ಬೆಂಗಳೂರು: ನಗರದ ಸಂಚಾರಿ ಪೊಲೀಸ್ ಠಾಣೆಗಳ ಮುಂದೆ ನಿಲುಗಡೆ ಮಾಡಿರುವ ವಾಹನಗಳನ್ನು ಬೊಮ್ಮನಹಳ್ಳಿ ವಲಯದ ಬಿಂಗೀಪುರ ಲ್ಯಾಂಡ್‌ಫಿಲ್ ಪ್ರದೇಶಕ್ಕೆ ಸ್ಥಳಾಂತರ ಮಾಡುವ ಕುರಿತು ಸಂಚಾರ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ಹೇಳಿದರು.
ಸುಮಾರು 23 ಎಕರೆ ಪ್ರದೇಶವಿರುವ ಬಿಂಗೀಪುರ ಲ್ಯಾಂಡ್‌ಫಿಲ್ನಲ್ಲಿ ಪಾಲಿಕೆಯಿಂದ ಈಗಾಗಲೇ 4.50 ಎಕರೆ ಪ್ರದೇಶದಲ್ಲಿ ಟ್ರೀ ಪಾರ್ಕ್ ಅಭಿವೃದ್ಧಿಪಡಿಸಲಾಗಿದ್ದು, 2 ಎಕರೆ ಜಾಗವನ್ನು ಗೋಶಾಲೆ ನಿರ್ಮಿಸಲು ಕಾಯ್ದಿರಿ ಸಲಾಗಿದೆ. ಅದೇ ರೀತಿ 10 ಎಕರೆ ಜಾಗದಲ್ಲಿ ಅನುಪಯುಕ್ತ ಹಾಗೂ ಸೀಜ್ ಮಾಡಿದ ವಾಹನಗಳನ್ನು ನಿಲುಗಡೆ ಮಾಡಲು ಸಂಚಾರ ಪೋಲಿಸರಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ನಗರದ ಪೊಲೀಸ್ ಠಾಣೆಗಳ ಮುಂಭಾಗ ಹಾಗೂ ಪಾದಚಾರಿ ಮಾರ್ಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಿರುವುದರಿಂದ ಸಾರ್ವಜನಿಕರೊಂದಿಗೆ ತೊಂದರೆ ಯಾಗುತ್ತಿದ್ದು, ದಟ್ಟಣೆಗೂ ಕಾರಣವಾಗಿದೆ. ಆ ಹಿನ್ನೆಲೆಯಲ್ಲಿ ಕೂಡಲೇ ಠಾಣೆಗಳ ಮುಂಭಾಗದಲ್ಲಿ ದುಸ್ಥಿತಿ ಯಲ್ಲಿರುವ ವಾಹನಗಳನ್ನು ಬಿಂಗೀಪುರಕ್ಕೆ ಸ್ಥಳಾಂತರ ಮಾಡುವಂತೆ ಸಂಚಾರ ಪೊಲೀಸ್ ಹಿರಿಯ ಅಧಿಕಾರಿ ಗಳನ್ನು ಕೋರಲಾಗುವುದು ಎಂದು ಗಂಗಾಂಬಿಕೆ ತಿಳಿಸಿದರು. ಉಪಮೇಯರ್ ಭದ್ರೇಗೌಡ ಸೇರಿದಂತೆ ಸಂಚಾರ ಪೊಲೀಸ್ ಪಾಲಿಕೆಯ ಅಧಿಕಾರಿಗಳಿದ್ದರು.
Advertisement
ಬಿಂಗೀಪುರ ಲ್ಯಾಂಡ್‌ಫೀಲ್ ಪ್ರದೇಶದಲ್ಲಿ ಸಂಚಾರ ಪೊಲೀಸರಿಗೆ 10 ಎಕರೆ ಜಾಗವನ್ನು ನಿಗದಿಗೊಳಿಸಲಾಗಿದೆ. ಅದರಂತೆ ಗುರುವಾರ ಸಂಚಾರ ಪೊಲೀಸ್ ಅಧಿಕಾರಿ ಗಳೊಂದಿಗೆ ಸ್ಥಳ ಪರಿಶೀಲಿಸಿದ ಅವರು, ಈಗಾಗಲೇ ಭೂಮಿಯನ್ನು ಸಮತಟ್ಟುಗೊಳಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆ ಹಿನ್ನೆಲೆಯಲ್ಲಿ ಠಾಣೆಗಳ ಮುಂದಿರುವ ವಾಹನಗಳನ್ನು ಸ್ಥಳಾಂತರಿಸಲು ಚರ್ಚಿಸಲಾಗುವುದು ಎಂದರು.
10 ಲಕ್ಷ ಪರಿಹಾರ, ಉದ್ಯೋಗ ಕೊಡಿ:
ನಾಗವಾರ ಮುಖ್ಯರಸ್ತೆ ಕಾಡುಗೊಂಡನಹಳ್ಳಿ ಬಳಿ ಹಳೇ ಬಾವಿಗೆ ಬಿದ್ದು ಮೃತಪಟ್ಟಿದ್ದ ಇಬ್ಬರಿಗೆ ತಲಾ 10 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಳೆದ ಏ.27 ರಂದು ಕಾಡುಗೊಂಡನಹಳ್ಳಿ ಹತ್ತಿರದ ಅಂಗಡಿಯೊಂದರಲ್ಲಿ ಹಳೇ ಬಾವಿ ಸ್ವಚ್ಛಗೊಳಿಸಲು ಬಂದಿದ್ದ ಅಫ್ತಾಬ್ ಎಂಬ ಕಾರ್ಮಿಕ ಬಾವಿಗೆ ಬಿದ್ದಿದ್ದ. ಆತನನ್ನು ಕಾಪಾಡಲು ಗಫೂರ್ ಎಂಬಾತನೂ ಆಯತಪ್ಪಿ ಬಾವಿಯೊಳಗೆ ಬಿದ್ದಿದ್ದು, ಇಬ್ಬರೂ ಮೃತಪಟ್ಟಿದ್ದರು. ಹಿರೇಮಣಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಸಾರಕ್ಕಿ ವಾರ್ಡ್ ಪೌರಕಾರ್ಮಿಕ ರಾದ ಅಂಡಾಳಮ್ಮ ಎಂಬುವವರು ಏ.29 ರಂದು ಹೃದಯಾಘಾತ ದಿಂದ ಮೃತಪಟ್ಟಿದ್ದರು. ಈ ಸಂಬಂಧ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಅಂಡಾಳಮ್ಮ ಮಗ ದಕ್ಷಿಣಾ ಮೂರ್ತಿಗೆ 10 ಲಕ್ಷ ರೂ. ಚೆಕ್‌ವಿತರಿಸಿದರು.