Advertisement

ಬೀಜ ಸಂಸ್ಕೃತಿ

12:30 AM Jan 04, 2019 | |

ತವರು ಮನೆಯಲ್ಲಿ ಅಜ್ಜನ ಶ್ರಾದ್ಧ. ತಾಯಿಗೆ ಕೆಲಸ-ಕಾರ್ಯಗಳಲ್ಲಿ ಸಹಾಯ ಮಾಡಲೆಂದು ನಾನು ಮುನ್ನಾದಿನ ಹೋಗಿದ್ದೆ. ಶ್ರಾದ್ಧದ ದಿನ ಬೆಳಗ್ಗೆ ಐದು ಗಂಟೆಗೆ ಎದ್ದು ತರಕಾರಿ ಹೆಚ್ಚಿ ಅದರ ಸಿಪ್ಪೆ, ಬೀಜ ಇತ್ಯಾದಿಗಳನ್ನು ಎಸೆಯದೆ ಹಸುಗಳಿಗೆ ಕೊಡಲೆಂದು ಒಂದು ಮೂಲೆಯಲ್ಲಿ ಇಟ್ಟಿದ್ದೆ. ಮಧ್ಯಾಹ್ನದ ಹೊತ್ತಿಗೆಲ್ಲ ತಂದೆಯ ಅಕ್ಕ, ತಂಗಿಯರು ಅಂದರೆ ನನ್ನ ಸೋದರತ್ತೆಯಂದಿರು ಬಂದರು. ಎಲ್ಲರೂ ವೃದ್ಧಾಪ್ಯಕ್ಕೆ ಕಾಲಿಟ್ಟವರು. ಊಟವಾದ ಮೇಲೆ 75 ದಾಟಿದ, ಭೂಮಿಗೆ ಸಮಾನಾಂತರವಾಗಿ ಬೆನ್ನು ಬಾಗಿದ ನನ್ನ ಎರಡನೆಯ ಸೋದರತ್ತೆ ನಾನು ಮೂಲೆಯಲ್ಲಿ ಕತ್ತರಿಸಿಟ್ಟ ತರಕಾರಿ ತ್ಯಾಜ್ಯವನ್ನು ಅರಸುತ್ತಿದ್ದರು. ಏನನ್ನೋ ತೆಗೆದು ಕವರೊಂದಕ್ಕೆ ಹಾಕುತ್ತಿದ್ದರು. ಅವರು ಏನು ಮಾಡುತ್ತಿರಬಹುದು? ಎಂದು ನನಗೆ ಕುತೂಹಲವುಂಟಾಗಿ ಈ ಬಗ್ಗೆ ಕೇಳಿದೆ. “”ಇದರಲ್ಲಿ ಮುಳ್ಳುಸೌತೆ ಬೀಜ ಇದೆ. ಅದನ್ನು ಹುಡುಕಿ ತೆಗೆಯುತ್ತಿದ್ದೇನೆ” ಎಂದರು. “”ಅದು ಮಳೆಗಾಲದ ತರಕಾರಿ. ಬೇಸಿಗೆಯಲ್ಲಿ ಆಗುವುದಿಲ್ಲ. ಮತ್ತೆ ಏಕೆ ತೆಗೆಯುತ್ತೀರಿ? ಅಷ್ಟಕ್ಕೂ ನಿಮಗೆ ನಡೆದಾಡಲು ಆಗುವುದಿಲ್ಲ. ನೀವು ಹೇಗೆ ಬೀಜ ಹಾಕುತ್ತೀರಿ?” ಎಂದೆ. “”ಓ! ನಾನು ಇದನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಳ್ಳುತ್ತೇನೆ. ಮಳೆಗಾಲ ಬರುವಾಗ ಕೆಲಸದ ತಿಮ್ಮಪ್ಪನಲ್ಲಿ ಬಿತ್ತಲು ಹೇಳುತ್ತೇನೆ” ಎಂದರು. ಅವರು ಇನ್ನು ಹೆಚ್ಚು ಸಮಯ ಇಲ್ಲ ಎಂದು ಅವರ ಜೊತೆ ಬಂದಿದ್ದ ಅವರ ಡಾಕ್ಟರ್‌ ಮಗ ಊಟ ಮಾಡುವಾಗ ನನ್ನ ಕಿವಿಯಲ್ಲಿ ಹೇಳಿದ್ದ. ಈ ಮಳೆಗಾಲದಲ್ಲಿ ಅತ್ತೆ ಇರುವ ಖಾತರಿ ಇಲ್ಲ. ಹಾಗಿರುವ ಅತ್ತೆ ಬೀಜ ಜೋಪಾನ ಮಾಡುತ್ತಿದ್ದಾರೆ !

