Advertisement

ಅಭಿವೃದ್ಧಿ ಪರ ಅಭ್ಯರ್ಥಿ ಆಯ್ಕೆ ಮಾಡಿ

12:51 PM Apr 14, 2018 | |

ಬೀದರ: ಚುನಾವಣೆಯಲ್ಲಿ ಜಾತಿ, ಧರ್ಮ, ಕುಲ- ಗೋತ್ರಗಳನ್ನು ಲೆಕ್ಕಿಸದೇ ಅಭಿವೃದ್ಧಿ ಪರವಾಗಿ ಕೆಲಸ ಮಾಡುವ ಅಭ್ಯರ್ಥಿಯನ್ನು ಆರಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಆರ್‌.ಸೆಲ್ವಮಣಿ ಕರೆ ನೀಡಿದರು.

Advertisement

ನಗರದ ಬ್ರಿಮ್ಸ್‌ ಬೋಧಕರ ಆಸ್ಪತ್ರೆಯಲ್ಲಿ ಶುಕ್ರವಾರ ಜಿಲ್ಲಾಡಳಿತ ಮತ್ತು ಸ್ವೀಪ್‌ ಸಮಿತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ, ಇವಿಎಂ, ವಿವಿಪ್ಯಾಟ್‌ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣಾ ಕಣದಲ್ಲಿ ಅರ್ಹ ವ್ಯಕ್ತಿ ಇಲ್ಲ ಎಂದೆನಿಸಿದಲ್ಲಿ ನೋಟಾಗೆ ಮತ ಚಲಾಯಿಸಬೇಕು. ಆದರೆ ಯಾವುದೇ ಕಾರಣಕ್ಕೂ ಮತದಾನದಿಂದ ತಪ್ಪಿಸಿಕೊಳ್ಳಬಾರದು ಎಂದು ಹೇಳಿದರು. 

ಮತದಾನ ನಿಮ್ಮ ಹಕ್ಕಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರಿರುವ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು. ಚುನಾವಣೆಯಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಮತದಾನದ ವೇಳೆ ಹಣ, ವಸ್ತು ಸೇರಿದಂತೆ ಯಾವುದೇ ಆಮಿಷಗಳಿಗೆ ಒಳಪಡಬಾರದು. ತಮ್ಮ ಸ್ವಂತ ಆಲೋಚನೆಯಿಂದ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.

ಮಾಸ್ಟರ್‌ ಟ್ರೇನರ್‌ ರಮೇಶ ಮಠಪತಿ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಏ.14 ಕೊನೆಯ ದಿನವಾಗಿದೆ. 18 ವರ್ಷ ಪೂರೈಸಿದ ಪ್ರತಿಯೊಬ್ಬರೂ ಕಡ್ಡಾಯವಾಗಿ ನಿಗದಿತ ನಮೂನೆಯ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು. 

ಮುಂಬರುವ ಚುನಾವಣೆಯಲ್ಲಿ ಇವಿಎಂ ಜತೆಗೆ ವಿವಿಪ್ಯಾಟ್‌ ಯಂತ್ರ ಬಳಕೆ ಮಾಡಲಾಗುತ್ತಿದೆ. ಈ ಯಂತ್ರವು ತಾವು ಯಾವ ಗುರುತಿಗೆ ಮತ ಚಲಾಯಿಸಿದ್ದೀರಿ ಎನ್ನುವುದನ್ನು ಖಚಿತಪಡಿಸುತ್ತದೆ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಹೇಳಿದರು.
 
ಚುನಾವಣೆ ತರಬೇತಿ ಅಧಿಕಾರಿಗಳಾದ ಡಾ| ಗೌತಮ ಅರಳಿ ಮತದಾನದ ಮಹತ್ವದ ಕುರಿತು ಮಾಹಿತಿ ನೀಡಿದರು. ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎ.ಜಬ್ಟಾರ, ಬ್ರಿಮ್ಸ್‌ ವೈದ್ಯಾಧಿಕಾರಿ ಡಾ| ಸಿ.ಎಸ್‌.ರಗಟೆ, ಸ್ವೀಪ್‌ ಅಧಿಕಾರಿ ಬೀರೇಂದ್ರ ಸಿಂಗ್‌, ನರ್ಸಿಂಗ್‌ ಕಾಲೇಜು ಪ್ರಾಂಶುಪಾಲ ರಾಜಕುಮಾರ ಮಾಳಗೆ ಹಾಗೂ ಇತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಚುನಾವಣೆ ಮಹತ್ವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ನರ್ಸಿಂಗ್‌ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಸರಿಯಾದ ಉತ್ತರ ನೀಡಿದವರಿಗೆ ಬಹುಮಾನ ವಿತರಿಸಲಾಯಿತು. ರಮೇಶ ಮಠಪತಿ ಅವರು ಮತದಾನ ಕುರಿತು ಪ್ರಮಾಣ ವಚನ ಬೋಧಿಸಿದರು. ಬಳಿಕ ಇವಿಎಂ, ವಿವಿಪ್ಯಾಟ್‌ ಯಂತ್ರದ ಪ್ರಾತ್ಯಕ್ಷಿಕೆ ತೋರಿಸಲಾಯಿತು. ವಿದ್ಯಾರ್ಥಿಗಳು ಸ್ವತಃ ಮತದಾನ ಮಾಡುವ ಮೂಲಕ ಇವಿಎಂ ಮತ್ತು ವಿವಿಪ್ಯಾಟ್‌ ಕುರಿತು ಮಾಹಿತಿ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next