Advertisement

ಕೆಲಸದ ಆಮಿಷವೊಡ್ಡಿ ದುಬೈ ಮೂಲದ ವ್ಯಕ್ತಿಗೆ ಮಹಿಳೆಯ ಮಾರಾಟ!

01:07 PM Jul 01, 2022 | Team Udayavani |

ಬೆಂಗಳೂರು: ದೂರದ ದುಬೈನ ಸೂಪರ್‌ ಮಾರ್ಕೆಟ್‌ನಲ್ಲಿ ಕೆಲಸ ಕೊಡಿಸುತ್ತೇನೆಂದು ಮಹಿಳೆಯೊಬ್ಬರಿಂದ ಒಂದೂವರೆ ಲಕ್ಷ ರೂ. ಪಡೆದುಕೊಂಡಿದ್ದ ಮಧ್ಯವರ್ತಿ ಮಹಿಳೆಯೊಬ್ಬರು ಆಕೆಯನ್ನು 1.30 ಲಕ್ಷ ರೂ.ಗೆ ದುಬೈ ಮೂಲದ ವ್ಯಕ್ತಿಗೆ ಮಾರಾಟ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ಹಳೇ ಹುಬ್ಬಳ್ಳಿ ಮೂಲದ ಮಹಿಳೆಯ ಪತಿ ಹಲಸೂರು ಪೊಲೀಸ್‌ ಠಾಣೆಯಲ್ಲಿ ಹಲಸೂರಿನ ಸ್ಟೆಲ್ಲಾ (50) ಎಂಬ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ ಪತಿಯ ನಿರಂತರ ಹೋರಾಟ ಹಾಗೂ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಶ್ರಮದಿಂದ ಶಾರ್ಜಾದ “ನರಕ’ದಲ್ಲಿದ್ದ ಗರ್ಭಿಣಿ ಮಹಿಳೆ ಇದೇ ಜೂನ್‌ 25ರಂದು ತವರಿಗೆ ಮರಳಿದ್ದಾರೆ. ಗರ್ಭದಲ್ಲಿರುವ ಮಗು ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ಸಿಸಿಟಿವಿಯಲ್ಲಿ ಸೆರೆ: ಕೇರಳ- ಆಡಳಿತಾರೂಢ ಸಿಪಿಐಎಂ ಕೇಂದ್ರ ಕಚೇರಿ ಮೇಲೆ ಬಾಂಬ್ ದಾಳಿ

ಹಳೇ ಹುಬ್ಬಳ್ಳಿಯಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ ದಂಪತಿಗೆ ಸ್ಥಳೀಯರಾದ ಲಿಲ್ಲಿ ಮತ್ತು ಆನಂದ್‌ ಹಾಗೂ ಚಂದ್ರ ಎಂಬುವರ ಮೂಲಕ ಸ್ಟೆಲ್ಲಾ ಪರಿಚಯವಾಗಿದ್ದು, ದಂಪತಿ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಆಗ ಸ್ಟೆಲ್ಲಾ ದುಬೈನ ಶಾರ್ಜಾದ ಸೂಪರ್‌ ಮಾರ್ಕೆಟ್‌ನಲ್ಲಿ ಕೆಲಸ ಕೊಡಿಸುತ್ತೇನೆ. ಮಾಸಿಕ 40-45 ಸಾವಿರ ರೂ. ವೇತನ ಕೊಡಿಸುತ್ತೇನೆಂದು ಹಂತ-ಹಂತವಾಗಿ ಒಂದೂವರೆ ಲಕ್ಷ ರೂ. ಪಡೆದುಕೊಂಡಿದ್ದಾಳೆ. ಮಾ.21ರಂದು ದಂಪತಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಆರೋಪಿತೆ, ಪತಿಗೆ “ನಿಮ್ಮ ವೀಸಾ ಬಂದಿಲ್ಲ. ಮರು ದಿನ ಬರುತ್ತದೆ. ಪತ್ನಿಯ ವೀಸಾ ಬಂದಿದೆ’ ಎಂದು ಆಕೆಯನ್ನು ಕಳುಹಿಸಿದ್ದಾಳೆ. ಆದರೆ, ಮೂರು ತಿಂಗಳಾದರೂ ದೂರುದಾರರನ್ನು ವಿದೇಶಕ್ಕೆ ಕಳುಹಿಸಿಲ್ಲ.

