Advertisement

ತಿಳವಳ್ಳಿ ತಾಲೂಕಿಗಾಗಿ ಸ್ವಯಂಘೋಷಿತ ಬಂದ್‌-ಮನವಿ

05:41 PM Jun 21, 2022 | Team Udayavani |

ಹಾನಗಲ್ಲ: ತಿಳವಳ್ಳಿ ಗ್ರಾಮ ತಾಲೂಕು ಕೇಂದ್ರವನ್ನಾಗಿ ಪರಿವರ್ತಿಸುವಂತೆ ಒತ್ತಾಯಿಸಿ ತಿಳವಳ್ಳಿ ತಾಲೂಕು ರಚನಾ ಸಮಿತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆ ಸ್ವಯಂಘೋಷಿತ ಬಂದ್‌ ನಡೆಸಿ ಉಪ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಸೋಮವಾರ ಬೆಳಗ್ಗೆ ತಿಳವಳ್ಳಿ ಫಾರೆಸ್ಟ್‌ ಗೇಟ್‌ ನಿಂದ ಪ್ರಮುಖ ಬೀದಿಗಳ ಮೂಲಕ ನಾ.ಸು. ಹರ್ಡಿಕರ ವೃತ್ತದವರೆಗೆ ಮೆರವಣಿಗೆ ನಡೆಸಿ ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ತಿಳವಳ್ಳಿ ತಾಲೂಕು ರಚನಾ ಸಮಿತಿ ಅಧ್ಯಕ್ಷ ಹನುಮಂತಪ್ಪ ಶಿರಾಳಕೊಪ್ಪ ಮಾತನಾಡಿ, ತಾಲೂಕಿನ ಸುತ್ತಲಿನ 21ಕ್ಕೂ ಹೆಚ್ಚು ಗ್ರಾಪಂ ವ್ಯಾಪ್ತಿಯ ಸುಮಾರು 72 ಗ್ರಾಮಗಳ ನಾಗರಿಕರು ಕಳೆದ 30 ವರ್ಷದಿಂದ ತಿಳವಳ್ಳಿಯನ್ನು ತಾಲೂಕು ಕೇಂದ್ರವಾಗಿ ಪರಿವರ್ತಿಸಲು ವಿವಿಧ ಹೋರಾಟ ನಡೆಸುತ್ತ ಸರ್ಕಾರ ಹಾಗೂ ನಿಯೋಗಗಳಿಗೆ ವರದಿ ಸಲ್ಲಿಸಲಾಗಿದೆ. ತಿಳವಳ್ಳಿ ಭೌಗೋಳಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹೀಗೆ ತಾಲೂಕಿಗೆ ಬೇಕಾದ ಎಲ್ಲ ಅರ್ಹತೆಗಳೂ ಇವೆ ಎಂದರು.

ಈಗಾಗಲೇ 1994ರಲ್ಲಿ ಹುಂಡೇಕಾರ ಆಯೋಗ ತಿಳವಳ್ಳಿ ತಾಲೂಕು ಕೇಂದ್ರವಾಗಲು ಸೂಕ್ತವಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಹಿರೇಕೆರೂರ, ಬ್ಯಾಡಗಿ, ಹಾನಗಲ್ಲ ತಾಲೂಕಿನ ಮಧ್ಯ ಭಾಗದಲ್ಲಿ ತಿಳವಳ್ಳಿ ಗ್ರಾಮ ಇರುವುದರಿಂದ ಇದು ತಾಲೂಕು ಆದಲ್ಲಿ 21 ಗ್ರಾಪಂ ವ್ಯಾಪ್ತಿಯ 7 ಗ್ರಾಮಗಳ 1,40,000 ಜನರಿಗೆ ಕೇವಲ 3 ರಿಂದ 15 ಕಿ.ಮೀ ಅಂತರದಲ್ಲಿ ತಾಲೂಕಿನ ಎಲ್ಲ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂದರು.