Advertisement

    ನನ್ನ ಬಳಿ ನನಗೆ ಬೇಕಾದ ಕೆಲವು ತರಕಾರಿ ಬೀಜಗಳು ಇಲ್ಲದಿದ್ದರೆ ತೋಟದ ಕೆಲಸಕ್ಕೆ ಬರುವ ಪೂವಯ್ಯ ಎಂಬುವನಲ್ಲಿ “”ಇಂತಿಂಥ ಬೀಜಗಳು ನಿನ್ನಲ್ಲಿ ಇವೆಯಾ?” ಎಂದು ಕೇಳುತ್ತೇನೆ. ಆಗ ಅವನು, “”ಅದೆಲ್ಲ ನನಗೆ ಗೊತ್ತಿಲ್ಲ. ನನ್ನ ಹೆಂಡತಿ ಹತ್ತಿರ ಕೇಳಿ ಆಗಬೇಕಷ್ಟೆ. ಅವಳು ಕೊಟ್ಟರೆ ತರುತ್ತೇನೆ” ಎಂದು ಹೇಳುತ್ತಾನೆ. ಆಗ ನಾನು ಯೋಚಿಸುತ್ತೇನೆ- ಅವನ ಮನೆಯಲ್ಲೇನು? ನಮ್ಮ ಮನೆಯಲ್ಲೂ ತರಕಾರಿಯ ಬೀಜ ಹಾಳಾಗದಂತೆ ಒಣಗಿಸಿ ಇಡುವುದು, ಇಲಿ-ಹೆಗ್ಗಣ ತಿನ್ನದಂತೆ ಜೋಪಾನವಾಗಿ ಕಟ್ಟಿ ಇಡುವುದು ನಾನೇ. ಅತ್ತೆಯ ಕಾಲದಲ್ಲಿ ಅತ್ತೆ ಇಡುತ್ತಿದ್ದರು. ತವರು ಮನೆಯಲ್ಲಿ ಅಮ್ಮ. ಮನೆಯ ಅಟ್ಟದಲ್ಲೋ, ಅಡಿಗೆ ಕೋಣೆಯ ಡಬ್ಬದಲ್ಲೋ ಹೆಣ್ಣುಮಕ್ಕಳು ಇಟ್ಟ ಬೀಜದ ಗಂಟುಗಳು ಬೆಚ್ಚಗೆ ಇರುತ್ತವೆ. ಬಿತ್ತನೆ ಮಾಡುವುದು ಗಂಡಸರಿರಬಹುದು. ಆದರೆ ಕಾಪಿಡುವುದು ಹೆಣ್ಣೇ. 

    ನನ್ನ ಪಕ್ಕದ ಮನೆಯ ದೊಡ್ಡ ಅಂಗಳದಲ್ಲಿ ವರ್ಷವಿಡೀ ತೊಂಡೆ, ಬೆಂಡೆ, ಬಸಳೆ, ಹರಿವೆ, ಹಾಗಲ, ಪಡುವಲ, ಅಲಸಂದೆ, ಕುಂಬಳ, ಸೋರೆ- ಹೀಗೆ ಆಯಾಯ ಋತುವಿಗೆ ಸಂಬಂಧಿಸಿದಂತೆ ಹಲವು ವಿಧದ ತರಕಾರಿ ಬೆಳೆಯುತ್ತದೆ. ಮನೆಖರ್ಚಿಗೆ ಆಗಿ ಉಳಿದುದನ್ನು ಅಂಗಡಿಗೂ ಮಾರುತ್ತಾರೆ. ಇದರ ಎಲ್ಲ ಯಶಸ್ಸು ಮನೆ ಗೃಹಿಣಿಗೆ ಸಲ್ಲುತ್ತದೆ. ನಾನು ಮಾರಾಟ ಮಾಡದಿದ್ದರೂ ನನ್ನ ಮನೆ ಅಂಗಳದಲ್ಲೂ ತರಕಾರಿ ತಪ್ಪುವುದೆಂದು ಇಲ್ಲ. ನಾನು ಹಣ ತೆತ್ತು ತರಕಾರಿ ಬೀಜ ಪಡಕೊಳ್ಳುವುದಿಲ್ಲ. ಬೀಜ ವಿನಿಮಯ ಪದ್ಧತಿಯನ್ನು ಅನುಸರಿಸುತ್ತೇನೆ. ಅಂದರೆ, ನನ್ನಲ್ಲಿರುವ ಬೀಜಗಳನ್ನು ನೆರೆಹೊರೆಯವರಿಗೊ, ಬಂಧುಗಳಿಗೊ ಕೊಟ್ಟು ಅವರಿಂದ ನನ್ನಲ್ಲಿಲ್ಲದ ಬೀಜಗಳನ್ನು ತೆಗೆದುಕೊಳ್ಳುವುದು. ಕಳೆದ ಮಳೆಗಾಲದಲ್ಲಿ ನನ್ನ ನಾದಿನಿ ಕೊಟ್ಟ ಐದು ಸೋರೆ ಬೀಜದಲ್ಲಿ ಮೂರು ಬೀಜ ಅಮ್ಮನಿಗೆ ಕೊಟ್ಟು ಎರಡು ಬೀಜ ನಾನು ಬಿತ್ತಿ¨ªೆ. ಅದು ಈಗ ಬಳ್ಳಿಯಾಗಿ ಅಂಗಳ ದಾಟಿ ಮರಕ್ಕೆ ಹಬ್ಬಿ ಸೋರೆಕಾಯಿಗಳಿಂದ ಕಂಗೊಳಿಸುತ್ತಿದೆ. ಅದರ ಸಾಂಬಾರೋ, ಪಲ್ಯವನ್ನೋ ಮಾಡಿದಾಗ ನಾದಿನಿ ಕಣ್ಣಮುಂದೆ ಬರುತ್ತಾಳೆ. ನಮ್ಮ ಬಂಧುಗಳು, ನೆರೆಹೊರೆಯವರು ಕೊಟ್ಟ ಬೀಜಗಳಲ್ಲಿ ಅವರ ನೆನಪು ಇರುತ್ತದೆ. ಅವರ ಪ್ರೀತಿ ಇರುತ್ತದೆ. 

