Advertisement

ಹುರಿಯತ್‌ ಉಗ್ರರ ಭದ್ರತೆ ವಾಪಸ್‌

01:00 AM Feb 18, 2019 | Team Udayavani |

ಶ್ರೀನಗರ: ಪುಲ್ವಾಮಾ ಘಟನೆ ಹಿನ್ನೆಲೆಯಲ್ಲಿ ಒಂದೊಂದೇ ಕಠಿನ ಕ್ರಮ ಕೈಗೊಳ್ಳುತ್ತಿರುವ ಭಾರತ ಮುಂದಿನ ಹೆಜ್ಜೆಯಾಗಿ, ಆರು ಮಂದಿ ಕಾಶ್ಮೀರ ಪ್ರತ್ಯೇಕತಾ ವಾದಿಗಳಿಗೆ ನೀಡುತ್ತಿದ್ದ ಎಲ್ಲ ಭದ್ರತೆಯನ್ನು ವಾಪಸ್‌  ಪಡೆದಿದೆ. ಕಾಶ್ಮೀರವನ್ನು ಪ್ರತ್ಯೇಕಿಸಬೇಕು ಎಂದು ದೇಶದ ವಿರುದ್ಧ ಹೋರಾಡುತ್ತಲೇ ಸರಕಾರದಿಂದಲೇ 29 ವರ್ಷಗಳಿಂದ ಭದ್ರತೆ ಪಡೆಯುತ್ತಿದ್ದ ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳಿಗೆ ತಕ್ಕ ಪಾಠ ಇದಾಗಿದೆ. 

Advertisement

ಪ್ರತ್ಯೇಕತಾವಾದಿಗಳಾದ ಮೀರ್ವಾಯ್‌j ಉಮರ್‌ ಫಾರೂಕ್‌, ಅಬ್ದುಲ್‌ ಘನಿ ಭಟ್‌, ಬಿಲಾಲ್‌ ಲೋನ್‌, ಹಶೀಮ್‌ ಖುರೇಶಿ, ಫ‌ಜಲ್‌ ಹಖ್‌ ಖುರೇಶಿ, ಶಬೀರ್‌ ಶಾಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ. ಈ ಆದೇಶ ರವಿವಾರದಿಂದಲೇ ಜಾರಿಗೆ ಬಂದಿದೆ. 

ಇತರ ಪ್ರತ್ಯೇಕತಾವಾದಿ ಮುಖಂಡರಿಗೆ ಭದ್ರತೆ ಅಥವಾ ಸೌಲಭ್ಯವನ್ನು ನೀಡುತ್ತಿದ್ದರೆ ಅದನ್ನೂ° ಪರಿಶೀಲಿಸಲಾಗುತ್ತದೆ ಮತ್ತು ತತ್‌ಕ್ಷಣವೇ ಹಿಂಪಡೆಯಲಾಗುತ್ತದೆ ಎಂದು ತಿಳಿಸಲಾಗಿದೆ. 

ಗೃಹ ಸಚಿವ ರಾಜನಾಥ್‌ ಸಿಂಗ್‌ ಶುಕ್ರವಾರ ಕಾಶ್ಮೀರಕ್ಕೆ ಭೇಟಿ ನೀಡಿದ್ದಾಗ ಮಾತನಾಡಿ, ಕಾಶ್ಮೀರದ ಕೆಲವು ಸಂಘಟನೆಗಳಿಗೆ ಪಾಕ್‌ ಐಎಸ್‌ಐ ಮತ್ತು ಉಗ್ರ ಸಂಘಟನೆಗಳೊಂದಿಗೆ ಸಂಬಂಧವಿದೆ. ಇವರ ಭದ್ರತೆಯನ್ನು ಮರುಪರಿಶೀಲಿಸಬೇಕು ಎಂದು ಹೇಳಿದ್ದರು.

