Advertisement

ಸ್ವಾರ್ಥಕ್ಕಾಗಿ ಸಮಾವೇಶ: ಆರೋಪ

03:35 PM Feb 18, 2017 | Team Udayavani |

ಆಳಂದ: ತಾಲೂಕಿನ ಅಂಗವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಪೂರೈಕೆ, ಅವ್ಯವಹಾರ ಹಾಗೂ ಫೆ.1ರಂದು ಪಟ್ಟಣದಲ್ಲಿ ನಡೆದ ಸ್ತ್ರೀ ಶಕ್ತಿ ಸಮಾವೇಶಕ್ಕೆ ಸಂಬಂಧಿಸಿದಂತೆ ಬಿಸಿಯೂಟ ಕೇಂದ್ರಗಳನ್ನು ಬಂದ್‌ ಮಾಡಿ ಅಡುಗೆಯವರು ಭಾಗವಹಿಸಲು ಅನುಮತಿ ನೀಡಿದ ಸಿಡಿಪಿಒ ಅವರನ್ನು ಕೂಡಲೇ ವರ್ಗಾಯಿಸಬೇಕು ಎಂದು ತಾಪಂ ಆಡಳಿತ ಪಕ್ಷದ ಬಿಜೆಪಿ ಸದಸ್ಯರು ಆಗ್ರಹಿಸಿದರು. 

Advertisement

ತಾಪಂ ಕಚೇರಿಯಲ್ಲಿ ತಾಪಂ ಅಧ್ಯಕ್ಷೆ ನಾಗಮ್ಮ ಅಶೋಕ ಗುತ್ತೇದಾರ ನೇತೃತ್ವದಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸಿಡಿಪಿಒ ತುಳಸಾಬಾಯಿ ಮಾನು ವರದಿ ಮಂಡಿಸಿ, ಅಂಗನವಾಡಿಯಲ್ಲಿ ಗುಣಮಟ್ಟದ ಆಹಾರ, ಮಕ್ಕಳಿಗೆ ಸೌಲಭ್ಯ ನೀಡಲಾಗುತ್ತಿದೆ. ಸ್ತ್ರೀ ಶಕ್ತಿ ಸಮಾವೇಶಕ್ಕೆ ತೆರಳಲು ಯಾರಿಗೂ ಆದೇಶಿಸಿಲ್ಲ ಎಂದು ಹೇಳಿದರು. 

ಈ ಹೇಳಿಕೆಗೆ ಕುಪಿತರಾದ ಆಡಳಿತ ಸದಸ್ಯರು ವರ್ಗಾವಣೆಗೆ ಪಟ್ಟು ಹಿಡಿದರು. ಇದರಿಂದಾಗಿ ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸಿಡಿಪಿಒ ಅವರು ಕರ್ತವ್ಯ ಲೋಪ ಎಸಗಿದ್ದಾರೆ. ಖಾಸಗಿ ಕಾರ್ಯಕ್ರಮಗಳಿಗೂ ಭಾಗವಹಿಸಲು ಬಿಸಿಯೂಟ ನೌಕರರಿಗೆ ಆದೇಶ ಹೊರಡಿಸುತ್ತಿದ್ದಾರೆ ಎಂದು ತಾಪಂ ಸದಸ್ಯ ಬಸವರಾಜ ಸಾಣಕ, ಸಂಗೀತಾಬಾಯಿ ರಾಠೊಡ, ಶರಣಬಸಪ್ಪ ಬಿರಾದಾರ ಆಕ್ರೋಶ ವ್ಯಕ್ತಪಡಿಸಿದರು. 

ಬಿಸಿಯೂಟ ಮಹಿಳಾ ಸಿಬ್ಬಂದಿಗಳು ಅಂದು ಅಡುಗೆ ಕೇಂದ್ರಗಳನ್ನು ಬಂದ್‌ಮಾಡಿಕೊಂಡು, ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಇದರಿಂದ ಅಂದು ವಿದ್ಯಾರ್ಥಿಗಳಿಗೆ ಬಿಸಿಯೂಟ ಇಲ್ಲ. ಶಾಲೆಗಳಲ್ಲಿಯೂ ಅಂದು ಶಿಕ್ಷಕಿಯರು ಇರಲಿಲ್ಲ. ಸಮಾವೇಶದ ಹೆಸರಿನಲ್ಲಿ ಗೈರಾಗಿದ್ದಾರೆ. ಸ್ತ್ರೀ ಶಕ್ತಿ ಸಮಾವೇಶ ನಡೆಸಲು ವಿರೋಧವಿಲ್ಲ.

