ಹುಣಸೂರು: ಕ್ರೀಡಾಪಟುಗಳ ವಿಚಾರದಲ್ಲಿ ರಾಜಕೀಯ ಮತ್ತು ಶಿಫಾರಸು ಮಾಡದೆ ಅರ್ಹರನ್ನು ಆಯ್ಕೆ ಮಾಡಿದಲ್ಲಿ ಮಾತ್ರ ದೇಶದ ಗೌರವ ಮತ್ತು ಕೀರ್ತಿ ಹೆಚ್ಚುತ್ತದೆ ಎಂದು ಶಾಸಕ ಎಚ್.ವಿಶ್ವನಾಥ್ ಸೂಚಿಸಿದರು.
ನಗರದ ಡಿ.ಡಿ.ಅರಸ್ ತಾಲೂಕು ಕ್ರೀಡಾಂಗಣದಲ್ಲಿ ರೋಟರಿ ವಿದ್ಯಾ ಸಂಸ್ಥೆ ಪ್ರಾಯೋಜಕತ್ವದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಹುಣಸೂರು ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ, ಕೀಡಾಜ್ಯೋತಿ ಸ್ವೀಕರಿಸಿದ ಬಳಿಕ ಮಾತನಾಡಿದರು.
ಕ್ರೀಡೆಯಲ್ಲಿ ಸ್ವಜಾತಿ, ಸಂಬಂಧಿ, ಪಕ್ಷದವರ ಮಕ್ಕಳೆಂದು ಬಿಂಬಿಸುವ ಬದಲು ಉತ್ತಮ ಕ್ರೀಡಾಪಟುಗಳನ್ನು ಆಯ್ಕೆ ಮಾಡಿದರೆ ದೇಶದ ಕೀರ್ತಿ ಹೆಚ್ಚಾಗಲಿದೆ ಎಂದರು. ಬಿಇಒ ರೇವಣ್ಣ ಮಾತನಾಡಿ, ತಾಲೂಕಿನಲ್ಲಿ ಗುಣಮಟ್ಟ ಶಿಕ್ಷಣ ಜೊತೆಗೆ ಕ್ರೀಡೆಯನ್ನು ಒಂದು ಭಾಗವನ್ನಾಗಿ ಮಾಡಿಕೊಂಡು ಉತ್ತಮ ಕ್ರೀಡಾಪಟುಗಳನ್ನು ಜಿಲ್ಲಾಮಟ್ಟಕ್ಕೆ ಆಯ್ಕೆ ಮಾಡುತ್ತಿದ್ದೇವೆ ಎಂದರು.
ಈ ವೇಳೆ ರೋಟರಿ ವಿದ್ಯಾಸಂಸ್ಥೆ ಅಧ್ಯಕ್ಷ ಅನಂತರಾಜೇ ಅರಸ್, ಸಹಾಯಕ ಗೌರ್ನರ್ ಧರ್ಮಾಪುರ ನಾರಾಯಣ್, ದೈಹಿಕ ಶಿಕ್ಷಣಾಧಿಕಾರಿ ನಾಗಸುಂದರ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಗೌರವಾಧ್ಯಕ್ಷ ವೈಕುಂಟಯ್ಯ, ನಿರ್ದೇಶಕರಾದ ಎಚ್.ಎಸ್.ಸಚ್ಚಿತ್, ತಂಗಮಾರಿಯಪ್ಪನ್ ಹಾಜರಿದ್ದರು.
ಶಿಕ್ಷಣದ ಜೊತೆಯಲ್ಲೆ ಕ್ರೀಡೆಗೂ ಒತ್ತು ನೀಡಬೇಕಿದೆ. ದೈಹಿಕ ಶಿಕ್ಷಕರು ಗಿರಿಜನ ಮಕ್ಕಳಿಗೆ ಕ್ರೀಡೆಯಲ್ಲಿ ಆದ್ಯತೆ ನೀಡಿ ತರಬೇತುಗೊಳಿಸಿದರೆ ಉತ್ತಮ ಕ್ರೀಡಾಪಟುಗಳು ಹೊರಹೊಮ್ಮಲಿದ್ದಾರೆ.
-ವಿಶ್ವನಾಥ್, ಶಾಸಕ