ಭದ್ರತೆ ಏಕೆ ಇತ್ತು? 
ಈ ಪ್ರತ್ಯೇಕತಾವಾದಿಗಳ ಜೀವಕ್ಕೆ ಅಪಾಯವಿದೆ ಎಂಬ ಕಾರಣಕ್ಕೆ ಕೇಂದ್ರ ಸರಕಾರದ ಸಲಹೆಯ ಮೇರೆಗೆ ರಾಜ್ಯ ಸರಕಾರ ಪೊಲೀಸರನ್ನು ನೇಮಿಸಿತ್ತು.  ಈ ಹಿಂದೆ 1990ರಲ್ಲಿ ಉಮರ್‌ ಫಾರೂಕ್‌ ತಂದೆ ಮೀರ್ವಾಯ್‌j ಫಾರೂಕ್‌ರನ್ನು ಹಿಜ್ಬುಲ್‌ ಮುಜಾಹಿದೀನ್‌ ಉಗ್ರರು ಹತ್ಯೆಗೈದಿದ್ದರು. ಹಾಗೆಯೇ ಬಿಲಾಲ್‌ ಲೋನ್‌ರ ತಂದೆ ಅಬ್ದುಲ್‌ ಘನಿ ಲೋನ್‌ರನ್ನೂ ಉಗ್ರರು ಹತ್ಯೆಗೈದಿದ್ದರು. ಈ ಹಿನ್ನೆಲೆಯಲ್ಲಿ  ಭದ್ರತೆ ಒದಗಿಸಲಾಗಿತ್ತು. 
ಆದರೆ ಪಾಕಿಸ್ಥಾನ ಪರವಾಗಿರುವ ಮತ್ತು ಪದೇ ಪದೆ ಭಾರತ ಸರಕಾರದ ವಿರುದ್ಧ ಹೇಳಿಕೆ ನೀಡುವ ಹಾಗೂ ಸ್ಥಳೀಯ ಯುವಕರನ್ನು ಎತ್ತಿಕಟ್ಟುವ ಸೈಯದ್‌ ಅಲಿ ಶಾ ಗಿಲಾನಿ  ಮತ್ತು ಜೆಕೆಎಲ್‌ಎಫ್ ಮುಖ್ಯಸ್ಥ ಯಾಸೀನ್‌ ಮಲಿಕ್‌ಗೆ ಭದ್ರತೆಯನ್ನು ಮೊದಲಿನಿಂದಲೂ ನೀಡುತ್ತಿರಲಿಲ್ಲ.

Advertisement

ನಾವೇನೂ ಭದ್ರತೆ ಕೇಳಿರಲಿಲ್ಲ!
ಸರಕಾರದ ಭದ್ರತೆ ನಮಗೆ ಬೇಕಿಲ್ಲ. ಅದನ್ನು ನಾವು ಕೇಳಿರಲೂ ಇಲ್ಲ ಎಂದು ಪ್ರತ್ಯೇಕತಾವಾದಿ ಸಂಘಟನೆಗಳ ಮುಖಂಡ ಮೀರ್ವಾಯ್‌j ಉಮರ್‌ ಫಾರೂಕ್‌ ಹೇಳಿದ್ದಾರೆ. ಪೊಲೀಸ್‌ ಭದ್ರತೆ ಇದ್ದರೂ ಇಲ್ಲದಿದ್ದರೂ ನಮ್ಮ ಕಾರ್ಯನಿರ್ವಹಣೆ ಹಿಂದಿನಂತೆಯೇ ಮುಂದುವರಿಯುತ್ತದೆ. ಈ ಹಿಂದೆ ಭದ್ರತೆ ಒದಗಿಸಲು ನಿರ್ಧರಿಸಿದ್ದು ಸರಕಾರವೇ. ಈ ನಿಲುವಿನಿಂದ ಕಾಶ್ಮೀರದ ಸ್ಥಿತಿಯಲ್ಲಿ ಯಾವ ಸುಧಾರಣೆಯೂ ಆಗದು ಮತ್ತು ಬಿಗಡಾಯಿಸುವುದೂ ಇಲ್ಲ. ಅಷ್ಟೇ ಅಲ್ಲ, ಕಾಶ್ಮೀರ ಪ್ರತ್ಯೇಕಗೊಳ್ಳಬೇಕು ಎಂಬ ನಮ್ಮ ನಿಲುವು ಕೂಡ ಸ್ಪಷ್ಟವಿದೆ ಎಂದು ಅವರು ಹೇಳಿದ್ದಾರೆ.