ಸಮಿತಿ ಉಪಾಧ್ಯಕ್ಷ ಹನುಮಂತಪ್ಪ ಕಲ್ಲೇರ ಮಾತನಾಡಿ, ಹಿಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಅವರಿಗೆ ತಿಳವಳ್ಳಿ ಗ್ರಾಮ ತಾಲೂಕು ಎಂದು ಪರಿವರ್ತಿಸಲು ಮನವಿ ಸಲ್ಲಿಸಲಾಗಿದೆ. ಅವರು ತಿಳವಳ್ಳಿ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

Advertisement

2017, ಡಿ.2ರಂದು ಮುಖ್ಯಮಂತ್ರಿಗಳು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದು ಇದೆ. ಈ ಎಲ್ಲ ವಿಷಯ ಪರಿಗಣಿಸಿ ತಿಳವಳ್ಳಿಯನ್ನು ತಾಲೂಕು ಕೇಂದ್ರವಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿದರು.

ಬಿ.ವಿ. ಬಿರಾದಾರ ಮಾತನಾಡಿ, ತಿಳವಳ್ಳಿ ತಾಲೂಕು ಕೇಂದ್ರವಾಗಿ ಪರಿವರ್ತಿಸಲು ತಿಳವಳ್ಳಿ, ಚಿಕ್ಕಾಂಶಿ ಹೊಸೂರ, ಗೊಂದಿ, ಶಿರಗೋಡ, ಹೊಂಕಣ, ಕಲ್ಲಾಪುರ, ಉಪ್ಪುಣಸಿ, ಶ್ಯಾಡಗುಪ್ಪಿ, ಮಲಗುಂದ, ಕೂಸನೂರ, ಹೇರೂರ, ಹಿರೇಹುಲ್ಲಾಳ, ಕೆಲವರಕೊಪ್ಪ, ಸೋಮಸಾಗರ, ಕಿರವಾಡಿ, ಸೂಡಂಬಿ, ಚಿಕ್ಕಬಾಸೂರ, ಘಾಲಪೂಜಿ, ಕಚವಿ, ಸಾತೇನಹಳ್ಳಿ, ಮಡ್ಲೂರ ಗ್ರಾಪಂಯ 72 ಗ್ರಾಮಗಳ ನಾಗರಿಕರು ನಿಯೋಜಿತ ತಿಳವಳ್ಳಿ ತಾಲೂಕಿಗೆ ಸೇರ್ಪಡೆಯಾಗಲು ಒಪ್ಪಿಗೆ ಹಾಗೂ ಬೆಂಬಲ ಸೂಚಿಸಿದ್ದಾರೆ ಎಂದರು.

ತಿಳವಳ್ಳಿ ಹಾಗೂ ಸುತ್ತಲಿನ ಎಲ್ಲ 7 ಗ್ರಾಮಗಳ ಆಟೋ, ಟೆಂಪೋ ಚಾಲಕರ ಸಂಘ, ವರ್ತಕರ ಸಂಘ, ರೈತ ಪದಾಧಿ ಕಾರಿಗಳು, ಹೋಟೆಲ್‌ ಮಾಲೀಕರ ಸಂಘ, ಅಂಜುಮನ್‌-ಎ-ಇಸ್ಲಂ ಕಮಿಟಿ, ಟ್ರ್ಯಾಕ್ಟರ್‌ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿ ಯಶಸ್ವಿಗೊಳಿಸಿದರು.

ಈ ವೇಳೆ ಬಸವರಾಜ ಹಾದಿಮನಿ, ಸುನೀಲ ಬಾರ್ಕಿ, ಆರೀಫ್‌ ಅಹ್ಮದ ಲೋಹಾರ, ರಾಜಣ್ಣ ಶೇಷಗಿರಿ, ಶಿವಲಿಂಗಪ್ಪ ತಲ್ಲೂರ, ಫಯಾಜಅಹ್ಮದ ಲೋಹಾರ, ಗುತ್ತೆಪ್ಪ ಬಾರ್ಕಿ, ಡಾ| ಸುನೀಲ ಹಿರೇಮಠ, ಬಸವರಾಜ ನರೇಂದ್ರ, ಭರ್ಮಣ್ಣ ಕುರುಬರ, ಮಹದೇವಪ್ಪ ತಳವಾರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next