Advertisement

ಇಂದು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ

11:24 AM Dec 14, 2018 | |

ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಚುನಾವಣೆ ಶುಕ್ರವಾರ ಮೇಯರ್‌ ನೇತೃತ್ವದಲ್ಲಿ ನಡೆಯಲಿದೆ. ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮೈತ್ರಿ ಹಾಗೂ ವಿರೋಧ ಪಕ್ಷಗಳ ನಡುವೆ ಪೈಪೋಟಿ ಏರ್ಪಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 11 ಸ್ಥಾಯಿ ಸಮಿತಿಗಳಿಗೆ 130 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ನಗರ ಯೋಜನೆ ಸ್ಥಾಯಿ ಸಮಿತಿಗೆ 9 ಸದಸ್ಯರು ಮಾತ್ರ ಆಯ್ಕೆಯಾಗಿದ್ದಾರೆ. ಸಮಿತಿಯಲ್ಲಿರುವ ಸದಸ್ಯರು ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ. ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ವೇಳೆ ಬಿಜೆಪಿ ತಂತ್ರಗಾರಿಕೆಯಿಂದಾಗಿ ನಗರ ಯೋಜನೆ ಸ್ಥಾಯಿ ಸಮಿತಿಗೆ ಕೇವಲ 9 ಸದಸ್ಯರು ಆಯ್ಕೆಯಾಗಿದ್ದಾರೆ.

ಆ ಪೈಕಿ ಮೈತ್ರಿ ಪಕ್ಷದ ನಾಲ್ಕು ಸದಸ್ಯರಿದ್ದರೆ, ಬಿಜೆಪಿಯ 5 ಸದಸ್ಯರಿದ್ದಾರೆ. ಆ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದಲೂ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತಿದೆ. ಆದರೆ, ಬಿಜೆಪಿಯಿಂದ ಈಗಾಗಲೇ ಅಮಾನತುಗೊಂಡಿರುವ ಬೈರಸಂದ್ರ ವಾರ್ಡ್‌ ಸದಸ್ಯ ನಾಗರಾಜ್‌, ಮೈತ್ರಿ ಪಕ್ಷಕ್ಕೆ ಬೆಂಬಲ ನೀಡುವ ಸಾಧ್ಯತೆಯಿದ್ದು, ಮತ್ತೂಮ್ಮೆ ಬಿಜೆಪಿಗೆ ಮುಜುಗರ ಎದುರಾಗುವ ಸಾಧ್ಯತೆಯಿದೆ.

ಜಯನಗರ ಉಪಚುನಾವಣೆ ವೇಳೆ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಗೆಲುವಿಗೆ ಬಿಜೆಪಿ ಸದಸ್ಯ ನಾಗರಾಜು ನೆರವಾಗಿದ್ದರು. ಆ ಹಿನ್ನೆಲೆಯಲ್ಲಿ ಅವರಿಗೆ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಕಾಂಗ್ರೆಸ್‌ ಚಿಂತನೆ ನಡೆಸಿದೆ.

ಆದರೆ, ಪಕ್ಷ ವಿರೋಧಿ ಚಟುವಟಿಕೆಯಿಂದ ಈಗಾಗಲೇ ಅಮಾನತುಗೊಂಡಿರುವ ನಾಗರಾಜು ಅವರಿಗೆ ಅಧ್ಯಕ್ಷ ಸ್ಥಾನ ತಪ್ಪಿಸಲು ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ಮಮತಾ ಶರವಣ ಅವರನ್ನು ಕಣಕ್ಕಿಳಿಸುತ್ತಿದೆ. ಜತೆಗೆ ಮಮತಾ ಅವರಿಗೆ ಮತ ಚಲಾಯಿಸುವಂತೆ ನಾಗರಾಜು ಅವರಿಗೆ ಪಕ್ಷದಿಂದ ವಿಪ್‌ ಜಾರಿಗೊಳಿಸಲಾಗಿದೆ.

Advertisement

ನಾಗರಾಜು ಅವರಿಗೆ ಅಧ್ಯಕ್ಷ ಸ್ಥಾನ ತಪ್ಪಿಸಲು ಬಿಜೆಪಿ ಹೆಣೆದಿರುವ ತಂತ್ರಕ್ಕೆ ಪ್ರತಿತಂತ್ರ ರೂಪಿಸಿರುವ ಕಾಂಗ್ರೆಸ್‌, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವಾಗ ಸಮಿತಿ ಸದಸ್ಯರ ಪೈಕಿ ಮೂರನೇ ಎರಡರಷ್ಟು ಅಂದರೆ, ಸಮಿತಿಯಲ್ಲಿ 9 ಸದಸ್ಯರ ಪೈಕಿ, ಚುನಾವಣೆಗೆ ಕನಿಷ್ಠ 5 ಸದಸ್ಯರು ಹಾಜರಿರಬೇಕಾಗುತ್ತದೆ.

ಈ ವೇಳೆ ಮಮತಾ ಶರವಣ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಸಮಿತಿಯಲ್ಲಿರುವ ಮೈತ್ರಿ ಆಡಳಿತದ ನಾಲ್ವರು ಸದಸ್ಯರನ್ನು ಚುಣಾವಣೆಯಲ್ಲಿ ಗೈರಾಗುವಂತೆ ಮಾಡಲು ತೀರ್ಮಾನಿಸಲಾಗಿದೆ. ಆ ಮೂಲಕ ಶುಕ್ರವಾರ ಚುನಾವಣೆ ನಡೆಯದಂತೆ ನೋಡಿಕೊಂಡು ಬಿಜೆಪಿಗೆ ತಿರುಗೇಟು ನೀಡಲು ಸಿದ್ಧತೆ ಮಾಡಿಕೊಂಡಿದೆ. 

ಸಂಭಾವ್ಯ ಸ್ಥಾಯಿ ಸಮಿತಿ ಅಧ್ಯಕ್ಷರ ಪಟ್ಟಿ
* ತೆರಿಗೆ ಮತ್ತು ಆರ್ಥಿಕ-ಹೇಮಲತಾ ಗೋಪಾಲಯ್ಯ
* ಬೃಹತ್‌ ಸಾರ್ವಜನಿಕ ಕಾಮಗಾರಿ-ಲಾವಣ್ಯ ಗಣೇಶ್‌
* ಅಪೀಲು-ಸುಜಾತಾ ರಮೇಶ್‌
* ಸಾಮಾಜಿಕ ನ್ಯಾಯ-ಸೌಮ್ಯಾ ಶಿವಕುಮಾರ್‌
* ಲೆಕ್ಕಪತ್ರ-ವೇಲು ನಾಯ್ಕರ್‌
* ಆರೋಗ್ಯ-ಮುಜಾಹಿದ್‌ ಪಾಷಾ
* ಆಡಳಿತ ಮತ್ತು ಸುಧಾರಣೆ-ಆನಂದ್‌
* ತೋಟಗಾರಿಕೆ-ಐಶ್ವರ್ಯ
* ವಾರ್ಡ್‌ ಮಟ್ಟದ ಕಾಮಗಾರಿ-ಉಮ್ಮೇ ಸಲ್ಮಾ
* ಶಿಕ್ಷಣ-ಇಮ್ರಾನ್‌ ಪಾಷಾ
* ಮಾರುಕಟ್ಟೆ-ಫ‌ರೀದಾ ಇಸ್ತಿಯಾಕ್‌
* ನಗರ ಯೋಜನೆ-ನಾಗರಾಜು/ಮಮತಾ ಶರವಣ

Advertisement

Udayavani is now on Telegram. Click here to join our channel and stay updated with the latest news.

Next