Advertisement

ಅಕ್ರಮ ಮರಳಿಗೆ ಸಕ್ರಮ ಮುದ್ರೆ!

07:33 PM Dec 28, 2019 | |

ಸೇಡಂ: ಅಕ್ರಮ ನಿಷೇಧದ ನಡುವೆಯೂ ಎಗ್ಗಿಲ್ಲದೆ ಮರಳುಗಳ್ಳರ ಹಾವಳಿ ಪ್ರತಿನಿತ್ಯ ಹೆಚ್ಚುತ್ತಲೇ ಸಾಗಿದ್ದು, ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿದೆ.

Advertisement

ಪಟ್ಟಣದ ಕಮಲಾವತಿ, ಕಾಗಿಣಾ ಸೇರಿದಂತೆ ತಾಲೂಕಿನ ಬಿಬ್ಬಳ್ಳಿ, ರಂಜೋಳ, ಹಾಬಾಳ, ತೇಲ್ಕೂರ, ಸಿಂಧನಮಡು, ಕಾಚೂರ, ಮಳಖೇಡ, ಸಂಗಾವಿ ಒಳಗೊಂಡು ಅನೇಕ ಗ್ರಾಮಗಳಲ್ಲಿ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ಸಾಗಿದೆ.

ಟ್ರ್ಯಾಕ್ಟರ್‌ಗಳಲ್ಲಿ ಮರಳು ಸಾಗಿಸುವಂತಿಲ್ಲ ಎನ್ನುವ ಸರ್ಕಾರದ ಕಟ್ಟುನಿಟ್ಟಿನ ಸೂಚನೆ ನಡುವೆಯೂ ರಂಜೋಳ ಮತ್ತು ಕೆಲ ಭಾಗಗಳಲ್ಲಿ ಟ್ರಾಕ್ಟರ್‌ಗಳ ಮೂಲಕ ಮರಳು ಸಾಗಾಟ ಮಾಡಿ, ಪ್ರಕೃತಿಗೆ ಮಡಿಲನ್ನು ಬಗೆಯಲಾಗುತ್ತಿದೆ. ಇದರಿಂದ ನದಿಗಳು ಬರಿದಾಗುತ್ತಿವೆ.

ಯಾದಗಿರಿ ಜಿಲ್ಲೆಯ ಶಹಾಪುರ, ಹತ್ತಿಕುಣಿ, ದೇವದುರ್ಗದಿಂದ ಪ್ರತಿನಿತ್ಯ ಹತ್ತಾರು ಟಿಪ್ಪರ್‌ ಗಳು ಮರಳು ತಂದು ಪಟ್ಟಣ ಸೇರಿದಂತೆ ಕಲಬುರಗಿಯಲ್ಲಿ ಸುರಿಯುತ್ತಿವೆ. ಹತ್ತರ ಪೈಕಿ ಎರಡು ಅಥವಾ ಮೂರು ಟಿಪ್ಪರ್‌ಗಳು ಸರ್ಕಾರಕ್ಕೆ ತುಂಬಿದ ರಾಯಧನ (ರಾಯಲ್ಟಿ) ಆಧಾರದ ಮೇಲೆ ಮರಳು ಸಾಗಿಸಿ, ಉಳಿದವನ್ನು ಅಧಿಕಾರಿಗಳು ಮತ್ತು ಸರ್ಕಾರದ ಕಣ್ಣಿಗೆ ಮಣ್ಣೆರೆಚಿ ಸಾಗಿಸಲಾಗುತ್ತಿದೆ.

ಬೇಕಾಬಿಟ್ಟಿ ದರ: ಮರಳಿಲ್ಲದೆ ಮನೆ ಕಟ್ಟಲಾಗದ ಪರಿಸ್ಥಿತಿಯಲ್ಲಿರುವ ಸಾರ್ವಜನಿಕರು ಅನಿವಾರ್ಯವಾಗಿ ಅಕ್ರಮ ಮರಳಿಗೆ ಮೊರೆ ಹೋಗುವಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಟಿಪ್ಪರ್‌ ಮತ್ತು ಟ್ರ್ಯಾಕ್ಟರ್‌ ಮಾಲೀಕರು ಮನಸೋ ಇಚ್ಛೆ ಹಣ ವಸೂಲಿ ಮಾಡುತ್ತಿದ್ದಾರೆ.

Advertisement

ಓವರ್‌ ಲೋಡ್‌: ಕಾನೂನು ಪ್ರಕಾರ ಸೂಚಿತ ಪ್ರಮಾಣದಲ್ಲಿ ಮಾತ್ರ ಮರಳು ಸಾಗಾಟ ಮಾಡಬೇಕು. ಹೆಚ್ಚುವರಿ ಮರಳು (ಓವರ್‌
ಲೋಡ್‌) ಸಾಗಿಸುವಂತಿಲ್ಲ. ಇದನ್ನು ಲೆಕ್ಕಿಸದೇ ಸಾಗಾಟ ನಡೆದಿದೆ.

