Advertisement

Bengaluru: ಕ್ರಿಮಿನಲ್‌ಗ‌ಳಿಗೆ ಸಿಡಿಆರ್‌ ಮಾರಾಟ; 10 ಸೆರೆ

11:37 AM May 29, 2024 | Team Udayavani |

ಬೆಂಗಳೂರು: ಮೊಬೈಲ್‌ ಕರೆಗಳ ವಿವರ(ಸಿಡಿಆರ್‌) ಸಂಗ್ರಹಿಸಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದ ಖಾಸಗಿ ಪತ್ತೆದಾರಿ ಏಜೆನ್ಸಿಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳು, ಈ ಮೂರು ಎಜೆನ್ಸಿಗಳ ಮಾಲೀಕರು ಸೇರಿ 10 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

Advertisement

ಕೆಂಗೇರಿ ಉಪ ನಗರದ ಡೈಮಂಡ್‌ ಸ್ಟ್ರೀಟ್‌ ನಿವಾಸಿ ಪುರುಷೋತ್ತಮ್‌ (43), ಮಾರತ್ತಹಳ್ಳಿಯ ಜಿ.ಕೆ.ತಿಪ್ಪೇಸ್ವಾಮಿ (48), ಭಾರತ್‌ ನಗರದ ಮಹಾಂತಗೌಡ ಪಾಟೀಲ್‌ (46), ವಿಜಯನಗರದ ರೇವಂತ (25), ದಾಸನಪುರದ ಅಡಕಮಾರನಹಳ್ಳಿಯ ಗುರುಪಾದಸ್ವಾಮಿ (38), ಕೊತ್ತನೂರಿನ ರಾಜಶೇಖರ್‌ (32), ಕೊತ್ತನೂರು ದಿಣ್ಣೆ ನಿವಾಸಿ ಸತೀಶ್‌ ಕುಮಾರ್‌(39), ಜೆ.ಸಿ.ನಗರ ಕುರುಬರಹಳ್ಳಿಯ ವಿ.ಶ್ರೀನಿವಾಸ್‌(46), ಭರತ್‌(28) ಹಾಗೂ ಮಹಾರಾಷ್ಟ್ರದ ಪುಣೆ ಮೂಲದ ಪ್ರಸನ್ನ ದತ್ತಾತ್ರೇಯ ಗರುಡ(36) ಬಂಧಿತರು.

ಆರೋಪಿಗಳಿಂದ 43 ಮೊಬೈಲ್‌ ಸಂಖ್ಯೆಗಳ ಸಿಡಿಆರ್‌ ವಿವರ ಹಾಗೂ ಕೆಲ ಎಲೆಕ್ಟ್ರಾನಿಕ್‌ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.

ಎಲ್ಲೆಲ್ಲಿ ದಾಳಿ?:  ಗೋವಿಂದರಾಜನಗರ ಬಳಿ ಪ್ರಶಾಂತ್‌ನಗರದಲ್ಲಿರುವ ಮಹಾನಗರಿ ಡಿಟೆಕ್ಟಿವ್‌ ಮತ್ತು ಸೆಕ್ಯೂರಿಟಿ ಸಲ್ಯೂಷನ್‌, ರಾಜಧಾನಿ ಕಾರ್ಪೋರೆಟ್‌ ಸರ್ವೀಸ್‌ ಹಾಗೂ ಬಸವೇಶ್ವರನಗರದಲ್ಲಿರುವ ಸ್ನೇಕ್‌ ಐಕ್ಯೂ ಸೆಲ್ಯೂಷನ್‌ ಪ್ರೈವೇಟ್‌ ಲಿಮಿಟೆಟ್‌ ಮತ್ತು ಎಲಿಗೆಂಟ್‌ ಡಿಟೆಕ್ಟಿವ್‌ ಏಜೆನ್ಸಿಗಳ ಮೇಲೆ ದಾಳಿ ನಡೆಸಲಾಗಿತ್ತು. ಆರೋಪಿಗಳ ಪೈಕಿ ಪುರುಷೋತ್ತಮ್‌, ರಾಜಧಾನಿ ಕಾರ್ಪೋರೆಷನ್‌ ಏಜೆನ್ಸಿ ಮಾಲೀಕನಾಗಿದ್ದು, ಸತೀಶ್‌ ಕುಆರ್‌ ಮಹಾನಗರಿ ಡಿಟೆಕ್ಟಿವ್‌ ಏಜೆನ್ಸಿ ಮತ್ತು ಶ್ರೀನಿವಾಸ ಹಾಗೂ ಭರತ್‌ ಸ್ನೇಕ್‌ ಐಕ್ಯೂ ಸೆಲ್ಯೂಷನ್‌ ಪ್ರೈವೇಟ್‌ ಲಿಮಿಟೆಟ್‌ ಮತ್ತು ಎಲಿಗೆಂಟ್‌ ಡಿಟೆಕ್ಟಿವ್‌ ಏಜೆನ್ಸಿಗಳ ಮಾಲೀಕರಾಗಿದ್ದಾರೆ. ಈ ಆರೋಪಿಗಳು ಏಜೆನ್ಸಿ ನಡೆಸಲು ಸರ್ಕಾರದಿಂದ ಯಾವುದೇ ಅನುಮತಿ ಪಡೆದಿಲ್ಲ ಎಂಬುದು ಗೊತ್ತಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಇನ್ನು ಆರೋಪಿಗಳ ಪೈಕಿ ಸತೀಶ್‌, ಈ ಹಿಂದೆ ರಾಜಧಾನಿ ಕಾರ್ಪೋರೆಷನ್‌ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲ ತಿಂಗಳ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದ ಈತ, ಮಹಾನಗರಿ ಡಿಟೆಕ್ಟಿವ್‌ ಏಜೆನ್ಸಿ ಆರಂಭಿಸಿದ್ದ. ಜನರನ್ನು ಬ್ಲ್ಯಾಕ್‌ವೆುàಲ್‌ ಮಾಡುತ್ತಿದ್ದ ಆರೋಪದಡಿ ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ ಎಂದು ಹೇಳಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

