ಬೆಂಗಳೂರು: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಎಚ್.ಡಿ.ಕುಮಾರ ಸ್ವಾಮಿಯವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಬಂದಾಗ ಭದ್ರತಾ ಲೋಪ ಉಂಟಾಯಿತು ಎಂಬ ವಿಚಾರ ಇದೀಗ ತೀವ್ರ ಸ್ವರೂಪ ಪಡೆದಿದೆ.
ಭದ್ರತಾ ಲೋಪ ಕುರಿತು ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಮತ್ತು ಗುಪ್ತಚರ ಇಲಾಖೆ ಎಡಿಜಿಪಿ
ಅಮರ್ ಕುಮಾರ್ ಜೆ.ಪಿ.ನಗರದಲ್ಲಿರುವ ಸಿಎಂ ಕುಮಾರಸ್ವಾಮಿ ಮನೆಗೆ ಭೇಟಿ ನೀಡಿ ಮಳೆಯಿಂದ ಸಂಚಾರ
ದಟ್ಟಣೆ ಉಂಟಾಗಿದ್ದರಿಂದ ತೊಂದರೆಯಾಯಿತು ಎಂದು ಸಮಜಾಯಿಷಿ ನೀಡಿದರು.
ಬುಧವಾರ ಮಮತಾ ಬ್ಯಾನರ್ಜಿ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಚಾಲುಕ್ಯ ವೃತ್ತದಿಂದ ವಿಧಾನಸೌಧಕ್ಕೆ ನಡೆದುಕೊಂಡೆ ಬಂದಿದ್ದರು.ಈ ವೇಳೆ ಅಲ್ಲೇ ಇದ್ದ ನೀಲಮಣಿ ಎನ್.ರಾಜು ಅವರಿಗೆ ತರಾಟೆಗೆ ತೆಗೆದುಕೊಂಡಿದ್ದು, ಮಾಜಿ ಪ್ರಧಾನಿ ದೇವೇಗೌಡ ಹಾಗೂ ನೂತನ ಸಿಎಂ ಕುಮಾರಸ್ವಾಮಿಗೆ ಸಂಚಾರ ದಟ್ಟಣೆ ಬಗ್ಗೆ ದೂರು ನೀಡಿದ್ದರು. ಅಧಿಕಾರಿಗಳ ಬದಲಾವಣೆಗೂ ಸೂಚಿಸಿದ್ದರು ಎನ್ನಲಾಗಿದೆ.
ಡಿಜಿ ಬದಲಾವಣೆ?: ಭದ್ರತಾ ವೈಫಲ್ಯದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.
ರಾಜು ಅವರನ್ನು ವರ್ಗಾವಣೆ ಮಾಡಿ ಹಿರಿಯ ಐಪಿಎಸ್ ಅಧಿಕಾರಿ, ಕರ್ನಾಟಕ ಪೊಲೀಸ್ ಹೌಸಿಂಗ್ ಕಾರ್ಪೋರೇಷನ್ ಮುಖ್ಯಸ್ಥ ಕಿಶೋರ್ ಚಂದ್ರ ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಿಸುವ
ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.