Advertisement

ಉದ್ಯಮ ಚಿಂತನಾ ಪ್ರದರ್ಶನಕ್ಕೆ ಆಯ್ಕೆ

12:36 PM Aug 06, 2017 | Team Udayavani |

ಹುಬ್ಬಳ್ಳಿ: ನವೋದ್ಯಮಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಮ್ಮಿಕೊಂಡಿರುವ ಎಲಿವೇಟ್‌ ಯೋಜನೆಯಡಿ ಉದ್ಯಮ ಚಿಂತನಾ ಪ್ರದರ್ಶನದ ಅಂತಿಮ ಸ್ಪರ್ಧೆಗೆ ಆಯ್ಕೆ ಪ್ರಕ್ರಿಯೆ ಶನಿವಾರ ಇಲ್ಲಿನ ಡೆನಿಸನ್ಸ್‌ ಹೋಟೆಲ್‌ನಲ್ಲಿ ನಡೆಯಿತು. ಹು-ಧಾ, ಬೆಳಗಾವಿ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಒಟ್ಟು 160ಕ್ಕೂ ಹೆಚ್ಚು ತಂಡಗಳು ನೋಂದಾಯಿಸಿದ್ದು, ಇದರಲ್ಲಿ 68 ತಂಡಗಳನ್ನು ಆಯ್ಕೆ ಮಾಡಲಾಗಿತ್ತು.

Advertisement

ಹುಬ್ಬಳ್ಳಿಯಲ್ಲಿ ನಡೆದ ಸ್ಪರ್ಧೆಗೆ 68 ತಂಡಗಳು ಪಾಲ್ಗೊಂಡು ತಮ್ಮ ಉದ್ಯಮಶೀಲತಾ ಚಿಂತನೆ, ಉತ್ಪನ್ನ ಮಹತ್ವ, ಮಾರುಕಟ್ಟೆ ಇತ್ಯಾದಿ ಮಾಹಿತಿಗಳನ್ನು ಪ್ರದರ್ಶಿಸಿದರು. ಈಗಾಗಲೇ ಕಲಬುರಗಿಯಲ್ಲಿ ನಡೆದ ಇದೇ ರೀತಿಯ ಸ್ಪರ್ಧೆಯಲ್ಲಿ 33 ತಂಡಗಳು ಭಾಗಿಯಾಗಿದ್ದವು. 

ಕಲಬುರಗಿ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಆಯ್ಕೆಯಾದವರು ಅಂತಿಮವಾಗಿ ಬೆಂಗಳೂರಿನಲ್ಲಿ ಆ. 28ರಂದು ನಡೆಯುವ ಅಂತಿಮ ಹಂತದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂತಿಮ ಸ್ಪರ್ಧೆಯಲ್ಲಿ ಒಟ್ಟು 240 ತಂಡಗಳು ಭಾಗವಹಿಸಲಿದ್ದು, ಇಲ್ಲಿ 100 ನವೋದ್ಯಮಿಗಳನ್ನು ಆಯ್ಕೆ  ಮಾಡಲಾಗುತ್ತಿದ್ದು, ಆಯ್ಕೆಯಾದವರ ಉದ್ಯಮ ಉತ್ತೇಜನಕ್ಕೆ ತಲಾ 50ಲಕ್ಷ ರೂ. ಆರ್ಥಿಕ ನೆರವು ರಾಜ್ಯ ಸರಕಾರದಿಂದ ದೊರೆಯಲಿದೆ.

ನವೋದ್ಯಮ ಕುರಿತಾಗಿ ಜಾಗೃತಿ ಮೂಡಿಸಲು ದೇಶಪಾಂಡೆ ಪ್ರತಿಷ್ಠಾನದ ಸ್ಯಾಂಡ್‌ಬಾಕ್ಸ್‌ ಸ್ಟಾರ್ಟಪ್‌ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ನವೋದ್ಯಮ ಸಫಾರಿ ಹಮ್ಮಿಕೊಂಡು ಉದ್ಯಮಶೀಲತೆ ಚಿಂತನೆಯವರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಿತ್ತು. ಎಲಿವೇಟ್‌ ಯೋಜನೆಯಲ್ಲಿ ದೇಶಪಾಂಡೆ ಪ್ರತಿಷ್ಠಾನದ “ಸ್ಯಾಂಡ್‌ ಬಾಕ್ಸ್‌ ಸ್ಟಾರ್ಟಪ್‌’ ಜ್ಞಾನ ಪಾಲುದಾರಿಕೆ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. 