    ನಾನು ನಮ್ಮ ಹಳ್ಳಿಯಲ್ಲಿ ಮದುವೆ, ಮುಂಜಿ, ಪೂಜೆ ಇತ್ಯಾದಿ ಸಮಾರಂಭಗಳಲ್ಲಿ ಊಟ ಮಾಡುವಾಗ ನನ್ನ ಹತ್ತಿರ ಕೂತ ಹೆಂಗಸರು “ಈಗ ಮನೆಯಲ್ಲಿ ಏನು ತರಕಾರಿ ಬೆಳೆಸಿದ್ದೀರಿ? ನಿಮ್ಮ ಹತ್ತಿರ ಊರ ಬೆಂಡೆ ಬೀಜ ಇದೆಯಾ? ಹರಿವೆ ಗಿಡಕ್ಕೆ ಹುಳ ಬಿದ್ದಿದೆ. ಬೂದಿ ಹಾಕಬೇಕಷ್ಟೆ’ ಇತ್ಯಾದಿ ತರಕಾರಿ ಸಮಾಚಾರ ಮಾತಾಡುತ್ತಾರಲ್ಲದೆ ಸೀರೆ, ಒಡವೆ ಬಗ್ಗೆ ಚರ್ಚಿಸುವುದಿಲ್ಲ.     

ದುಡ್ಡು ಕೊಟ್ಟರೆ ಇಂದು ಅಂಗಡಿಗಳಲ್ಲಿ ಪ್ಯಾಕ್‌ ಮಾಡಿದ ತರಕಾರಿ ಬೀಜ ಸಿಗುತ್ತದೆ. ಆದರೆ, ಅವುಗಳಲ್ಲಿ ಹೆಚ್ಚಿನವುಗಳು ಹೈಬ್ರಿಡ್‌ ಬೀಜದ ತಳಿಗಳು. ಅದು ಹುಟ್ಟಿದರೆ ಹುಟ್ಟಿತು. ಇಲ್ಲದಿದ್ದರೆ ಇಲ್ಲ. ಹುಟ್ಟಿದರೂ ಅವುಗಳನ್ನು ಬೆಳೆಸಲು ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕಗಳು ಅಗತ್ಯ. ನಾಟಿ ತಳಿಗಳು ಹೆಚ್ಚಿನ ಆರೈಕೆ ಬೇಡುವುದಿಲ್ಲ. ಹಟ್ಟಿಗೊಬ್ಬರ ಕೊಟ್ಟರೆ ಸಾಕು. ಹೆಚ್ಚು ನೀರು ಹಾಕಬೇಕೆಂದೂ ಇಲ್ಲ. ರೋಗ ಬಾಧೆ ಕಡಿಮೆ. ಅದಕ್ಕೆ ರೋಗ ನಿರೋಧಕ ಶಕ್ತಿ ಇದೆ. ನಾಟಿ ತಳಿಗಳಿಗೆ ಇರುವ ರುಚಿ, ಪರಿಮಳ, ಮೆತ್ತಗೆ ಬೇಯುವ ಗುಣ ಹೈಬ್ರಿಡ್‌ ತಳಿಗಳಿಗೆ ಇರುವುದಿಲ್ಲ. ಇಂದು ನಾಟಿ ತಳಿಗಳು ಒಟ್ಟಾರೆ ಹೇಳುವುದಾದರೆ ಬೀಜ ಸಂರಕ್ಷಣೆಯಲ್ಲಿ ಮತ್ತು ಮನೆಯಂಗಳದಲ್ಲಿ ತರಕಾರಿ ಬೆಳೆಸುವುದರಲ್ಲಿ ಹೆಣ್ಣಿನ ಪಾಲೇ ದೊಡ್ಡದು. ಹೆಣ್ಣಿಗೂ ಬೀಜ ಸಂಗ್ರಹಣಕ್ಕೂ ಅವಿನಾಭಾವ ಸಂಬಂಧ. ಇಡೀ ಬೀಜ ಬಿತ್ತಿ ಬೆಳೆ ಬೆಳೆಸುವ ಸಂಸ್ಕೃತಿಯ ಹಿಂದೆ ಹೆಣ್ಣಿನ ಕೊಡುಗೆ ಬಹಳ ದೊಡ್ಡದು.

Advertisement

ಸಹನಾ ಕಾಂತಬೈಲು

Advertisement

Udayavani is now on Telegram. Click here to join our channel and stay updated with the latest news.

Next