ಮೈಸೂರು: ಜಿಲ್ಲಾ ಪಂಚಾಯಿತಿ ಐದು ಸ್ಥಾಯಿ ಸಮಿತಿಯ ಸದಸ್ಯ ಸ್ಥಾನಕ್ಕೆ ಮಂಗಳವಾರ ಚುನಾವಣೆಯಲ್ಲಿ ಎಲ್ಲಾ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು. ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ಮಂಗಳವಾರ ಚುನಾವಣೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯರಾಗಿ ಎಸ್.ಅರುಣ್ ಕುಮಾರ್, ಎಸ್.ಶ್ರೀಕೃಷ್ಣ, ಬಿ.ಎನ್.ಸದಾನಂದ, ನಯೀಮಾ ಸುಲ್ತಾನ್, ಎಚ್.ಆರ್.ಪ್ರೇಮ, ಡಿ.ರವಿಶಂಕರ್, ಎನ್. ಮಂಜುನಾಥನ್ ಆಯ್ಕೆಗೊಂಡರು.
ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಗೆ ಸದಸ್ಯರಾಗಿ ಪಿ.ರಾಜೇಂದ್ರ, ಕೆ.ವೈ.ಭಾಗ್ಯ, ಮಧು ಕುಂಬ್ರಳ್ಳಿ ಸುಬ್ಬಣ್ಣ, ಎಚ್.ಇ.ಜಯಲಕ್ಷ್ಮೀ, ಎಂ.ಪ್ರೇಮಕುಮಾರಿ, ಗುರುಸ್ವಾಮಿ, ಪುಷ್ಪಾ ನಾಗೇಶ್ ಆಯ್ಕೆಗೊಂಡರು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯರಾಗಿ ರುದ್ರಮ್ಮ ನಾಗರಾಜು, ವೀಣಾ ಕೀರ್ತಿ, ಕೆ.ಎಸ್.ಮಂಜುನಾಥ್, ಎಂ.ಬಿ. ಸುರೇಂದ್ರ, ವೆಂಕಟಸ್ವಾಮಿ, ಚಂದ್ರಿಕಾ ಸುರೇಶ್, ಕಟ್ಟಾನಾಯಕ ಆಯ್ಕೆಗೊಂಡರು. ಹಣಕಾಸು ಮತ್ತು ಯೋಜನಾ ಸ್ಥಾಯಿ ಸಮಿತಿಗೆ ಎಂ. ಸುಧೀರ್, ಬಿ.ಆರ್. ನಂದೀಶ್, ಎಸ್. ದಿನೇಶ್, ಎಚ್.ಎಸ್. ದಯಾನಂದ ಮೂರ್ತಿ, ರೂಪಾ, ಲತಾ ಸಿದ್ದಶೆಟ್ಟಿ ಆಯ್ಕೆಗೊಂಡರು.
ಸಾಮಾನ್ಯ ಸ್ಥಾಯಿ ಸಮಿತಿಗೆ ಕೌಶಲ್ಯ ಲೋಕೇಶ್, ಸಾವಿತ್ರಮ್ಮ, ನಾಗರತ್ನ, ಮಂಗಲಾ ಸೋಮಶೇಖರ್, ಬೀರಿಹುಂಡಿ ಬಸವಣ್ಣ, ಎಂ.ಪಿ.ನಾಗರಾಜು ಆಯ್ಕೆಗೊಂಡರು. ಹಣಕಾಸು ಮತ್ತು ಯೋಜನಾ ಸ್ಥಾಯಿ ಸಮಿತಿಗೆ ಜಿಪಂ ಅಧ್ಯಕ್ಷರೇ ಅಧ್ಯಕ್ಷರಾಗಲಿದ್ದಾರೆ. ಸಾಮಾನ್ಯ ಸ್ಥಾಯಿ ಸಮಿತಿಗೆ ಜಿಪಂ ಉಪಾಧ್ಯಕ್ಷರು ಅಧ್ಯಕ್ಷರಾಗಲಿ ದ್ದಾರೆ. ಉಳಿದಂತೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯನ್ನು ಕಾಂಗ್ರೆಸ್‌ಗೆ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯನ್ನು ಬಿಜೆಪಿಗೆ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ಹಂಚಿಕೆ ಮಾಡಲು ಮೂರು ಪಕ್ಷಗಳು ನಿರ್ಧರಿಸಿವೆ.
ನಾಮಪತ್ರ ತಿರಸ್ಕಾರ: ಹಣಕಾಸು ಸ್ಥಾಯಿ ಸಮಿತಿಗೆ ಜೆಡಿಎಸ್‌ನ ಬೀರಿಹುಂಡಿ ಬಸವಣ್ಣ ನಾಮಪತ್ರ ಸಲ್ಲಿಸಲು ತಡವಾದ ಹಿನ್ನೆಲೆಯಲ್ಲಿ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಯಾದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿರಸ್ಕರಿಸಿದರು. ಈ ಸಂದರ್ಭ ಬೀರಿಹುಂಡಿ ಬಸವಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿ ನಾಮಪತ್ರ ಸ್ವೀಕರಿಸುವಂತೆ ಒತ್ತಾಯಿಸಿದರು. ಆದರೆ, ತಡವಾಗಿ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಸಿಇಒ ನಾಮಪತ್ರ ಸ್ವೀಕಾರ ಮಾಡಲಿಲ್ಲ.