Advertisement

ಸ್ವಯಂ ಬೆಳೆ ಸಮೀಕ್ಷೆ ಕಾರ್ಯಕ್ಕೆ ಕಳಸದ ಚಾಲನೆ

01:16 PM Jun 29, 2022 | Team Udayavani |

ಬಾಗಲಕೋಟೆ: ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆ ವಿವರವನ್ನು ದಾಖಲಿಸಲು ಮೊಬೈಲ್‌ ಆ್ಯಪ್‌ ಮೂಲಕ ರೈತರಿಂದಲೇ ಸ್ವಯಂ ಬೆಳೆ ಸಮೀಕ್ಷೆ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಚಾಲನೆ ನೀಡಿದರು.

Advertisement

ಜಿಲ್ಲೆಯ ಬಾದಾಮಿ ತಾಲೂಕಿನ ಆಡಗಲ್ಲ ಗ್ರಾಮದ ರೈತ ಕೋನಪ್ಪ ತಗಳನ್ನವರ ಸರ್ವೆ ನಂ.143/1, 155/1 ಜಮೀನಿನಲ್ಲಿ ಬೆಳೆ ಸಮೀಕ್ಷೆಯನ್ನು ಸ್ವಯಂ ರೈತರಿಂದಲೇ ಮಾಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಬೆಳೆ ಸಮೀಕ್ಷೆಗಾಗಿಯೇ ಮೊಬೈಲ್‌ ಆ್ಯಪ್‌ ಬಿಡುಗಡೆಗೊಳಿಸಿದ್ದು, ಅದನ್ನು ಬಳಸಿಕೊಂಡು ಸ್ವತಂತ್ರವಾಗಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ವಿವರ ದಾಖಲಿಸಬಹುದಾಗಿದೆ ಎಂದು ತಿಳಿಸಿದರು.

ಬೆಳೆ ಸಮೀಕ್ಷೆಯ ದತ್ತಾಂಶವನ್ನು ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ವಿಸ್ತೀರ್ಣ ಲೆಕ್ಕ ಹಾಕುವ ಕಾರ್ಯದಲ್ಲಿ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವಲ್ಲಿ, ಬೆಳೆ ವಿಮಾ ಯೋಜನೆ ಅಡಿ ಸರ್ವೆ ನಂಬರ್‌ ವಾರು ಬೆಳೆ ಪರಿಶೀಲನೆ ಹಾಗೂ ಬೆಳೆ ಕಟಾವು ಪ್ರಯೋಗಳನ್ನು ಕೈಗೊಳ್ಳಲು ಸರ್ವೆ ನಂಬರ್‌ ಆಯ್ಕೆ ಮಾಡಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಸಾದ್ಯವಾಗುತ್ತದೆ ಎಂದರು.

ಅಲ್ಲದೇ ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆ ಅನುಷ್ಠಾನಕ್ಕಾಗಿ, ಆರ್‌.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಾತಿಗಾಗಿ ಬಳಸಬಹುದಾಗಿದೆ. ಜಿಲ್ಲೆಯ ರೈತ ಬಾಂಧವರು ತಪ್ಪದೇ ತಮ್ಮ ಜಮೀನಲ್ಲಿರುವ ಬೆಳೆಗಳ ವಿವರವನ್ನು ತಪ್ಪದೇ ದಾಖಲಿಸಬೇಕು. ಗ್ರಾಮಗಳಲ್ಲಿರುವ ವಿದ್ಯಾವಂತ ಯುವಕರು ರೈತರ ಬೆಳೆ ಸಮೀಕ್ಷೆ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ತಮ್ಮ ಹಳ್ಳಿಯ ರೈತ ಸಮುದಾಯದ ಬೆಳೆ ಮಾಹಿತಿ ದಾಖಲಿಸಬಹುದು. ಬೆಳೆ ವಿವರ ದಾಖಲಾಗದಿದ್ದಲ್ಲಿ ಸರ್ಕಾರದ ಯೋಜನೆಗಳಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕಿ ಡಾ| ಚೇತನಾ ಪಾಟೀಲ ಮಾತನಾಡಿ ಜಿಲ್ಲೆಯ ರೈತ ಬಾಂಧವರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರ ದಾಖಲಿಸಲು ಮುಂಗಾರು ರೈತರ ಬೆಳೆ ಸಮೀಕ್ಷೆ 2022-23 ಎಂಬ ಮೊಬೈಲ್‌ ಆ್ಯಪ್‌ ಗೂಗಲ್‌ ಪ್ಲೇಸ್ಟೋರ್‌ ನಿಂದ ಡೌನ್‌ಲೋಡ್‌ ಮಾಡಿಕೊಂಡು ಆಧಾರ ಕ್ಯೂಆರ್‌ ಕೋಡ್‌ನ್ನು ಸ್ಕ್ಯಾನ್‌ ಮಾಡಿ ಮೊಬೈಲ್‌ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸುವುದರಿಂದ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರಲಿದೆ. ಒಟಿಪಿಯನ್ನು ದಾಖಲಿಸಿ ಮೊಬೈಲ್‌ ಆ್ಯಪ್‌ನಲ್ಲಿ ಮೊದಲು ಮಾಸ್ಟರ್‌ ವಿವರಗಳನ್ನು ಡೌನ್‌ ಲೋಡ್‌ ಮಾಡಿಕೊಳ್ಳಬೇಕು, ನಂತರ ಗ್ರಾಮದ ಪಹಣಿ ಮತ್ತು ಜಮೀನಿನ ವಿವರ ಅಂದರೆ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೇ ನಂಬರ್‌, ಮಾಲೀಕರ ಹೆಸರು ಆಯ್ಕೆಮಾಡಿ ಕ್ಷೇತ್ರವನ್ನು ನಮೂದಿಸಿ ಸರ್ವೇ ನಂಬರಿನ ಗಡಿರೇಖೆ ಒಳಗೆ ನಿಂತು ತಾವು ಬೆಳೆದ ಪ್ರತಿ ಬೆಳೆಗಳ ವಿವರ ದಾಖಲಿಸಿ ಪ್ರತಿ ಬೆಳೆಯ 2 ಛಾಯಾ ಚಿತ್ರ ತೆಗೆದು ಅಪ್‌‌ಲೋಡ್‌ ಮಾಡಬೇಕು ಎಂದು ತಿಳಿಸಿದರು.

Advertisement

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಗ್ರಾಮದ ಖಾಸಗಿ ನಿವಾಸಿ (ಪಿ.ಆರ್‌), ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾ ಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳು, ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಮತ್ತು ಟೋಲ್‌ ಫ್ರೀ ಸಂಖ್ಯೆ 8448447715ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೃಷಿ ಉಪನಿರ್ದೇಶಕ ಎಸ್‌.ಬಿ. ಕೊಂಗವಾಡ ಉಪಸ್ಥಿತರಿದ್ದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next