ಸೇಡಂ: ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಿಂದ ಹಿಂದಿರುಗಿದವರಲ್ಲಿ ಕೋವಿಡ್ ಸೋಂಕು ದೃಢವಾದ ಪ್ರಕರಣಗಳು ಬೆಳಕಿಗೆ ಬಂದಿದ್ದವು, ಆದರೀಗ ನಾಲ್ಕು ವರ್ಷದ ಬಾಲಕನಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಆತಂಕ ಹೆಚ್ಚಿಸಿದೆ.
ತಾಲೂಕಿನ ಸೂರವಾರ ಗ್ರಾಮದ ನಾಲ್ಕು ವರ್ಷದ ಬಾಲಕ ಕೆಲ ದಿನಗಳ ಹಿಂದೆ ತೀವ್ರ ಉಸಿರಾಟ ತೊಂದರೆ ಮತ್ತು ಜ್ವರದಿಂದ ಬಳಲುತ್ತಿದ್ದ. ಈತನನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿತ್ತು. ಕೋವಿಡ್ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಕಲಬುರಗಿಯ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಈಗ ಬಾಲಕನ ವರದಿ ಬಂದಿದ್ದು, ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬಾಲಕ ಮತ್ತು ಆತನ ಕುಟುಂಬದ ಪ್ರಯಾಣ ಇತಿಹಾಸವನ್ನು ವೈದ್ಯರು ಪರಿಶೀಲಿಸಿದರೂ ಸಂಪರ್ಕಕ್ಕೆ ಬಂದ ಖಚಿತ ಮಾಹಿತಿ ದೊರೆಯುತ್ತಿಲ್ಲ ಎನ್ನಲಾಗಿದೆ. ಇದರಿಂದ ಸಾಮುದಾಯಿಕವಾಗಿ ಕೋವಿಡ್ ಹರಡಲು ಆರಂಭಿಸಿದೆಯೇ ಎನ್ನುವ ದುಗುಡ ಜನರಲ್ಲಿ ಮನೆ ಮಾಡಿದೆ. ಈಗಾಗಲೇ ಸೂರವಾರ ಗ್ರಾಮದ ಸೋಂಕಿತ ಬಾಲಕ ವಾಸಿಸುವ ಬಡಾವಣೆಯನ್ನು ಕಂಟೈನ್‌ಮೆಂಟ್ ಝೋನ್ ಆಗಿ ಪರಿಗಣಿಸಲಾಗಿದೆ. ಬಾಲಕನಿಗೆ ಚಿಕಿತ್ಸೆ ನೀಡಿದ ಸೇಡಂನ ಸಾರ್ವಜನಿಕ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿ ಆರು ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಬಾಲಕನಲ್ಲಿ ಕೋವಿಡ್ ದೃಢವಾಗುತ್ತಿದ್ದಂತೆ ಸರ್ಕಾರಿ ಆಸ್ಪತ್ರೆಯನ್ನು ಕೆಲ ಕಾಲ ಮುಚ್ಚಿ, ಸ್ಯಾನಿಟೈಸರ್ ಮಾಡಲಾಗಿದ್ದು, ಸೋಮವಾರ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಸುರೇಶ ಮೇಕಿನ್ ತಿಳಿಸಿದ್ದಾರೆ.
ಗಡಿಗಳಲ್ಲಿ ಬೇಕಾಬಿಟ್ಟಿ ಸಂಚಾರ
ಸೇಡಂ ತಾಲೂಕಿನ ತೆಲಂಗಾಣ ಗಡಿಗೆ ಹೊಂದಿಕೊಂಡಿದೆ. ಕೋವಿಡ್ ಲಾಕಡೌನ್ ಸಡಿಲವಾಗುತ್ತಿದ್ದಂತೆ ಗಡಿಯಲ್ಲೂ ಪರಿಶೀಲನೆ ವ್ಯವಸ್ಥೆಯೇ ತಲೆಕೆಳಗಾಗಿದೆ. ಪ್ರತಿನಿತ್ಯ ನೂರಾರು ಜನ ತೆಲಂಗಾಣಕ್ಕೆ ಸಂಚರಿಸುತ್ತಿದ್ದಾರೆ. ಇದರಿಂದಲೂ ಕೋವಿಡ್ ವ್ಯಾಪಿಸುವ ಭೀತಿ ಜನರಲ್ಲಿ ಎದುರಾಗಿದೆ.