ನಿಮ್ಮಲ್ಲಿ  ಉಕ್ಕಿರುವ ಆಕ್ರೋಶದ ಬೆಂಕಿ ನನ್ನೊಳಗೂ ಉರಿಯುತ್ತಿದೆ
“ಪುಲ್ವಾಮಾ ದಾಳಿಯ ಅನಂತರ ದೇಶದ ಜನರಲ್ಲಿ ಎಂತಹ ಆಕ್ರೋಶವಿದೆ ಎಂಬುದು ನನಗೆ ಅರ್ಥವಾಗುತ್ತದೆ. ನಿಮ್ಮೆದೆಯಲ್ಲಿರುವ ಆಕ್ರೋಶದ ಬೆಂಕಿ ನನ್ನೊಳಗೂ ಉರಿಯುತ್ತಿದೆ. ಯೋಧರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪುನರುಚ್ಚರಿಸಿದ್ದಾರೆ. ಬಿಹಾರದಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಬೇಗುಸರಾಯ್‌ಯಲ್ಲಿ  ರ್ಯಾಲಿ ನಡೆಸಿದ ವೇಳೆ ಅವರು ಈ ಮಾತುಗಳನ್ನಾಡಿದ್ದಾರೆ. ದಾಳಿಯಲ್ಲಿ ಅಸುನೀಗಿದ ಬಿಹಾರದ ಯೋಧರಾದ ಸಂಜಯ್‌ ಕುಮಾರ್‌ ಸಿನ್ಹಾ ಮತ್ತು ರತನ್‌ ಕುಮಾರ್‌ ಠಾಕೂರ್‌ರನ್ನು ಸ್ಮರಿಸಿ, ಅವರಿಗೆ ಗೌರವ ಸಮರ್ಪಿಸಿದ ಪ್ರಧಾನಿ ನರೇಂದ್ರ ಮೋದಿ, ಹುತಾತ್ಮರ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ಮೊಮ್ಮಕ್ಕಳೂ ಸೇನೆಗೆೆ
ಅವನ ಗಿಣಿಮೂಗು, ಅವನ ಭುಜ ನೋಡಿ ಅವನು ನನ್ನ ಮಗ ಎಂದು ಗೊತ್ತಾಯಿತು. ನನ್ನ ಮಗನನ್ನು ಕೊಂದಂತೆ ಮತ್ಯಾರಿಗೂ ಆಗಬಾರದು. ಹಾಗಾಗಿ ನನ್ನ ಮೊಮ್ಮಕ್ಕಳನ್ನು ಮುಂದೆ ಭಾರತೀಯ ಸೇನೆಗೆ ಸೇರಿಸ್ತೇನೆ. ಅಷ್ಟೇ ಅಲ್ಲ, ಭಾರತ ದೇಶದ ಪ್ರತಿ ಮನೆಯಿಂದಲೂ ಒಬ್ಬರು ಸೇನೆ ಸೇರಬೇಕು.
– ಹೊನ್ನಯ್ಯ, ಹುತಾತ್ಮ ಯೋಧ ಗುರು ತಂದೆ

ನಾನೂ ಸೈನ್ಯ ಸೇರ್ತೇನೆ
ನನ್ನ ಪತಿ ಇನ್ನೂ ಹತ್ತು ವರ್ಷ ಭಾರತೀಯ ಸೇನೆಯಲ್ಲಿ  ಸೇವೆ ಸಲ್ಲಿಸಬೇಕು ಅಂದು ಕೊಂಡಿದ್ರು. ಆದರೆ ಅವರಿಂದ ಸಾಧ್ಯವಾಗ ಲಿಲ್ಲ. ನಾನು ಭಾರತೀಯ ಸೇನೆಯನ್ನು ಸೇರಿ ಅವರ ಆಸೆಯನ್ನು ಪೂರೈಸಬೇಕು ಎಂದು ಅನಿಸುತ್ತಿದೆ. ಅದಕ್ಕೆ  ನಾನೂ ಸೈನ್ಯ ಸೇರಬೇಕು ಎಂದಿರುವೆ.
– ಕಲಾವತಿ, ವೀರಯೋಧ ಗುರು ಪತ್ನಿ

