ಬೆಂಗಳೂರು: ರಾಜ್ಯದಲ್ಲಿ ಜಿಲ್ಲಾವಾರು ನವೋದ್ಯಮಕ್ಕೆ ಅವಕಾಶ ನೀಡುವ ಮೂಲಕ ನೂತನ ಆವಿಷ್ಕಾರಗಳಿಗೆ ಪೂರಕವಾದ ವಾತಾವರಣ ನಿರ್ಮಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಐಟಿ-ಬಿಟಿ ಇಲಾಖೆಯು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “ಎಲಿವೇಟ್ 100′ ಕಾರ್ಯಕ್ರಮದ ಅಂತಿಮ ಸುತ್ತಿನ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನವೋದ್ಯಮ ಕ್ಷೇತ್ರದಲ್ಲಿ ಕರ್ನಾಟಕವನ್ನು ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಅದರಂತೆ ರೂಪಿಸಲಾಗಿರುವ “ಎಲಿವೇಟ್ 100′ ಕಾರ್ಯಕ್ರಮದಡಿ ಅಂತಿಮವಾಗಿ ಆಯ್ಕೆಯಾಗುವ ಸ್ಟಾರ್ಟ್‌ಅಪ್‌ಗ್ಳಿಗೆ ಪ್ರೋತ್ಸಾಹ ನೀಡಲು 400 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಈಗಾಗಲೇ 46ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗ್ಳಿಗೆ ಅನುದಾನ ನೀಡಲಾಗಿದೆ. ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವ ಸಲುವಾಗಿ ಐಟಿಬಿಟಿ ಇಲಾಖೆಯು 10 ಕೋಟಿ ರೂ. ಅನುದಾನ ಮೀಸಲಿರಿಸಿದೆ ಎಂದು ತಿಳಿಸಿದರು.
ಐಟಿ, ಬಿಟಿ, ಅನಿಮೇಷನ್, ವಿಶ್ಯುಯೆಲ್ ಗೇಮಿಂಗ್ ಆ್ಯಂಡ್ ಕಾಮಿಕ್ಸ್, ಕೃಷಿ ಮತ್ತು ಜೀವ ವಿಜ್ಞಾನ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಆವಿಷ್ಕಾರ ಸೃಷ್ಟಿಸುವ ಉದ್ಯಮಿಗಳನ್ನು ಗುರುತಿಸಲಾಗುವುದು. ಪ್ರಾಥಮಿಕ ಹಂತದಲ್ಲಿನ ಯಶಸ್ಸಿನ ಆಧಾರದ ಮೇಲೆ ಸ್ಟಾರ್ಟ್‌ಅಪ್‌ಗ್ಳನ್ನು ಮೇಲ್ದರ್ಜೆಗೇರಿಸಲು ಚಿಂತಿಸಲಾಗಿದೆ. ಸ್ಟಾರ್ಟ್‌ಅಪ್‌ಗ್ಳಿಗೆ ಉತ್ತೇಜನ ನೀಡುವುದರಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಎಲಿವೇಟ್ 100 ಕಾರ್ಯಕ್ರಮದಲ್ಲಿ ಯುವಜನತೆ, ಮಹಿಳೆಯರು ಆಸಕ್ತಿಯಿಂದ ಪಾಲ್ಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಓಲಾ ಕ್ಯಾಬ್ ಸಿಇಒ ಭವಿಶ್ ಅಗರ್‌ವಾಲ್ ಮಾತನಾಡಿ, “ಕರ್ನಾಟಕ ರಾಜ್ಯವು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುತ್ತದೆ. ಸ್ಟಾರ್ಟ್‌ಅಪ್ ಪ್ರಯೋಗಗಳು ಇನ್ನಷ್ಟು ವ್ಯಾಪಕವಾಗಿ ನಡೆಯಬೇಕು. ಯಶಸ್ಸು ಮಾತ್ರವಲ್ಲದೆ ವೈಫಲ್ಯಗಳಿಂದಲೂ ಹೊಸ ವಿಚಾರಗಳನ್ನು ಕಲಿಯಬೇಕು. ಆ ಮೂಲಕ ಸಮುದಾಯದೊಂದಿಗೆ ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಐಟಿಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ರಾಜ್ಯದಲ್ಲಿ ಪ್ರತಿಭಾವಂತ ಉದ್ಯಮಿಗಳ ಸಮೂಹ ರೂಪಿಸುವ ನಿಟ್ಟಿನಲ್ಲಿ ಹಲವು ಕ್ರಿಯಾಶೀಲ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಆಲ್ಟರ್ನೇಟಿವ್ ಇಂಟೆಲಿಜೆನ್ಸ್, ರೋಬಾಟಿಕ್ಸ್‌ನಂತಹ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಉನ್ನತ ಕೇಂದ್ರಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸುಮಾರು 20,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗ್ಳನ್ನು ರೂಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಮೈಂಡ್ ಟ್ರೀ ಅಧ್ಯಕ್ಷ ಕೆ.ಕೆ.ನಟರಾಜನ್ ಇತರರು ಉಪಸ್ಥಿತರಿದ್ದರು.
ಮಧ್ಯಾಹ್ನ ಅಧಿಕೃತ ಪ್ರಕಟಣೆ
“ಎಲಿವೇಟ್ 100′ ಕಾರ್ಯಕ್ರಮದ ಅಂತಿಮ ಹಂತದ ಪ್ರಕ್ರಿಯೆಯಡಿ ಮಂಗಳವಾರ 400ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗ್ಳ ಪ್ರಾತ್ಯಕ್ಷಿಕೆ ಪ್ರದರ್ಶಿತವಾಯಿತು. ಹೊಸ ಪ್ರಯೋಗ, ಚಿಂತನೆ, ಸುಧಾರಿತ ಸೇವೆಗಳ ಬಗ್ಗೆ ತಮ್ಮ ಪರಿಕಲ್ಪನೆ, ಚಿಂತನೆಯ ಪರಿಚಯ ನೀಡಿದರು. ಕೆಲ ಪ್ರಯೋಗ, ಚಿಂತನೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಬುಧವಾರ 100 ಸ್ಟಾರ್ಟ್‌ಆಪ್‌ಗ್ಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಅವರು ಮಧ್ಯಾಹ್ನ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.