ಅಪರಾಧ, ಕೌಟುಂಬಿಕ ಕಲಹ, ವೈಷಮ್ಯ, ಹಣಕಾಸು ವ್ಯವಹಾರ ಸೇರಿ ಹಲವು ಬಗೆಯ ಪ್ರಕರಣಗಳ ದೂರುದಾರರು ಹಾಗೂ ಆರೋಪಿಗಳನ್ನು ಬಂಧಿತರು ಸಂಪರ್ಕಿಸುತ್ತಿದ್ದರು. ಪೊಲೀಸರು ಮಾಡುವ ಕೆಲಸಕ್ಕೆ ತಾವೇ ಮಾಡಿಕೊಡುವುದಾಗಿ ಹೇಳಿ ನಂಬಿಸುತ್ತಿದ್ದರು. ಆಂತರಿಕ ತನಿಖೆ ನಡೆಸಿ ಪುರಾವೆ ಸಮೇತ ವರದಿ ನೀಡುವುದಾಗಿ ಹೇಳುತ್ತಿದ್ದರು. ಅದಕ್ಕಾಗಿ ಶುಲ್ಕ ಸಹ ನಿಗದಿಪಡಿಸಿದ್ದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಗ್ರಾಹಕರ ಸೋಗಿನಲ್ಲಿ ದಾಳಿ: ಸಿಸಿಬಿ ಇನ್‌ಸ್ಪೆಕ್ಟರ್‌ ರಾಜು ನೇತೃತ್ವದ ತಂಡ ಆರೋಪಿಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ, 3 ಪ್ರತ್ಯೇಕ ತಂಡ ರಚಿಸಿಕೊಂಡು ಮೂರು ಎಜೆನ್ಸಿಗಳಮೇಲೆ ಏಕಕಾಲಕ್ಕೆ ಸಿಡಿಆರ್‌ ಬೇಕೆಂದು ಗ್ರಾಹಕರ ಸೋಗಿನಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.

ಸಿಡಿಆರ್‌ ಪಡೆಯುತ್ತಿದ್ದದ್ದು ಹೇಗೆ?

ನಗರದ ಖಾಸಗಿ ಏಜೆನ್ಸಿ ಮಾಲೀಕರು ಪುಣೆಯ ಪ್ರಸನ್ನ ದತ್ತಾತ್ರೆಯ ಗರುಡನನ್ನು ಸಂಪರ್ಕಿಸಿ, ನಿರ್ದಿಷ್ಟ ಮೊಬೈಲ್‌ ನಂಬರ್‌ ನೀಡಿ, ಅದರ ಸಿಡಿಆರ್‌ ಪಡೆಯುತ್ತಿದ್ದರು. ಅದಕ್ಕಾಗಿ ಆತನಿಗೆ 7-10 ಸಾವಿರ ರೂ. ನೀಡುತ್ತಿದ್ದರು. ಆದರೆ, ಏಜೆನ್ಸಿ ಮಾಲೀಕರು ಅದನ್ನು 30-40 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಹೀಗೆ ಅದನ್ನು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ವ್ಯಕ್ತಿ ಗಳಿಗೂ ಮಾರಾಟ ಮಾಡಿದ್ದಾರೆ. ಹೀಗಾಗಿ ಬಂಧಿ ತರ ಬ್ಯಾಂಕ್‌ ಖಾತೆಗಳ ಪರಿಶೀಲನೆ ನಡೆಯುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಪೊಲೀಸ್‌ ಅಧಿಕಾರಿಗಳು ಭಾಗಿ ಶಂಕೆ?:

ಯಾವುದೇ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಮೊಬೈಲ್‌ ಕರೆಗಳ ವಿವರ ಪಡೆಯಲು ಪೊಲೀಸ್‌ ಅಧಿಕಾರಿಗಳಿಗೆ ಮಾತ್ರ ಅಧಿಕಾರ ಇದೆ. ಅದರಲ್ಲೂ ಜಿಲ್ಲಾ ಮಟ್ಟದಲ್ಲಿ ಎಸ್ಪಿ ಹಾಗೂ ನಗರ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಆಯುಕ್ತರು ನೇಮಿಸಿರುವ ನೋಡಲ್‌ ಅಧಿಕಾರಿಗಳಿಗೆ (ಎಸಿಪಿ ಅಥವಾ ಡಿಸಿಪಿ) ಮಾತ್ರ ಅಧಿಕಾರ ಇದೆ. ಅವರ ಅನುಮತಿ ಪಡೆಯದೇ ಸಿಡಿಆರ್‌ ಪಡೆಯುವಂತಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆಯಿದ್ದು, ತನಿಖೆ ನಡೆ ಯುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next