Advertisement

ರಂಗಭೂಮಿ ಕಲೆಯಿಂದ ಆತ್ಮತೃಪ್ತಿ: ಚಂದ್ರು

05:12 PM Sep 08, 2018 | |

ಶಿವಮೊಗ್ಗ: ರಂಗಭೂಮಿ ಒಂದು ಜೀವಂತ ಕಲೆ. ಇದರಲ್ಲಿ ಸಿಗುವ ಆನಂದ ಬೇರೆ ಯಾವ ಕ್ಷೇತ್ರದಲ್ಲೂ ಸಿಗಲಾರದು
ಎಂದು ಹಿರಿಯ ರಂಗಕರ್ಮಿ, ನಟ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

Advertisement

ಶುಕ್ರವಾರ ಪ್ರಸ್‌ ಟ್ರಸ್ಟ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಕಿರುತೆರೆ, ಸಿನಿಮಾ ಈ
ಎಲ್ಲ ಕ್ಷೇತ್ರಗಳಿಗಿಂತ ರಂಗಭೂಮಿ ಮುಖ್ಯವಾದುದು, ಇದು ತಾಯಿ ಬೇರು ಇದ್ದಂತೆ. ಇದು ಬದುಕನ್ನು ಕಲಿಸಿಕೊಡುತ್ತದೆ.
ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು, ಕೀರ್ತಿ, ಹಣ ಎಲ್ಲವೂ ಸಿಗುತ್ತದೆ. ಆದರೆ ಆತ್ಮತೃಪ್ತಿ ಸಿಗುವುದು ರಂಗಭೂಮಿಯಲ್ಲಿ ಮಾತ್ರ ಎಂದರು.

 ಸುಮಾರು 500 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕಿರುತೆರೆಯಲ್ಲೂ ನಟಿಸಿದ್ದೇನೆ. ಆದರೆ ನನಗೆ ರಂಗಭೂಮಿ ಅತ್ಯಂತ ತೃಪ್ತಿ ತಂದಿದೆ. ಅದರಲ್ಲೂ ಮುಖ್ಯಮಂತ್ರಿ ನಾಟಕ ದಾಖಲೆಯತ್ತ ಸಾಗಿದ್ದು 700ನೇ ಪ್ರದರ್ಶನದತ್ತ ದಾಪುಗಾಲು ಇಟ್ಟಿದೆ. 700 ಪ್ರದರ್ಶನಗಳಲ್ಲೂ ನಾನೇ ಅಭಿನಯಿಸಿರುವುದು ಗಿನ್ನಿಸ್‌ ದಾಖಲೆಗೆ ಸೇರಲಿದೆ ಎಂದರು.

ಚಂದ್ರಶೇಖರ ಎಂಬ ನನಗೆ ಮುಖ್ಯಮಂತ್ರಿ ಹೆಸರು ಅಂಟಿಕೊಂಡಿದ್ದೇ ಒಂದು ಸ್ವಾರಸ್ಯಕರವಾದ ವಿಷಯ. ಮುಖ್ಯಮಂತ್ರಿ ನಾಟಕದ ಪಾತ್ರಧಾರಿ ಹುಷಾರಿಲ್ಲದ ಕಾರಣ ಬಂದಿರಲಿಲ್ಲ. ಕೊನೆಗೆ ಆ ಪಾತ್ರದಲ್ಲಿ ಅಭಿನಯಿಸಲು
ನನಗೆ ತಿಳಿಸಿದರು. ಕೊನೆಗೂ ಒಪ್ಪಿಕೊಂಡು ಅಭಿನಯಿಸಿದೆ. ಅದೇ ಪಾತ್ರ ನನ್ನನ್ನು ಇಲ್ಲಿವರೆಗೂ ತಂದು ನಿಲ್ಲಿಸಿದೆ.
 
 ಮುಖ್ಯಮಂತ್ರಿ ಹೆಸರು ತೆಗೆಯಲು ಚರ್ಚೆ: ಶಾಸಕನಾಗಿ ಆಯ್ಕೆಯಾದಾಗ ಒಂದೇ ಸದನದಲ್ಲಿ ಇಬ್ಬರು ಮುಖ್ಯಮಂತ್ರಿ ಇರುವ ಹಾಗಿಲ್ಲ ಎಂಬ ಚರ್ಚೆ ಶುರುವಾಯಿತು. ಇದು ನಾನು ಇಟ್ಟುಕೊಂಡಿರುವುದಲ್ಲ ಜನ ಕೊಟ್ಟಿರುವುದು ಎಂದು ತಿಳಿಸಿದೆ. ಆಗ ಸಿಎಂ ಜೆ.ಎಚ್‌. ಪಟೇಲರು ಈ ಬಗ್ಗೆ ಸುದೀರ್ಘ‌ ಚರ್ಚೆ ನಡೆಸಿದರು. ಕೊನೆಗೆ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿ ಮುಖ್ಯಮಂತ್ರಿ ಚಂದ್ರು ಎಂಬ ಹೆಸರನ್ನೇ ಅಧಿಕೃತಗೊಳಿಸಲಾಯಿತು. ನಂತರ ನಾನು ನನ್ನ ಎಲ್ಲ ಸರ್ಟಿಫಿಕೇಟ್‌ಗಳಲ್ಲೂ ಹೆಸರು ಬದಲಾವಣೆ ಮಾಡಿಕೊಂಡೆ ಎಂದರು.

