ಪಡುಪಣಂಬೂರು: ಸ್ವ ಉದ್ಯೋಗದಿಂದ ಸ್ವಾವಲಂಬಿ ಜೀವನ ನಡೆಸಬಹುದು. ಶ್ರದ್ಧೆಯಿಂದ ಮಾಡಿದ ಕೆಲಸಕ್ಕೆ ಸೂಕ್ತವಾದ ಭದ್ರತೆ ಸಿಕ್ಕಲ್ಲಿ ಯಶಸ್ವಿ ಉದ್ಯಮಿಯಾಗಬಹುದು ಎಂದು ಕಾರ್ಕಳದ ಕದಿಕೆ ಟ್ರಸ್ಟ್‌ನ ಮಾಧವ ಸಹಸ್ರ ಬುದ್ದೆ ಪೂನಾ ಹೇಳಿದರು.
ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನ ಮಂದಿರದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ನಡೆದ ಚರಕದ ಮೂಲಕ ನೂಲು ತಯಾರಿ ಹಾಗೂ ಕಾಗದದಿಂದ ಕವರ್ ತಯಾರಿಸುವ ಮಾಹಿತಿ ಶಿಬಿರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಹೊಸ ಹೊಸ ಅವಕಾಶವನ್ನು ನವ ಉದ್ಯಮಿಗಳು ಬಳಸಿಕೊಳ್ಳುವ ಕೌಶಲ ಇರಬೇಕು ಎಂದರು. ಈ ಸಂದರ್ಭ ಕುಮಾರ್ ಸಾಂಗತ್ಯ ಕಾರ್ಕಳ, ಚಿಕ್ಕಪ್ಪ ಶೆಟ್ಟಿ ಕಾರ್ಕಳ, ಮಮತಾ ರೈ ವಿವಿಧ ತರಬೇತಿಯನ್ನು ನೀಡಿದರು.
ಕಿನ್ನಿಗೋಳಿಯ ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಆನಂದ ಶೆಟ್ಟಿಗಾರ್ ಕೆಂಚನಕೆರೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವನ್ನು ಕಾರ್ಕಳದ ಕದಿಕೆ ಟ್ರಸ್ಟ್, ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘ ಕಿನ್ನಿಗೋಳಿ, ಶ್ರೀ ದುರ್ಗಾ ಪರಮೇಶ್ವರೀ ಭಜನ ಮಂದಿರ, ಗ್ರಾಮ ವಿಕಾಸ ಸಮಿತಿಯ ಸಂಯುಕ್ತವಾಗಿ ಜರಗಿತು.
ಪಡುಪಣಂಬೂರು ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷೆ ಸುರೇಖಾ ಕರುಣಾಕರ್ ಬೆಳ್ಳಾಯರು, ಶಿಕ್ಷಕಿ ಗಾಯಿತ್ರಿ ಉಮೇಶ್ ದೇವಾಡಿಗ, ಭಜನ ಮಂದಿರದ ಗಣೇಶ್ ಆಚಾರ್ಯ, ಮಾಧವ ಶೆಟ್ಟಿಗಾರ್ ಉಪಸ್ಥಿತರಿದ್ದರು. ಹರ್ಷ ಕೆರೆಕಾಡು ನಿರೂಪಿಸಿದರು.