Advertisement

ಹೆಚ್ಚಿನ ದರದಲ್ಲಿ ರಸಗೊಬ್ಬರ, ಬಿತ್ತನೆ ಬೀಜ ಮಾರಾಟ

05:20 PM May 10, 2022 | Team Udayavani |

ಮುದಗಲ್ಲ: ಮುಂಗಾರು ಹಂಗಾಮು ಆರಂಭವಾಗುತ್ತಿರುವ ಸಂದರ್ಭದಲ್ಲಿ ರೈತರ ಸಮಸ್ಯೆಗಳು ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇವೆ. ರಸಗೊಬ್ಬರ, ಬಿತ್ತನೆ ಬೀಜಗಳ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದು ಒಂದೆಡೆಯಾದರೆ, ಕಳೆದ ಎರಡ್ಮೂರು ತಿಂಗಳ ಹಿಂದೆ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿದ ಧಾನ್ಯಗಳ ಹಣವನ್ನು ರೈತರ ಖಾತೆಗೆ ಜಮಾ ಮಾಡದೇ ಇರುವುದು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಮರಣ್ಣ ಗುಡಿಹಾಳ ಹೇಳಿದರು.

Advertisement

ಸೋಮವಾರ ಮಾಧ್ಯಮ ದವರೊಂದಿಗೆ ಅವರು ಮಾತನಾಡಿ, ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಜಿಲ್ಲೆಯಲ್ಲಿ ರೈತರ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಜಿಲ್ಲೆಯಲ್ಲಿ ರೈತರ ಹೋರಾಟ ಮಾಡಬೇಕಾಗುತ್ತದೆ ಎಂದರು.

ಮುಂಗಾರಿಗೆ ಖಾಸಗಿ ಬೀಜ ಗೊಬ್ಬರ ಮಾರಾಟಗಾರರು ಕಳೆದ ವರ್ಷಕ್ಕಿಂತ ದುಪ್ಪಟ್ಟು ಬೆಲೆಗೆ ಸೂರ್ಯಕಾಂತಿ ಬೀಜ ಮಾರಾಟ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ಪ್ರತಿ ಚೀಲ ಗೊಬ್ಬರಕ್ಕೆ 2,700 ರೂ. ಸಬ್ಸಿಡಿ ನೀಡುತ್ತಿದ್ದು, ಪ್ರತಿ ರೈತರಿಂದ 1,300 ರೂ. ಪಡೆದು ಗೊಬ್ಬರ ನೀಡಲಾಗುತ್ತಿದೆ. ಈ ರೀತಿಯಾದ ಸರಕಾರದ ಸಬ್ಸಿಡಿ ದರಗಳಿದ್ದರೂ ಹೆಚ್ಚಿನ ಹಣ ನೀಡಿದರೂ ಗೊಬ್ಬರ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಇನ್ನೂ ಮಳೆಯಾಗಿಲ್ಲ. ಕಡಲೆ, ತೊಗರಿ ಅಲ್ಪಸ್ವಲ್ಪ ಬೆಳೆಯನ್ನು ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿ ಎರಡ್ಮೂರು ತಿಂಗಳು ಗತಿಸಿದ್ದರೂ ಮಾರುಕಟ್ಟೆ ಫೆಡರೇಷನ್‌ದವರು ರೈತರಿಗೆ ಹಣ ಪಾವತಿ ಮಾಡುತ್ತಿಲ್ಲ. ಇದಕ್ಕೆ ಫೆಡರೇಷನ್‌ ಮತ್ತು ಸಹಕಾರಿ ಸಂಸ್ಥೆಯವರು ದಾಖಲೆಯ ನೆಪದಲ್ಲಿ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದರು.

ಬ್ಯಾಂಕ್‌ ಖಾತೆಗಳ ನೆಪದಲ್ಲಿ ಇದನ್ನು ಮುಂದೂಡುತ್ತಿದ್ದಾರೆ. ಒಂದು ಕಡೆ ರಸಗೊಬ್ಬರ, ಬೀಜ ಸಿಗದ ಹಾಗೆ ಮಾಡುತ್ತಿದ್ದು, ಇನ್ನೊಂದೆಡೆ ಹಣ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿಗಳು ರಸಗೊಬ್ಬರ ಮತ್ತು ಬೀಜ ಮಾರಾಟಗಾರರ ಸಭೆ ಕರೆದು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕೆಂದು ಎಚ್ಚರಿಕೆ ನೀಡಬೇಕು ಎಂದರು.

ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಇಲ್ಲಿಯವರೆಗೆ ಯಾವ ಬೀಜಗಳನ್ನು ದಾಸ್ತಾನು ಮಾಡಿರುವುದಿಲ್ಲ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಕಳೆದ ವರ್ಷಕ್ಕಿಂತ ದುಪ್ಪಟ್ಟು ದರ ಮಾರಾಟ ಮಾಡುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಒಂದು ಅಂಗಡಿಯನ್ನು ಸಂದರ್ಶಿಸುವ ಗೋಜಿಗೆ ಹೋಗಿಲ್ಲ. ಯಾವ-ಯಾವ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಕೂಡ ಕೃಷಿ ಇಲಾಖೆ ಅಧಿಕಾರಿಗಳಿಗಿಲ್ಲ. ಕಾಟಾಚಾರದ ಅಂಕಿ-ಸಂಖ್ಯೆಗಳನ್ನು ಮೇಲಧಿಕಾರಿಗಳಿಗೆ ತಿಳಿಸುತ್ತಿದ್ದಾರೆ. ಜಿಲ್ಲಾ ಧಿಕಾರಿಗಳು ಜಿಲ್ಲೆಯ ರೈತರ ಸಮಸ್ಯೆಗೆ ಸ್ಪಂದಿಸುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಮತ್ತು ಖಾಸಗಿ ಮಾರಾಟಗಾರರ ಸಭೆ ಕರೆದು ಮುಂದಾಗಬೇಕೆಂದು ಒತ್ತಾಯಿಸಲಾಗಿದೆ. ಇಲ್ಲವಾದಲ್ಲಿ ರೈತರು ತೀವ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಸಂಘದ ಜಿಲ್ಲಾ ಉಪಾದ್ಯಕ್ಷ ಬಸನಗೌಡ ಮಟ್ಟೂರ, ಹುಸೇನ್‌ ನಾಯ್ಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next