ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆ ಮೈತ್ರಿ ಕುರಿತು ಜೆಡಿಎಸ್ ನಾಯಕರೊಂದಿಗೆ ಮಾತುಕತೆ ನಡೆದಿದ್ದು, ಎಲ್ಲರೊಂದಿಗೆ ಚರ್ಚಿಸಿದ ನಂತರವೇ ಮೇಯರ್ ಆಯ್ಕೆ ಅಂತಿಮಗೊಳಿಸುವುದಾಗಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಮೇಯರ್ ಆಕಾಂಕ್ಷಿ ಸಂಪತ್‌ರಾಜ್ ತಮ್ಮನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮೇಯರ್ ಆಯ್ಕೆ ವಿಷಯದಲ್ಲಿ ಜೆಡಿಎಸ್ ಜತೆಗೆ ಯಾವುದೇ ಗೊಂದಲವಿಲ್ಲ. ಜೆಡಿಎಸ್‌ಗೆ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗಿದ್ದು, ಅದರಲ್ಲಿ ಒಂದನ್ನು ಬದಲಿಸುವಂತೆ ಕೇಳಿಕೊಂಡಿದ್ದಾರೆ. ಉಳಿದಂತೆ ಯಾವುದೇ ಬದಲಾವಣೆಯಿಲ್ಲ,’ ಎಂದು ಹೇಳಿದರು.
ನಮಗೆ ಎಲ್ಲರೂ ಬೇಕು: “ಕಾಂಗ್ರೆಸ್‌ನಲ್ಲಿ ಮೇಯರ್ ಹುದ್ದಗೆ ನಾಲ್ವರು ಆಕಾಂಕ್ಷಿಗಳಿದ್ದಾರೆ. ನಗರದ ಶಾಸಕರು, ಸಂಸದರು, ಕಾರ್ಪೊರೇಟರ್‌ಗಳ ಅಭಿಪ್ರಾಯ ಪಡೆದು, ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಜತೆ ಚರ್ಚಿಸಿ, ಮೇಯರ್ ಯಾರಾಗುತ್ತಾರೆಂಧು ತೀರ್ಮಾನಿಸಲಾಗುವುದು.
ಸಂಸದ ಡಿ.ಕೆ.ಸುರೇಶ್ ಅವರು ತಮ್ಮ ಕ್ಷೇತ್ರದವರಿಗೇ ಮೇಯರ್ ಸ್ಥಾನ ಕೊಡಿ ಎಂದು ಕೇಳುವುದರಲ್ಲಿ ತಪ್ಪಿಲ್ಲ. ಅವರೊಂದಿಗೆ ಅಧ್ಯಕ್ಷ ಪರಮೇಶ್ವರ್ ಮಾತನಾಡುತ್ತಾರೆ. ನಮಗೆ ಜೆಡಿಎಸ್ ಹಾಗೂ ಪಕ್ಷೇತರರು ಎಲ್ಲರೂ ಬೇಕು. ಎಲ್ಲರನ್ನು ಸೇರಿಸಿಕೊಂಡು ಪಾಲಿಕೆಯಲ್ಲಿ ಅಧಿಕಾರ ನಡೆಸುತ್ತೇವೆ,’ ಎಂದು ಹೇಳಿದರು.
ಎಲ್ಲರನ್ನೂ ವಿಶ್ವಾಸಕ್ಕೆ ಪಡೆದೇ ಆಯ್ಕೆ: ಇದೇ ವೇಳೆ ಪಾಲಿಕೆ ಮೇಯರ್ ಚುನಾವಣೆ ಕುರಿತಂತೆ ರಾಮನಗರದಲ್ಲಿ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಬೈರೇಗೌಡ, “ಮೇಯರ್ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್, ಸಂಬಂಧಿಸಿದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿದೆ.
ಒಮ್ಮತದ ಅಭ್ಯರ್ಥಿ ಆಯ್ಕೆ ನಮ್ಮ ಉದ್ದೇಶ,’ ಎಂದಿದ್ದಾರೆ. ಮೇಯರ್ ಸ್ಥಾನಕ್ಕೆ ಆಕಾಂಕ್ಷಿಗಳು ಹಲವರಿದ್ದಾರೆ. ಸಂಸದ ಡಿ.ಕೆ.ಸುರೇಶ್ ಕೂಡ ತಮ್ಮದೇ ಕ್ಷೇತ್ರ ವ್ಯಾಪ್ತಿಯ ಅಭ್ಯರ್ಥಿಯನ್ನು ಹುದ್ದೆಗೆ ಪರಿಗಣಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಎಲ್ಲ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮೇಯರ್ ಆಯ್ಕೆ ನಡೆಯಲಿದೆ.