ಉದ್ಘಾಟನೆ: ಹುಬ್ಬಳ್ಳಿಯಲ್ಲಿ ನಡೆದ ಉದ್ಯಮ ಚಿಂತನೆಗಳ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ದೇಶಪಾಂಡೆ ಪ್ರತಿಷ್ಠಾನದ ಸಿಇಒ ನವೀನ್‌ ಝಾ, ಉದ್ಯಮ ಕುರಿತಾದ ಇಂತಹ ಸ್ಪರ್ಧೆಗಳು, ನವೋದ್ಯಮ ಉತ್ತೇಜನ ಕಾರ್ಯಗಳು ಈ ಹಿಂದೆ ಕೇವಲ ಬೆಂಗಳೂರು, ಮೈಸೂರುಗಳಿಗೆ ಸೀಮಿತವಾಗಿತ್ತು.

Advertisement

ಇದೀಗ ಉತ್ತರ ಕರ್ನಾಟಕದಲ್ಲಿ ನವೋದ್ಯಮ ಪ್ರಮಾಣ ಹೆಚ್ಚುತ್ತಿರುವುದು ಸಂತಸದ ವಿಚಾರ ಎಂದರು. ಎರಡನೇ ಹಂತದ ನಗರಗಳಾದ ಹುಬ್ಬಳ್ಳಿ, ಬೆಳಗಾವಿ, ಕಲಬುರಗಿಯಂತಹ ನಗರಗಳಲ್ಲಿ ನವೋದ್ಯಮ ವಾತಾವರಣ ಹೆಚ್ಚುತ್ತಿದೆ. ಇದೀಗ ಬೆಂಗಳೂರು ಹೊರತು ಪಡಿಸಿದರೆ ಅತಿ ಹೆಚ್ಚು ನವೋದ್ಯಮ ಆರಂಭಗೊಂಡಿರುವುದು ಹುಬ್ಬಳ್ಳಿಯಾಗಿದೆ ಎಂದರು.

ದೇಶಪಾಂಡೆ ಪ್ರತಿಷ್ಠಾನದ ಸ್ಯಾಂಡ್‌ ಬಾಕ್ಸ್‌ ಸ್ಟಾರ್ಟಪ್‌ ಮುಖ್ಯಸ್ಥ ಸಿ.ಎಂ. ಪಾಟೀಲ ಮಾತನಾಡಿ, ಸ್ಟಾರ್ಟ್‌ ಸಫಾರಿ ಅಡಿಯಲ್ಲಿ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಕೈಗೊಂಡ ಜಾಗೃತಿ ಯಾತ್ರೆ ಹಾಗೂ ನವೋದ್ಯಮಿಗಳನ್ನು ಗುರುತಿಸಿ ಅವರಿಗೆ ವಿಶ್ವಾಸ ತುಂಬುವ ಕಾರ್ಯ ಮಾಡಿದ್ದನ್ನು ವಿವರಿಸಿದರು.

ರಾಜ್ಯ ಸರಕಾರ ಎಲಿವೇಟ್‌ ಯೋಜನೆಯಡಿ 2013ರ ನಂತರದಲ್ಲಿ ನೋಂದಣಿಯಾದ ನವೋದ್ಯಮಿಗಳನ್ನು ಗುರುತಿಸಿ ಅವರಿಗೆ ನೆರವು ಕಲ್ಪಿಸಲು ಮುಂದಾಗಿದೆ. ಇದರಿಂದ ನವೋದ್ಯಮ ಬೆಳೆಯಲು ಹಾಗೂ ಮಾರುಕಟ್ಟೆ ಸಂಪರ್ಕ ಹೆಚ್ಚಿಸಿಕೊಳ್ಳಲು ಹೇಗೆ ಸಹಾಯವಾಗಲಿದೆ ಎಂಬುದನ್ನು ಹೇಳಿದರು. 

ರಾಜೀವ ಪ್ರಕಾಶ ಮಾತನಾಡಿ, ಉದ್ಯಮದಲ್ಲಿನ ಸಂಪರ್ಕ ವೃದ್ಧಿಸಿಕೊಳ್ಳಬೇಕಿದೆ. ಇಂತಹ ಅವಕಾಶಗಳನ್ನು ನವೋದ್ಯಮಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಎಂಐಟಿ ನಿರ್ದೇಶಕ ರಾಬ್‌ ಸ್ಟಾನರ್‌ ಮಾತನಾಡಿ, ವಿದೇಶಗಳಲ್ಲಿನ ಸ್ಟಾರ್ಟಪ್‌ ಹಾಗೂ ಭಾರತದಲ್ಲಿನ ನವೋದ್ಯಮ ಬೆಳವಣಿಗೆ ಕುರಿತಾಗಿ ತುಲನಾತ್ಮಕವಾಗಿ ವಿವರಣೆ ನೀಡಿದರು.  

Advertisement

Udayavani is now on Telegram. Click here to join our channel and stay updated with the latest news.

Next