ಪತ್ನಿ ಗರ್ಭಿಣಿ: ಈ ಮಧ್ಯೆ “ಶಾರ್ಜಾಗೆ ಹೋದ ಕೆಲವೇ ದಿನಗಳಲ್ಲಿ ಮಹಿಳೆ ಗರ್ಭವತಿಯಾಗಿದ್ದಾಳೆ ಎಂಬುದು ಸ್ಟೆಲ್ಲಾ ಕಡೆಯಿಂದಲೇ ವಿಚಾರ ಗೊತ್ತಾಗಿ, ಕೂಡಲೇ ಪತ್ನಿಯನ್ನು ವಾಪಸ್‌ ಕರೆಸುವಂತೆ ಕೇಳಿಕೊಂಡೆ. ಆದರೆ, ಆಕೆ ಸರಿಯಾಗಿ ಸ್ಪಂದಿಸಿಲ್ಲ. ಆಕೆಯನ್ನು ಪರಿಚಯಿಸಿದ ಲಿಲ್ಲಿ ಮತ್ತು ಆನಂದ್‌ ಹಾಗೂ ಚಂದ್ರ ಎಂಬುವರು ಕೂಡ ನನಗೆ ಸಹಾಯ ಮಾಡಲಿಲ್ಲ’ ಎಂದು ದೂರುದಾರರು ಆರೋಪಿಸಿದ್ದಾರೆ.

Advertisement

ಊಟ ಕೊಡದೆ ಚಿತ್ರಹಿಂಸೆ: ದುಡಿಮೆಗೆಂದು ಹೋದ ಪತ್ನಿ ನಿಜವಾಗಲೂ “ನರಕ’ಯಾತನೆ ಅನುಭವಿಸಿದ್ದಾಳೆ. ಮೊಬೈಲ್‌ ಬಳಸಿದರೆ ಮಾಲೀಕರು ಬೈಯುತ್ತಿದ್ದರಂತೆ. ಈ ನಡುವೆ ತನ್ನ ಸಹೋದ್ಯೋಗಿ ಮಹಿಳೆಯೊಬ್ಬರ ಮೊಬೈಲ್‌ನಿಂದ ಕರೆ ಮಾಡಿ, “ನನಗೆ ತುಂಬ ಹಿಂಸೆಯಾಗುತ್ತಿದೆ. ಗರ್ಭಿಣಿ ಎಂದು ಗೊತ್ತಿದ್ದರೂ ಸರಿಯಾಗಿ ಊಟ ಕೊಡುವುದಿಲ್ಲ. ಹಸಿವಿನಿಂದ ಒದ್ದಾಡಿದರೆ ಎರಡು ಪೀಸು ಬ್ರೇಡ್‌ ಕೊಟ್ಟು ನಿಂದಿಸುತ್ತಾರೆ. ದೈಹಿಕವಾಗಿಯೂ ಹಲ್ಲೆ ನಡೆಸುತ್ತಿದ್ದಾರೆ. ಆರೋಗ್ಯ ಹದಗೆಡುತ್ತಿದೆ. ದಯವಿಟ್ಟು ನನ್ನನ್ನು ಕರೆದುಕೊಂಡು ಹೋಗಿ’ ಎಂದು ಪತ್ನಿ ಫೋನ್‌ನಲ್ಲಿಯೇ ಕಣ್ಣಿರು ಹಾಕಿದಳು ಎಂದು ಮಹಿಳೆಯ ಪತಿ “ಉದಯವಾಣಿ’ ಜತೆ ಮಾತನಾಡುವಾಗ ಭಾವುಕರಾದರು.

