Advertisement

ಹಾಲಿನ ವ್ಯಾಪಾರದಲ್ಲಿ ಯಶಸ್ಸು ಕಂಡ ಸ್ನಾತಕೋತ್ತರ ಪದವೀಧರ

10:13 AM Dec 01, 2021 | Team Udayavani |

ದಾಂಡೇಲಿ : ಅವರು ಸ್ನಾತಕೋತ್ತರ ಪದವಿಯನ್ನು ಪಡೆದ ಯುವಕ. ಬಹಳಷ್ಟು ಉದ್ಯೋಗದ ಅವಕಾಶಗಳು ಬಂದಿತ್ತಾದರೂ, ಅದನ್ನು ನಯವಾಗಿ ತಿರಸ್ಕರಿಸಿ, ಇದ್ದೂರಿನಲ್ಲಿದ್ದುಕೊಂಡೆ ಬದುಕು ಕಟ್ಟಿಕೊಳ್ಳಬೇಕೆಂದು ಬಯಸಿ, ಸ್ವ ಉದ್ಯೋಗದ ಮೂಲಕ ಸ್ವತಂತ್ರ ಸ್ವಾವಲಂಭಿಯಾಗಿ ಯಶಸ್ಸಿನೆಡೆಗೆ ಹೆಜ್ಜೆಯಿಟ್ಟ ಶ್ರಮಸಾಧಕನನ್ನು ಪರಿಚಯಿಸುವ ಸಣ್ಣ ಪ್ರಯತ್ನ.

Advertisement

ಈ ಶ್ರಮ ಸಾಧಕ ಬೇರೆ ಯಾರು ಅಲ್ಲ. ವಿದ್ಯಾರ್ಥಿ ದೆಸೆಯಲ್ಲೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಹಲವಾರು ಸಾಮಾಜಿಕ ಹೋರಾಟ, ಚಳುವಳಿಗಳನ್ನು ಹಮ್ಮಿಕೊಂಡು ಸಮಾಜಮುಖಿಯಾಗಿ ಬೆಳೆದಿರುವ ಹಾಗೂ ಸೇವಾ ಸಂಕಲ್ಪ ತಂಡದ ಮೂಲಕ ಕೊರೊನಾ ಸಂಕಷ್ಟದ ಸಮಯದಲ್ಲಿ ಸದ್ದಿಲ್ಲದೆ ಸೇವಾ ಕೈಂಕರ್ಯವನ್ನು ನಡೆಸಿದ ಈಗಲೂ ಸೇವೆಗಾಗಿಯೆ ಹಾತೊರೆಯುವ ಯುವಕ. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾಗಿರುವ ಸುಧೀರ ಶೆಟ್ಟಿಯವರೆ ಸ್ವಾವಲಂಬಿ ಬದುಕು ನಡೆಸಲು ಹೆಜ್ಜೆಯಿಟ್ಟು ಯಶಸ್ಸಿನೆಡೆಗೆ ಸಾಗುತ್ತಿರುವ ನಗುಮೊಗದ ಗಟ್ಟಿಧೈರ್ಯದ ಸಾಹಸಿ ಯುವಕ.

ದಾಂಡೇಲಿ ನಗರದ ಸಮೀಪದ ಕೋಗಿಲಬನ ಗ್ರಾಮದ ನಿವಾಸಿಯಾಗಿರುವ ಸುಧೀರ ಶೆಟ್ಟಿಯವರು ಪ್ರವಾಸೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಇದ್ದೂರಲ್ಲೆ ಇದ್ದು, ಏನನ್ನಾದರೂ ಸಾಧಿಸಬೇಕು, ಸಮಾಜಕ್ಕೆ ಒಳಿತನ್ನು ಮಾಡಬೇಕೆಂದು ಬಯಸಿ 2013 ರಲ್ಲಿ ಶುರವಚ್ಚಿಕೊಂಡಿದ್ದೆ ಹಾಲಿನ ವ್ಯಾಪಾರ.

ಹಾಲಿನ ವ್ಯಾಪಾರ ಮಾಡಲು ಶುರವಚ್ಚಿಕೊಂಡಾಗ ಅಪಹಾಸ್ಯಕ್ಕೂ ಈಡಾಗಿದ್ದೂ ಇದೆ. ಹಾಲು ಮಾರ್ಲಿಕ್ಕೂ ಸ್ನಾತಕೋತ್ತರ ಪದವಿಯವರೆಗೆ ಓದಬೇಕೆ? ಎಂದು ಪ್ರಶ್ನಿಸಿದವರು ಇದ್ದಾರೆ.

ಹಾಗೆಂದು ಅವೆಲ್ಲವುಗಳನ್ನು ಮನಸ್ಸಿನೊಳಗಿನ ಸಹಿಸುವ ಚೀಲದಲ್ಲಿ ಮುಚ್ಚಿಟ್ಟು ಯಾರು ಏನೆ ಅಂದರೂ ತನ್ನ ಪಾಡಿಗೆ ವ್ಯವಹಾರವನ್ನು ಮುನ್ನಡೆಸುತ್ತಾ, ಇದೀಗ ದಾಂಡೇಲಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹಾಲು ವಿತರಣೆ ಮಾಡುವವರಲ್ಲಿ ಅಗ್ರ ಹೆಸರನ್ನು ಸಂಪಾದಿಸಿಕೊಂಡಿದ್ದಾರೆ ಸುಧೀರ ಶೆಟ್ಟಿಯವರು.  ಶ್ರಮವಹಿಸಿ ದುಡಿದಾಗ ಫಲ ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟ ಸುಧೀರ ಶೆಟ್ಟಿಗೆ ಅಂದು ಚೇಷ್ಟೆ ಮಾಡಿದವರೂ ಇಂದು ಸುಧೀರ ಶೆಟ್ಟಿಯವರ ಶ್ರಮಸಾಧನೆಯನ್ನು ನೋಡಿ ಬೆರಗಾಗಿದ್ದಾರೆ.

Advertisement

ಮನಸ್ಸಿದ್ದರೇ ಮಾರ್ಗ, ಶಿಕ್ಷಣ ಪಡೆದ ಮೇಲೆ ಇನ್ನೊಂದು ಕಡೆ ಉದ್ಯೋಗ ಮಾಡಬೇಕೆಂದಿಲ್ಲ, ಅಚಲವಾದ ಗುರಿ, ಕೆಲಸದಲ್ಲಿ ಶ್ರದ್ದೆ ಮತ್ತು ಬದ್ದತೆ ಇದ್ದಲ್ಲಿ ಯಶಸ್ಸನ್ನು ಪಡೆಯಬಹುದು ಎನ್ನುವುದಕ್ಕೆ ಸುಧೀರ ಶೆಟ್ಟಿ ಸೂಕ್ತ ಉದಾಹರಣೆ, ಏನಾಂತೀರಾ.

Advertisement

Udayavani is now on Telegram. Click here to join our channel and stay updated with the latest news.

Next