Advertisement

ಮಹಿಳಾ ಸ್ವಾವಲಂಬನೆಗೆ ಸ್ವಉದ್ಯೋಗ ತರಬೇತಿ ಅವಶ್ಯ

05:51 PM Feb 01, 2022 | Team Udayavani |

ಹುಬ್ಬಳ್ಳಿ: ಮಹಿಳೆಯರು ಸ್ವ-ಉದ್ಯೋಗ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಲು ತರಬೇತಿ ಶಿಬಿರಗಳು ಅತ್ಯವಶ್ಯಕವಾಗಿವೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

Advertisement

ಅಯೋಧ್ಯೆ ನಗರ ಅಂಬೇಡ್ಕರ್‌ ಕಾಲೋನಿ ಡಾ| ಬಿ.ಆರ್‌. ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ, ಡಾ| ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ 2021-22ನೇ ಸಾಲಿನ ಕೌಶಲಾಭಿವೃದ್ಧಿ ಮತ್ತು ಆದಾಯ ಗಳಿಕೆಗಾಗಿ ಹಮ್ಮಿಕೊಂಡಿದ್ದ 30 ಫಲಾನುಭವಿಗಳಿಗೆ ತರಬೇತಿ ಶಿಬಿರ ಉದ್ಘಾಟಿಸಿ ಹಾಗೂ ತರಬೇತಿ ಪಡೆದ 30 ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಿ ಅವರು ಮಾತನಾಡಿದರು.

ಸರಕಾರಿ ಸವಲತ್ತು ಪಡೆದ ಫಲಾನುಭವಿಗಳು ಅದನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಅಧಿಕಾರಿಗಳು ಪ್ರತಿ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಇದರಿಂದ ಸವಲತ್ತುಗಳ ದುರ್ಬಳಕೆಗೆ ಕಡಿವಾಣ ಹಾಕಿದಂತಾಗಲಿದೆ ಎಂದರು.

ಲಿಡ್ಕರ ನಿಗಮದ ಅಧ್ಯಕ್ಷನಾಗಿದ್ದ ವೇಳೆ ರಾಜ್ಯದಲ್ಲಿ ಚರ್ಮ ಕೈಗಾರಿಕೆ ಪ್ರೋತ್ಸಾಹಿಸಲು ಹಾಗೂ ತರಬೇತಿ ಪಡೆದ ಫಲಾನುಭವಿಗಳಿಗೆ ಹೊಲಿಗೆ ಯಂತ್ರದ ಜೊತೆಗೆ ಸ್ವ ಉದ್ಯೋಗ ಕೈಗೊಳ್ಳಲು ಅಗತ್ಯ ಸಾಲ ಸೌಲಭ್ಯ, ಉತ್ಪನ್ನಗಳ ಮಾರುಕಟ್ಟೆ ಬಗ್ಗೆ ಮಾರ್ಗದರ್ಶನ ಸೇರಿದಂತೆ ಅಗತ್ಯ ಸಹಕಾರ ನೀಡಿ ಪ್ರೋತ್ಸಾಹಿಸಲು ಯೋಜನೆ ರೂಪಿಸಲಾಗಿತ್ತು ಎಂದು ಹೇಳಿದರು.

ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಲಿಡ್ಕರ ಕಾಲೋನಿಗಳ ಪ್ರಗತಿಗೆ ವಿಶೇಷ ಆಸಕ್ತಿ ವಹಿಸಿ ಮೂಲಸೌಕರ್ಯಗಳನ್ನು ಒದಗಿಸಿದ್ದು, ನನ್ನ ಮತಕ್ಷೇತ್ರ ವ್ಯಾಪ್ತಿಯ ಢೋರಗಲ್ಲಿ ಹಾಗೂ ಘೋಡಕೆ ಓಣಿಯಲ್ಲಿ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಎರಡು ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಶ್ರೀರಾಮ ಕಾಲೋನಿಯಲ್ಲಿ 2 ಕೋಟಿ ರೂ. ವೆಚ್ಚದ ಸುಸಜ್ಜಿತ ಸಮುದಾಯ ಭವನದ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೇ, ಪಡದಯ್ಯನ ಹಕ್ಕಲದಲ್ಲಿ 9 ಕೋಟಿ ರೂ. ವೆಚ್ಚದ
ಡಾ| ಬಾಬು ಜಗಜೀವನರಾಂ ಭವನ ಕಾಮಗಾರಿ ಸಹ ಶೀಘ್ರ ಪೂರ್ಣಗೊಳ್ಳಲಿದೆ ಎಂದರು.

Advertisement

ಮುಖಂಡ ಗುರುನಾಥ ಉಳ್ಳಿಕಾಶಿ, ಲಿಡ್ಕರ ಅಧಿಕಾರಿ ಎ.ಎಸ್‌. ರುದ್ರೇಶ ಮಾತನಾಡಿದರು. ಹುಡಾ ಮಾಜಿ ಸದಸ್ಯ ಪ್ರಭು ಪ್ರಭಾಕರ, ಮುಖಂಡ ಸೈಯದ್‌ ಸಲೀಂ ಮುಲ್ಲಾ, ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ನಂದಾ ಹಣಬರಟ್ಟಿ, ಲಿಡ್ಕರ ಅಧಿಕಾರಿ ಮಂಜುನಾಥ, ವಿಮಲಬಾಯಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next