ರಜೆಯ ದಿನದಂದು ಹಮ್ಮಿಕೊಂಡಿದ್ದರೆ ಯಾರಿಗೂ ತೊಂದರೆ ಆಗುತ್ತಿರಲಿಲ್ಲ. ಸ್ವಾರ್ಥಕ್ಕಾಗಿ ಇಂಥ ಸಮಾವೇಶ ಹಮ್ಮಿಕೊಂಡಿದ್ದರಿಂದ ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ತೊಂದರೆ ಆಗಿದೆ ಎಂದು ಆರೋಪಿಸಿದರು.  ಅಧಿಕಾರಿಗಳು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡುವುದಿಲ್ಲ. ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಬಸವರಾಜ ಸಾಣಕ ಹಾಗೂ ಇತರರು ಹರಿಹಾಯ್ದರು. 

Advertisement

ಆಡಳಿತ ಪಕ್ಷದ ಸದಸ್ಯರ ಹೇಳಿಕೆಯಿಂದ ಕುಪಿತಗೊಂಡ ಪ್ರತಿಪಕ್ಷದ ಸದಸ್ಯ ಸಾತಲಿಂಗಪ್ಪ ಪಾಟೀಲ, ಸುಜಾತಾ ಖೋಬ್ರೆ ಅವರು, ಸ್ತ್ರೀ ಶಕ್ತಿ ಸಮಾವೇಶ ಪûಾತೀತವಾಗಿ ನಡೆದಿದೆ. ಸುಮ್ಮನೆ ಅಧಿಕಾರಿಗಳನ್ನು ಹೊಣೆಮಾಡುವುದು ಸರಿಯಲ್ಲ. ಸ್ತ್ರೀ ಶಕ್ತಿ ಸಮಾವೇಶಕ್ಕೆ ಅಡುಗೆಯವರು ಬಂದಿದ್ದನ್ನೆ ಗುರಿಯಾಗಿಟ್ಟು ಕೇಳುತ್ತಿರಿ, ಆದರೆ ಅಂಗನವಾಡಿಯವರು ನಿತ್ಯ ಶಾಲೆಗೆ ಬರುವುದಿಲ್ಲ ಅದನ್ನು ಕೇಳಬೇಕು.

ತಪ್ಪು ಮಾಡದೆ ಇರುವ ಅಧಿಕಾರಿಗಳಿಗೆ ತಪ್ಪು ಮಾಡಿದ್ದಾರೆ ಎಂದು ತೋರ್ಪಡಿಸಬೇಡಿ. ಇನ್ನುಳಿದ ಸಮಸ್ಯೆ ಇದ್ದರೆ ತಾಕೀತು ಮಾಡಿ ಎಂದು ಎದುರೇಟು ನೀಡಿದರು. ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಕೇಳಿಬೇಕು ಎಂದು ಮಧ್ಯ ಪ್ರವೇಶಿಸಿದ ಇಒ ಡಾ| ಸಂಜಯ ರೆಡ್ಡಿ ಅವರು ಸಿಡಿಪಿಒ ಅವರು ಇಲಾಖೆಯ ಅಧಿಕಾರಿಯಾಗಿದ್ದರಿಂದ ಬಿಡುಗಡೆ ಮಾಡುವ ಅಧಿಕಾರ ಇರುವುದಿಲ್ಲ.

ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಇನ್ನಿತರ ಇಲಾಖೆಯ ಅಧಿಕಾರಿಗಳು ವರದಿ  ಮಂಡಿಸಿದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭು ಸರಸಂಬಿ, ವ್ಯವಸ್ಥಾಪಕ ಬಸವರಾಜ ಪಾಟೀಲ ತಾಪಂ ಸದಸ್ಯ ಮಹಾದೇವಿ ಚ. ಘಂಟೆ, ಕಮಲಾಬಾಯಿ ನಾಮಣೆ, ಶಿವಪ್ಪ ವಾರಿಕ,  ಶಿವಯೋಗಪ್ಪ ದುರ್ಗದ, ಸಿದ್ಧರಾಮ ವಾಘೊರೆ ಇನ್ನಿತರ ಸದಸ್ಯರು ಹಾಜರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next