700 ನೇ ಪ್ರದರ್ಶನ: ಮುಖ್ಯಮಂತ್ರಿ ನಾಟಕ ಕಲಾಗಂಗೋತ್ರಿಯಿಂದ ಸುಮಾರು 47 ವರ್ಷಗಳಿಂದ ಪ್ರದರ್ಶನಗೊಳ್ಳುತ್ತಿದೆ. ರಾಜ್ಯ, ದೇಶ, ವಿದೇಶಗಳಲ್ಲೂ ಪ್ರದರ್ಶನಗೊಂಡಿದೆ. ಡಿ.4ರಂದು ಬೆಂಗಳೂರಿನಲ್ಲಿ 700ನೇ ಪ್ರದರ್ಶನ ಕಾಣಲಿದೆ. ಸುಮಾರು 24 ಪಾತ್ರಗಳು ನಾಟಕದಲ್ಲಿ ಬರುತ್ತವೆ. ಆದರೆ ಹಲವು ಪಾತ್ರಧಾರಿಗಳು ತೀರಿಹೋಗಿದ್ದಾರೆ. ಸುಮಾರು 200 ಮಂದಿ ಇದೇ ರೀತಿ ಬದಲಾವಣೆಯಾಗಿದ್ದಾರೆ. ಆದರೆ ಮುಖ್ಯಮಂತ್ರಿ ಪಾತ್ರದಲ್ಲಿ ನಾನೊಬ್ಬನೇ ಮುಂದುವರೆದಿದ್ದೇನೆ ಎಂದರು.

Advertisement

 ಇದೊಂದು ರಾಜಕೀಯ ವಿಡಂಬನೆ ನಾಟಕವಾಗಿದ್ದು ಎಲ್ಲ ಕಾಲಕ್ಕೂ ಸಲ್ಲುತ್ತದೆ. ಸುಮಾರು 13 ಮುಖ್ಯಮಂತ್ರಿಗಳು ಇದನ್ನು ನೋಡಿದ್ದಾರೆ. ಒಮ್ಮೆ ಗುಂಡೂರಾವ್‌, ಎಚ್‌.ಡಿ.ದೇವೇಗೌಡ, ಡಾ| ರಾಜ್‌ಕುಮಾರ್‌ ನಾಟಕ ನೋಡಲು ಬಂದಿದ್ದರು. ನಾಟಕ ಮುಗಿದ ಮೇಲೆ ಗುಂಡೂರಾವ್‌ ಅವರು ನೀವು ಮಾಡಿರುವುದು ಬರೀ 30 ಪರ್ಸೆಂಟ್‌ ಅಷ್ಟೇ
ಇನ್ನೂ 70 ಪರ್ಸೆಂಟ್‌ ಇದೆ ಎಂದಿದ್ದರು.

ಹಲವರು ಇನ್ನೂ ಹೆಚ್ಚಿನದನ್ನು ಸೇರಿಸಬೇಕು ಎಂದಿದ್ದಾರೆ. ಕಾಲ ಕಾಲಕ್ಕೆ ತಕ್ಕಂತೆ ಡೈಲಾಗ್ಸ್‌ ಬದಲಾವಣೆಯಾಗಿದೆ. ಒಂದು ನಾಟಕದಲ್ಲಿ ಮಾಡಿದಂತೆ ಇನ್ನೊಂದು ನಾಟಕದಲ್ಲಿ ಮಾಡಲು ಆಗಲ್ಲ ಎಂದರು. 

 ಈ ನಾಟಕವು ಸೆ.8ರಂದು ಶೃಂಗೇರಿಯಲ್ಲಿ, 9ರಂದು ತೀರ್ಥಹಳ್ಳಿಯಲ್ಲಿ ಪ್ರದರ್ಶನ ಕಾಣಲಿದೆ. ಡಾ| ಬಿ.ವಿ.ರಾಜಾರಾಂ ನಿರ್ದೇಶಿಸಿದ್ದು, ಮಂಜುನಾಥ್‌ ಹೆಗ್ಡೆ, ಶ್ರೀನಿವಾಸ್‌ ಮೇಷ್ಟ್ರು, ಮುರಳೀಧರ್‌, ಗಂಗೋತ್ರಿ ಮಂಜು ಸೇರಿದಂತೆ ಹಲವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next