ಗಡಿಯಿಂದ ಕಾಲ್ಕಿತ್ತ ಉಗ್ರರು
ಪುಲ್ವಾಮಾ ದಾಳಿಯ ಬಳಿಕ ಭಾರತದ ಪ್ರತೀಕಾರದ ಭೀತಿಯಿಂದಾಗಿ ಪಾಕಿಸ್ಥಾನ ಉಗ್ರರ ನೆಲೆಗಳನ್ನು ಸ್ಥಳಾಂತರಿಸಿದೆ ಎನ್ನಲಾಗಿದೆ. ಗಡಿ ನಿಯಂತ್ರಣ ರೇಖೆ ಬಳಿ ಇದ್ದ ಎಲ್ಲ ಉಗ್ರ ನೆಲೆಗಳನ್ನು ಸೇನಾ ನೆಲೆಗೆ ಮತ್ತು ಸೇನಾ ನೆಲೆಯ ಸಮೀಪದ ಇತರ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಆದರೆ ಗಡಿಯಲ್ಲಿ ಹೆಚ್ಚುವರಿ ಸೇನೆ ಅಥವಾ ಶಸ್ತ್ರಾಸ್ತ್ರ ನಿಯೋಜನೆ ಮಾಡಿಲ್ಲ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಸದ್ಯ ಗಡಿ ನಿಯಂತ್ರಣ ರೇಖೆಯ ಬಳಿ ಭಾರತ ದಾಳಿ ನಡೆಸಿದರೆ ಯಾವುದೇ ಉಗ್ರರ ನೆಲೆ ಇಲ್ಲ. ಹೀಗಾಗಿ ಭಾರತೀಯ ಸೇನೆಯು ಪಾಕ್‌ ಸೇನಾ ನೆಲೆಯ ಮೇಲೆಯೇ ದಾಳಿ ಮಾಡಬೇಕಾಗುತ್ತದೆ. ಇದರಿಂದಾಗಿ ಇನ್ನಷ್ಟು ರಾಜತಾಂತ್ರಿಕ ಬಿಕ್ಕಟ್ಟು ಎದುರಾಗುತ್ತದೆ. ಅಷ್ಟೇ ಅಲ್ಲ, ಭಾರತ ಉಗ್ರ ದಾಳಿಗೆ ಪ್ರತೀಕಾರವಾಗಿ ಸೇನಾ ದಾಳಿ ನಡೆಸಬಹುದು ಎಂದು ಪಾಕಿಸ್ಥಾನ ಮೊದಲೇ ನಿರೀಕ್ಷಿಸಿತ್ತು. ಹೀಗಾಗಿಯೇ ಚಳಿಗಾಲ ದಲ್ಲಿ ಗಡಿಯಾದ್ಯಂತ ಇರುವ ಸೇನಾ ನೆಲೆಗಳನ್ನು ಖಾಲಿ ಮಾಡಿರಲಿಲ್ಲ. ಸುಮಾರು 50ರಿಂದ 60 ಸೇನಾ ನೆಲೆಗಳನ್ನು ಚಳಿಗಾಲ ಮುಗಿಯುತ್ತಿ ದ್ದಂತೆ ಇದೇ ಸಮಯದಲ್ಲಿ ಖಾಲಿ ಮಾಡುತ್ತಿತ್ತು ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಸುಳ್ಳು ಸುದ್ದಿ ಹಬ್ಬಿಸಬೇಡಿ 
ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸುವಂತೆ ಸಿಆರ್‌ಪಿಎಫ್ ಮನವಿ ಮಾಡಿದೆ. “ಹುತಾತ್ಮ ಯೋಧರ ಛಿದ್ರವಾದ ದೇಹದ ಅಂಗಗಳು’ ಎಂದು ಹೇಳಿ ಫೇಕ್‌ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್ ಇಂಥದ್ದೊಂದು ಮನವಿಮಾಡಿದೆ. ಇಂಥ ಸುಳ್ಳು ಸುದ್ದಿಗಳನ್ನು ದಯವಿಟ್ಟು ಹಬ್ಬಬೇಡಿ. ಸಮಾಜದಲ್ಲಿ ದ್ವೇಷ ಬಿತ್ತುವ ಸಂದೇಶಗಳನ್ನು ಹರಡಬೇಡಿ. ಅಂಥ ಯಾವುದಾದರೂ ಪೋಸ್ಟ್‌ಗಳು ಕಂಡುಬಂದರೆ, webpro@crpf.gov.in ಗೆ ಮಾಹಿತಿ ನೀಡಿ ಎಂದು ಸಿಆರ್‌ಪಿಎಫ್ ಟ್ವೀಟ್‌ ಮಾಡಿದೆ. ಅಲ್ಲದೆ, ದೇಶದ ಹಲವೆಡೆ ಕಾಶ್ಮೀರಿಗರ ಮೇಲೆ ಹಲ್ಲೆ ನಡೆಯುತ್ತಿದೆ ಎಂಬ  ಸುಳ್ಳು ಸುದ್ದಿಗಳೂ ಹರಿದಾಡುತ್ತಿದ್ದು, ಅವುಗಳನ್ನೂ ಶೇರ್‌ ಮಾಡಬೇಡಿ  ಎಂದು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next