Advertisement

ಸುಪ್ರೀಂ ಕೋರ್ಟ್‌ನಿಂದ ಭದ್ರತಾಲೋಪ ವಿಚಾರಣೆ ಸ್ವಾಗತಾರ್ಹ

12:36 AM Jan 12, 2022 | Team Udayavani |

ಇತ್ತೀಚೆಗಷ್ಟೇ ಪಂಜಾಬ್‌ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರು 20 ನಿಮಿಷಗಳ ವರೆಗೆ ಹೆದ್ದಾರಿಯಲ್ಲಿ ನಿಂತು ಭಾರೀ ಭದ್ರತಾ ಲೋಪವಾಗಿತ್ತು. ಪಂಜಾಬ್‌ನ ಫಿರೋಜ್‌ಪುರಕ್ಕೆ ರಸ್ತೆ ಮಾರ್ಗದಲ್ಲಿ ಮೋದಿ ತೆರಳುತ್ತಿದ್ದು, ಈ ದಾರಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದರಿಂದ ಅವರು 20 ನಿಮಿಷ ಕಾದು, ಬಳಿಕ ವಾಪಸ್‌ ಹೋಗಿದ್ದರು. ಇದು ದೇಶ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರೀ ಸುದ್ದಿಯಾಗಿತ್ತು.

Advertisement

ಪ್ರಧಾನಿ ಅವರ ಕಾರು ಪಾಕಿಸ್ಥಾನ ಗಡಿಯಿಂದ ಕೇವಲ 10 ಕಿ.ಮೀ. ದೂರದಲ್ಲಿ ನಿಂತಿತ್ತು ಎಂಬುದು ಗಮನಾರ್ಹ. ಅಂದರೆ ಇಂದಿನ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಕಾಲದಲ್ಲಿ 10 ಕಿ.ಮೀ. ದೂರದ ವರೆಗೆ ಶೂಟ್‌ ಮಾಡುವುದು ಅಸಾಧ್ಯವೇನಲ್ಲ. ಪರಿಸ್ಥಿತಿ ಹೀಗಿರುವಾಗ ಪ್ರಧಾನಿಯವರ ಭದ್ರತಾ ಲೋಪವಾಗಿದ್ದು, ಅತ್ಯಂತ ಗಂಭೀರವಾದ ವಿಷಯವೇ ಹೌದು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳೆರಡು ಪ್ರತ್ಯೇಕವಾದ ತನಿಖೆ ಶುರು ಮಾಡಿದ್ದವು. ಈ ಹಿಂದೆಯೇ ಸುಪ್ರೀಂ ಕೋರ್ಟ್‌ ಪ್ರತ್ಯೇಕವಾಗಿ ತನಿಖೆ ನಡೆಸಬೇಡಿ ಎಂದಿದ್ದರೂ, ತನಿಖಾ ಕಾರ್ಯ ಬಿಟ್ಟಿರಲಿಲ್ಲ. ಆದರೆ, ಸೋಮವಾರ ಮತ್ತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಎರಡೂ ಸರಕಾರಗಳಿಗೆ ತನಿಖೆ ನಿಲ್ಲಿಸಿ ಎಂದು ಖಡಕ್ಕಾಗಿಯೇ ಹೇಳಿದೆ. ಅಲ್ಲದೆ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ತನಿಖೆಗೂ ಆದೇಶಿಸಿದೆ.

ಸುಪ್ರೀಂ ಕೋರ್ಟ್‌ನ ಈ ನಿರ್ಧಾರ ಉತ್ತಮವಾದ ಕ್ರಮ. ಪ್ರಧಾನಿಯವರ ಭದ್ರತಾ ಲೋಪ ಯಾವುದೇ ಕಾರಣಕ್ಕೂ ಚುನಾವಣ ವಿಷಯವಾಗಬಾರದು, ರಾಜಕೀಯವಾಗಿಯೂ ಚರ್ಚೆಯಾಗಬಾರದು. ಪ್ರಧಾನಿ ಸ್ಥಾನದಲ್ಲಿ ಯಾರೇ ಕುಳಿತಿದ್ದರೂ ಅವರನ್ನು ಪಕ್ಷಕ್ಕಿಂತ ಹೆಚ್ಚಾಗಿಯೇ ನೋಡಬೇಕು. ಏಕೆಂದರೆ ಇದೊಂದು ದೇಶದ ಅತ್ಯಂತ ಸರ್ವೋಚ್ಚ ಹುದ್ದೆ. ಈ ಹುದ್ದೆಯಲ್ಲಿರುವವರಿಗೆ ಸೂಕ್ತ ಭದ್ರತೆ ನೀಡದಿರುವುದು ಅತ್ಯಂತ ಪ್ರಮಾದ ಎಂದು ಹೇಳುವುದಕ್ಕೆ ಯಾವುದೇ ಅಡ್ಡಿ ಇಲ್ಲ.

