ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪಠ್ಯ ಪರಿಷ್ಕರಣೆ, ಶಿಕ್ಷಣ ನೀತಿಗಳ ಬಗ್ಗೆ ಸಾಹಿತಿಗಳ ಸಲಹೆ ಪಡೆಯುವ ಬದಲು ತಮ್ಮ ಪಕ್ಷದ ಮಾಜಿ ಶಿಕ್ಷಣ ಸಚಿವರಿಂದ ಸಲಹೆ, ಮಾಹಿತಿ ಪಡೆದುಕೊಳ್ಳಲಿ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯರು ಆಗ್ರಹಿಸಿದ್ದಾರೆ.
ಶಾಸಕರ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ವೈ. ಎ.ನಾರಾಯಣಸ್ವಾಮಿ, ಶಶಿಲ್ ನಮೋಶಿ, ಚಿದಾನಂದ ಗೌಡ, ಅ. ದೇವೇಗೌಡ, ಮಾಜಿ ಸದಸ್ಯ ಅರುಣ್ ಶಹಾಪುರ ಅವರು ಪಠ್ಯ ಪರಿಷ್ಕರಿಸುವಂತೆ ಕೆಲವು ಸಾಹಿತಿಗಳು ಸರಕಾರದ ಹಿಂದೆ ಬಿದ್ದಿರುವುದನ್ನು ಖಂಡಿಸಿದರು.
ಹಿಂದೆ ಕಾಂಗ್ರೆಸ್ ಪಕ್ಷದಿಂದ ಶಿಕ್ಷಣ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿ, ತನ್ವೀರ್ ಸೇಠ್, ಕಿಮ್ಮನೆ ರತ್ನಾಕರ, ಎಚ್. ವಿಶ್ವನಾಥ್ ಮುಂತಾದವರನ್ನು ಭೇಟಿಯಾಗಿ ಮಧು ಬಂಗಾರಪ್ಪ ಸಲಹೆ ಪಡೆದುಕೊಂಡು ಮಕ್ಕಳ ಭವಿಷ್ಯ ಉಜ್ವಲವಾಗುವಂತಹ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಒಂದು ವರ್ಗದ ಕೆಲವು ಸಾಹಿತಿಗಳ ಮಾತು ಕೇಳಿಕೊಂಡು ಪಠ್ಯ ಪರಿಷ್ಕರಣೆಗೆ ಮುಂದಾದರೆ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡಿದಂತಾಗುತ್ತದೆ ಎಂದು ಶಾಸಕರು ಟೀಕಿಸಿದರು.
ಶಾಸಕರ ಸಭೆ ಕರೆಯಿರಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈ.ಎ.ನಾರಾಯಣ ಸ್ವಾಮಿ, ಜು. 7ಕ್ಕೆ ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಮಸ್ಯೆಗಳು ಮತ್ತು ಪರಿಹಾರ ಮಾರ್ಗಗಳ ಬಗ್ಗೆ ಚರ್ಚಿಸಲು ವಿಧಾನ ಪರಿಷತ್‌ನ ಪದವೀಧರ ಮತ್ತು ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರ ಬಜೆಟ್ ಪೂರ್ವ ಸಭೆ ನಡೆಸುವಂತೆ ಮನವಿ ಮಾಡಿದರು.
Related Articles
ಕಾಲಮಿತಿಯಲ್ಲಿ ವರ್ಗಾವಣೆ ಮಾಡಿ
ಶೈಕ್ಷಣಿಕ ವರ್ಷ ಆರಂಭಗೊಂಡ ಬಳಿಕ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಸುಮಾರು 90 ಸಾವಿರ ಶಿಕ್ಷಕರ ವರ್ಗಾವಣೆ ಚಟುವಟಿಕೆ ನಡೆಯುತ್ತಿದ್ದು, ಇದನ್ನು ಕಾಲಮಿತಿಯಲ್ಲಿ ಮುಗಿಸಬೇಕು. ಹೆಚ್ಚುವರಿ ಶಿಕ್ಷಕರ ಗೊಂದಲ ಪರಿಹರಿಸಬೇಕು ಎಂದು ನಾರಾಯಣ ಸ್ವಾಮಿ ಆಗ್ರಹಿಸಿದರು.
15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಮಾಡಿ
58 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ. ಈ ನಿಟ್ಟಿನಲ್ಲಿ 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಮಾಡಲು ಬಿಜೆಪಿ ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸಿ, ಅಂತಿಮ ಪಟ್ಟಿಯನ್ನೂ ಸಿದ್ಧಪಡಿಸಿತ್ತು. ಆದರೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ನೇಮಕಾತಿ ಪತ್ರ ಕೊಡಲು ಸಾಧ್ಯವಾಗಿರಲಿಲ್ಲ. ಕಾನೂನು ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಉಳಿದಂತೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಶಶೀಲ್ ನಮೋಶಿ ಆಗ್ರಹಿಸಿದರು.
ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಬೇಕು. ಅತಿಥಿ ಶಿಕ್ಷಕರನ್ನು ಖಾಯಂಗೊಳಿಸಬೇಕು ಎಂದು ನಮೋಶಿ ಆಗ್ರಹಿಸಿದರು.
ಡೈನಾಮಿಕ್ ಮಧು ಮತ್ತೊಬ್ಬ ಬಂಗಾರಪ್ಪ ಆಗಲಿ
ಶಿಕ್ಷಣ ಇಲಾಖೆ ಅತಿ ಮಹತ್ವದ್ದಾಗಿದ್ದು, ಇದನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಸರಕಾರ ವೇಗವಾಗಿ ಕೆಲಸ ಪ್ರಾರಂಭಿಸಿದ್ದು ಅಭಿನಂದನೀಯ. ನಮ್ಮ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಡೈನಾಮಿಕ್ ಆಗಿದ್ದಾರೆ. ಇವರು ಮತ್ತೊಬ್ಬ ಬಂಗಾರಪ್ಪ ಆಗಬೇಕು ಎನ್ನುವುದು ನಮ್ಮ ಆಶಯ ಎಂದು ವೈ.ಎ.ನಾರಾಯಣ ಸ್ವಾಮಿ ಹೇಳಿದರು.