಪ್ಲಾಸ್ಟಿಕ್‌ ಬಳಕೆ ವಿಪರೀತವಾಗಿದೆ.

Advertisement

ಚಿಲ್ಲರೆ ಮಳಿಗೆಗಳು, ಹೂವು, ಹಣ್ಣು, ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿಗಳು, ಔಷಧದ ಅಂಗಡಿ, ಬೇಕರಿಗಳು, ಮಾಂಸ ಮಾರಾಟದ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಕೈಚೀಲಗಳ ಬಳಕೆ ೆ ನಡೆಯುತ್ತಿದೆ. ಗ್ರಂಥಿಕೆ ಅಂಗಡಿಗಳು ಸಹ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ನೀಡುತ್ತಿವೆ. ಸಗಟು ಮಳಿಗೆಗಳ ಮಾಲೀಕರು ಯಾವುದೇ ಅಂಜಿಕೆಯಿಲ್ಲದೆ ಪ್ಲಾಸ್ಟಿಕ್‌ ಕೈಚೀಲ, ತಟ್ಟೆ, ಲೋಟಗಳ ಮಾರಾಟ ಮಾಡುತ್ತಿದ್ದಾರೆ ಎಂದು ಗಾಂಧಿಬಜಾರ್‌ ನಿವಾಸಿ ಸುಲೋಚನಬಾಯಿ ದೂರುತ್ತಾರೆ.

ಯಾವುದೇ ಗ್ರಾಹಕ ಇರಲಿ ಆತನ ಕೈಯಲ್ಲಿ ಪ್ಲಾಸ್ಟಿಕ್‌ ಚೀಲ ಇರದೇ ಮನೆಯತ್ತ ಮುಖ ಮಾಡಲಾರ. ರಸ್ತೆ ಬದಿ ಹೂವು, ಹಣ್ಣಿನ ವ್ಯಾಪಾರಿಗಳು ಕೂಡ ಪ್ಲಾಸ್ಟಿಕ್‌ ಕವರ್‌ ಇಲ್ಲದೆ ಖರೀದಿಗೆ ಇಳಿಯಲಾರದಂತಹ ಪರಿಸ್ಥಿತಿಯಿದೆ ಎಂದು ಚಿಕ್ಕಪೇಟೆ ನಿವಾಸಿ ತಂಗವೇಲು ಹೇಳುತ್ತಾರೆ.

ಪ್ಲಾಸ್ಟಿಕ್‌ ನೀಡದೆ ಹೋದರೆ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಪ್ಲಾಸ್ಟಿಕ್‌ ನೀಡಿದರೆ ದಂಡ ಕಟ್ಟಬೇಕಾಗುತ್ತದೆ. ನಮ್ಮ ಅಂಗಡಿಯಲ್ಲಿ ಕೊಟ್ಟಿಲ್ಲ ಎಂದರೆ ಪಕ್ಕದ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಾರೆ. ಪ್ಲಾಸ್ಟಿಕ್‌ ನಿಷೇಧವಾಗಿದೆ ಎಂದು ಹೇಳಿದರೆ ಗಲಾಟೆ ಮಾಡಲು ಆರಂಭಿಸುತ್ತಾರೆ. ಹೀಗಾಗಿ ಪ್ಲಾಸ್ಟಿಕ್‌ ನಿಷೇಧ ಮತ್ತು ಅದರ ಬಳಕೆ ಅಪಾಯದ ಬಗ್ಗೆ ಜನರಿಗೆ ಸಾಕಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಶಿವಾಜಿನಗರ ಕಿರಾಣಿ ಅಂಗಡಿ ವ್ಯಾಪಾರಿ ಅನ್ಸಾರಿ ದೂರುತ್ತಾರೆ.

ಗುಜರಾತ್‌ನಿಂದ ಕ್ಯಾರಿಬ್ಯಾಗ್‌ಗಳ ರವಾನೆ: ಬಿಬಿಎಂಪಿ ಅಧಿಕಾರಿಗಳು ಸಿಲಿಕಾನ್‌ ಸಿಟಿಯ ಹೊರ ಮತ್ತು ಒಳಗೆ ಅಕ್ರಮವಾಗಿ ಉತ್ಪಾದಿಸುತ್ತಿರುವ ಪ್ಲಾಸ್ಟಿಕ್‌ ಘಟಕಗಳ ಮೇಲೆ ಆಗಾಗ್ಗೆ ದಾಳಿ ನಡೆಸುತ್ತಲೇ ಇರುತ್ತಾರೆ. ಆದರೆ ನಗರದಲ್ಲಿ ಉತ್ಪಾದನೆ ಆಗುವುದಕ್ಕಿಂತ ಅಧಿಕ ಸಂಖ್ಯೆಯಲ್ಲಿ ಹೊರ ರಾಜ್ಯಗಳಿಂದ ಸಿಲಿಕಾನ್‌ ಸಿಟಿಗೆ ಪೂರೈಕೆ ಆಗುತ್ತಿರುವುದು ಬಿಬಿಎಂಪಿ ಅಧಿಕಾರಿಗಳಿಗೆ ದೊಡ್ಡ ತಲೆನೋವು ತಂದಿದೆ. ಗುಜರಾತಿನಿಂದ ರಾಜ್ಯಕ್ಕೆ ಪ್ರವೇಶಿ ಸುತ್ತಿರುವ ಕ್ಯಾರಿಬ್ಯಾಗ್‌ಗಳು ಪ್ಲಾಸ್ಟಿಕ್‌ ಹಾವಳಿಗೆ ಕಾರಣವಾಗಿದೆ ಎಂಬುದು ಪಾಲಿಕೆಯ ಅಧಿಕಾರಿಗಳ ಮಾತು.

Advertisement

ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಯಲ್ಲೇ ಪ್ಲಾಸ್ಟಿಕ್‌ ಬಳಕೆ ಅಧಿಕವಿದೆ. ಗ್ರಾಹಕರು ಎಲ್ಲೆಂದರಲ್ಲಿ ಬೀಸಾಡುವ ಕಾರಣ ಅವು ಮಳೆ ಬಂದಾಗ ಚರಂಡಿಯಲ್ಲಿ ನೀರು ತುಂಬಿ ಉಕ್ಕಿಹರಿಯಲು ಕೂಡ ಕಾರಣವಾಗುತ್ತದೆ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. -ಪ್ರಕಾಶ್‌ ಪೀರ್‌ಗಲ್‌, ಬೆಂಗಳೂರು ಕ್ಲಾಥ್‌ ಮರ್ಚೆಂಟ್‌ ಅಸೋಸಿಯೇಷನ್‌ ಅಧ್ಯಕ್ಷ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next