ಈ ಘಟನೆ ನಡೆದ ತರುವಾಯ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ದೊಡ್ಡ ವಾಕ್ಸಮರಗಳೇ ನಡೆದಿವೆ. ಪ್ರಧಾನಿ ಭದ್ರತೆ ವಿಚಾರದಲ್ಲಿ ಈ ಪ್ರಮಾಣದ ರಾಜಕೀಯ ಬೇಡವಾಗಿತ್ತು. ಅದು ಕಾಂಗ್ರೆಸ್‌ ಇರಲಿ, ಬಿಜೆಪಿಯೇ ಇರಲಿ, ಯಾರೂ ಈ ವಿಚಾರದ ಬಗ್ಗೆ ಅಷ್ಟು ಲಘುವಾಗಿ ತೆಗೆದುಕೊಳ್ಳಬಾರದು. ಜತೆಗೆ ಪ್ರಧಾನಿಗಳು ಕ್ಷೇಮವಾಗಿ ವಾಪಸ್‌ ಹೋಗಿದ್ದಾರೆ, ಹೀಗಾಗಿ ಅವರ ಜೀವಕ್ಕೆ ಇಲ್ಲಿ ಯಾವುದೇ ಬೆದರಿಕೆ ಇರಲಿಲ್ಲ ಎಂಬ ಪಂಜಾಬ್‌ ಸರಕಾರದ ಮಾತೂ ಒಪ್ಪುವಂಥದ್ದಲ್ಲ. ಈ ಎಲ್ಲ ಸಂಗತಿಗಳಲ್ಲಿ ಪ್ರಮುಖವಾಗಿ ನೋಡಬೇಕಾದದ್ದು, ಯಾವುದೇ ಅಪಾಯವಾಗದೇ ಇರಲಿ ಎಂಬುದನ್ನು ಮಾತ್ರ. ಅಪಾಯವಾಗಲಿಲ್ಲ ಎಂದಾಕ್ಷಣ ಅಲ್ಲಿ ಎಲ್ಲ ರೀತಿಯ ಭದ್ರತೆ ಇತ್ತು, ಅವರು ಸುರಕ್ಷಿತ ಸ್ಥಳದಲ್ಲಿದ್ದರು ಎಂದರ್ಥವಲ್ಲ. ಹೀಗಾಗಿ ರಾಜಕೀಯ ಮೀರಿ ಈ ಪ್ರಕರಣವನ್ನು ನೋಡಬೇಕಾದ ಅನಿವಾರ್ಯತೆ ಇದೆ.

Advertisement

ಈಗ ಸುಪ್ರೀಂ ಕೋರ್ಟ್‌ ಸಮಿತಿ ರಚನೆ ಮಾಡಿರುವುದರಿಂದ, ನಿಷ್ಪಕ್ಷಪಾತವಾಗಿ ತನಿಖೆ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಅಲ್ಲದೆ ಅಂದಿನ ಘಟನೆಯಲ್ಲಿ ಪಂಜಾಬ್‌ ಪೊಲೀಸರ ಲೋಪ ಹೆಚ್ಚಾಗಿದೆಯೋ ಅಥವಾ ಪ್ರಧಾನಿಯವರ ಭದ್ರತೆ ನೋಡಿಕೊಳ್ಳುತ್ತಿರುವ ಎಸ್‌ಪಿಜಿ ತಪ್ಪು ಮಾಡಿದೆಯೋ ಎಂಬುದು ನಿಖರವಾಗಿ ತಿಳಿಯಲಿದೆ. ಅಲ್ಲದೆ ಇಲ್ಲಿ ಯಾರೇ ತಪ್ಪು ಮಾಡಿದ್ದರೂ, ಅವರಿಗೆ ಕಾನೂನಿನ ಪ್ರಕಾರ ತಕ್ಕ ಶಾಸ್ತಿಯಾಗಬೇಕು ಎಂಬುದು ಪ್ರಮುಖ ವಿಷಯ.

Advertisement

Udayavani is now on Telegram. Click here to join our channel and stay updated with the latest news.

Next