ಭಾರತೀಯ ರಾಯಭಾರ ಕಚೇರಿ ನೆರವು: “ಪತ್ನಿಯ ಕರೆಯನ್ನಾಧರಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತರು ಹಾಗೂ ಬೆಂಗಳೂರಿನ ಪೂರ್ವ ವಿಭಾಗದ ಡಿಸಿಪಿಯವರನ್ನು ಸಂಪರ್ಕಿಸಿದ್ದೆ. ಉತ್ತಮವಾಗಿ ಸ್ಪಂದಿಸಿದರು. ಬಳಿಕ ಕೋರಮಂಗಲದಲ್ಲಿರುವ ಪಾಸ್‌ಪೋರ್ಟ್‌ ಕಚೇರಿಗೆ ದೂರು ನೀಡಿದಾಗ, ಕೂಡಲೇ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳನ್ನು ಇ-ಮೇಲ್‌ ಮೂಲಕ ಸಂಪರ್ಕಿಸಿದರು. ಬಳಿಕ ಶಾರ್ಜಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ಮಾಹಿತಿ ನೀಡಿ, ಪತ್ನಿಯನ್ನು ಜೂನ್‌ 25ರಂದು ತವರಿಗೆ ಕಳುಹಿಸಿದರು’ ಎಂದು ಅವರು ವಿವರಿಸಿದರು.

1.30 ಲಕ್ಷಕ್ಕೆ ಮಹಿಳೆ ಮಾರಾಟ!?: “ಪತ್ನಿ ಗರ್ಭಿಣಿಯಾಗಿದ್ದಾಳೆಂದು ತಿಳಿಯುತ್ತಿದ್ದಂತೆ ಕೂಡಲೇ ಸೂಪರ್‌ ಮಾರ್ಕೆಟ್‌ ಮಾಲೀಕನ ಮೊಬೈಲ್‌ ನಂಬರ್‌ ಪಡೆದು ಕರೆ ಮಾಡಿ ಕಳುಹಿಸುವಂತೆ ಕೇಳಿದೆ. ಆದರೆ, ಈಕೆಯನ್ನು ಕರೆಸಿಕೊಳ್ಳಲು ಸ್ಟೆಲ್ಲಾಗೆ 1.30 ಲಕ್ಷ ರೂ. ಕೊಟ್ಟಿದ್ದೇನೆ. ಆ ಹಣ ಕೊಟ್ಟು ಕರೆದೊಯ್ಯುವಂತೆ ಧಮ್ಕಿ ಹಾಕಿದ್ದ. ಈ ಬಗ್ಗೆ ಸ್ಟೆಲ್ಲಾ ಕೂಡ ತಮಗೆ ಹೇಳಿರಲಿಲ್ಲ. ಪತ್ನಿಗೆ 2 ತಿಂಗಳ ವೇತನ ಕೊಟ್ಟಿಲ್ಲ. ಅದನ್ನು ವಜಾ ಮಾಡಿಕೊಂಡು ಕೂಡಲೇ ಕಳುಹಿಸುವಂತೆ ಬೇಡಿಕೊಂಡೆ. ಆತ ಕರಗಲಿಲ್ಲ. ಕೊನೆಗೆ ಪೊಲೀಸರು, ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಸಹಾಯದಿಂದ ಪತ್ನಿ ಮನೆಗೆ ಬಂದಿದ್ದಾಳೆ ಎಂದು ಪತಿ ವಿವರಿಸಿದರು.

ವಿದೇಶಕ್ಕೆ ಕಳುಹಿಸುವುದಾಗಿ ವಂಚನೆ ಹಾಗೂ ಪತ್ನಿಯನ್ನು ಅಕ್ರಮವಾಗಿ ಶಾರ್ಜಾಗೆ ಕಳುಹಿಸಿದ ಸ್ಟೆಲ್ಲಾ ಎಂಬಾಕೆ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೂರುದಾರ ಹೇಳಿದ್ದಾರೆ. ಹೀಗಾಗಿ ಮಹಿಳೆ ಬಂದ ನಂತರ ಆಕೆಯ ಹೇಳಿಕೆ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗುತ್ತದೆ.-  ಭೀಮಾಶಂಕರ್‌ ಗುಳೇದ್‌, ಪೂರ್ವ ವಿಭಾಗದ ಡಿಸಿಪಿ

ಮೋಹನ್‌ ಭದ್ರಾವತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next