ಬಂಡಿಯಲ್ಲಿ ಮರಳು ಸಾಗಾಟ: ಒಂದೆಡೆ ಟ್ರ್ಯಾಕ್ಟರ್‌, ಟಿಪ್ಪರ್‌ಗಳ ಹಾವಳಿ ಜಾಸ್ತಿಯಾದರೆ, ಇನ್ನೊಂದೆಡೆ ಕೃಷಿಗಾಗಿ ಬಳಸುವ ಒಂಟೆತ್ತಿನ ಬಂಡಿ, ಜೋಡೆತ್ತಿನ ಬಂಡಿಗಳ ಮೂಲಕವೂ ಮರಳು ಸಾಗಾಟ ದಂಧೆ ನಡೆದಿದೆ. ಟ್ರ್ಯಾಕ್ಟರ್‌ ಮತ್ತು ಟಿಪ್ಪರಗಳಿಗೆ ಸರ್ಕಾರ ನಿರ್ಬಂಧ ಹೇರಿದ್ದರೆ, ಇತ್ತ ಬಂಡಿಗಳ ಮೂಲಕವೂ ಮರಳು ಸಾಗಿಸಲಾಗುತ್ತಿದೆ. ಕೃಷಿಯನ್ನು ತೊರೆದ ಅನೇಕರು ಮರಳುಗಾರಿಕೆಯನ್ನೇ ತಮ್ಮ ವೃತ್ತಿ ಮಾಡಿಕೊಂಡಿದ್ದಾರೆ.

ತಗ್ಗುಗಳ ಬೀಡಾದ ನದಿ: ನದಿಗಳಲ್ಲಿ ಮರಳು ತೆಗೆಯುವುದರಿಂದ ತಗ್ಗುಗಳು ನಿರ್ಮಾಣವಾಗಿವೆ. ಕೆಲವೆಡೆ ನದಿಯಾಳದಲ್ಲಿ ದೊಡ್ಡ ಹೊಂಡಗಳು ನಿರ್ಮಾಣವಾಗಿ, ಈಜಾಡಲು ಹೋದವರ ಪ್ರಾಣಕ್ಕೆ ಸಂಚಕಾರ ತಂದ ಅನೇಕ ಉದಾಹರಣೆಗಳು ಇವೆ.

ಅಕ್ರಮ ಮರಳುಗಾರಿಕೆ ತಡೆಯಲು ತಂಡ ರಚಿಸಲಾಗಿದೆ. ಕೃಷಿ ಚಟುವಟಿಕೆಗೆ ಬಳಸುವ ಎತ್ತಿನ ಬಂಡಿಗಳಲ್ಲಿ ಮರಳು ಸಾಗಾಟ ಅವ್ಯಾಹತವಾಗಿದೆ. ಎಲ್ಲವನ್ನೂ ಗಮನಿಸುತ್ತಿದ್ದು, ಶೀಘ್ರವೇ ಇದಕ್ಕೆ ತಡೆ ಹಾಕಲಾಗುವುದು.
ಬಸವರಾಜ ಬೆಣ್ಣೆಶಿರೂರ್‌,
ತಹಶೀಲ್ದಾರ್‌

ನಿರ್ಬಂಧ ಹೇರಿದರೂ ಮರಳುಗಾರಿಕೆ ಸರಾಗವಾಗಿ ಸಾಗಿದೆ. ಹಗಲಲ್ಲೇ ಟ್ರ್ಯಾಕ್ಟರ್‌ ಗಳ ಮೂಲಕ ಮರಳು ಸಾಗಿಸಲಾಗುತ್ತಿದೆ. ಈ
ಕುರಿತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕೈಕಟ್ಟಿ ಕುಳಿತಿದ್ದಾರೆ. ಇದೇ ರೀತಿ ಮುಂದುವರಿದಲ್ಲಿ ಮುಂದೆ ನದಿಗಳಲ್ಲಿ ನೀರು ಸಂಗ್ರಹ ದುಸ್ತರವಾಗಲಿದೆ.
ರಾಮಚಂದ್ರ ಗುತ್ತೇದಾರ,
ಮುಖಂಡ, ರಂಜೋಳ

 

„ಶಿವಕುಮಾರ ಬಿ. ನಿಡಗುಂದಾ

Advertisement

Udayavani is now on Telegram. Click here to join our channel and stay updated with the latest news.

Next