Advertisement
ಕಾಸರಗೋಡು ಜಿಲ್ಲೆಯ ತೋಟಗಾರಿಕಾ ನಿಗಮದ ಗೇರು ತೋಟದ ಗೋದಾಮುಗಳಲ್ಲಿ ಹಾಗೂ ಪಾಲ್ಘಾಟ್‌ನಲ್ಲಿ ಎಂಡೋಸಲ್ಫಾನ್ ಕೀಟನಾಶಕ ಉಳಿದುಕೊಂಡಿದೆ. ಇವುಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸಬೇಕೆಂದು ಆಗ್ರಹಿಸಿದೆ. ಶಿಥಿಲಗೊಂಡಿದ್ದ ಕಬ್ಬಿಣದ ಬ್ಯಾರೆಲ್‌ಗಳಲ್ಲಿ ದಾಸ್ತಾನಿದ್ದ ಎಂಡೋಸಲ್ಫಾನ್ ಕೀಟನಾಶಕವನ್ನು ‘ಎಂಡೋ ರಹಿತ ಕೇರಳ’ ಯೋಜನೆಯನ್ವಯ ಆರು ವರ್ಷಗಳ ಹಿಂದೆ ಸುರಕ್ಷಿತ ಬ್ಯಾರೆಲ್‌ಗಳಿಗೆ ವರ್ಗಾಯಿಸಲಾಗಿತ್ತು. ಆದರೆ ಈ ಬ್ಯಾರೆಲ್‌ಗಳ ಕಾಲಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ದಾಸ್ತಾನಿರುವ ಎಂಡೋಸಲ್ಫಾನ್‌ನನ್ನು ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸುವ ಅಥವಾ ಬೇರೆ ಸುರಕ್ಷಿತ ಬ್ಯಾರೆಲ್‌ಗಳಿಗೆ ವರ್ಗಾಯಿಸಲು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.
ಹೀಗಿದ್ದರೂ ಕೇರಳದಲ್ಲಿ ಒಟ್ಟು 1,904 ಲೀಟರ್ ಎಂಡೋಸಲ್ಫಾನ್ ಕೀಟನಾಶಕ ದಾಸ್ತಾನಿದ್ದು ಇದನ್ನು ವೈಜ್ಞಾನಿಕ ರೀತಿಯಲ್ಲಿ ನಿಷ್ಕ್ರಿಯಗೊಳಿಸಬೇಕಾಗಿದೆ. ತೋಟಗಾರಿಕಾ ನಿಗಮದ ರಾಜಪುರಂ, ಪೆರಿಯ, ಚೀಮೇನಿ ತೋಟಗಾರಿಕಾ ಎಸ್ಟೇಟ್‌ಗಳಲ್ಲಿ ಕಬ್ಬಿಣದ ಬ್ಯಾರೆಲ್‌ಗಳಲ್ಲಿ ದಾಸ್ತಾನಿದ್ದ 1600 ಲೀಟರ್ ಎಂಡೋಸಲ್ಫಾನ್ ಕೀಟನಾಶಕವನ್ನು 2012ರ ಜೂನ್ ತಿಂಗಳಲ್ಲಿ ಕಬ್ಬಿಣದ ಬ್ಯಾರೆಲ್‌ಗಳಿಂದ ಸುರಕ್ಷಿತವಾಗಿ ಇನ್ನೊಂದು ಬ್ಯಾರೆಲ್‌ಗಳಿಗೆ ವರ್ಗಾಯಿಸುವ ಪ್ರಕ್ರಿಯೆ ನಡೆದಿತ್ತು. ಈ ಬ್ಯಾರೆಲ್‌ಗಳಿಗೆ ಐದು ವರ್ಷ ಸುರಕ್ಷಿತ ಕಾಲಾವಧಿ ಎಂದು ನಿಗದಿಪಡಿಸಲಾಗಿತ್ತು.
Related Articles
Advertisement
ಇದಕ್ಕೂ ಮೊದಲು ತಜ್ಞರು ದಾಸ್ತಾನಿರುವ ಎಂಡೋ ಸಲ್ಫಾನ್ ಕೀಟನಾಶಕದ ಮಾದರಿ ಸಂಗ್ರಹಿಸಿ ತಪಾಸಣೆ ನಡೆಸಲಿದ್ದಾರೆಂದು ಸಾಮಾಜಿಕ ಸುರಕ್ಷಾ ಮಿಶನ್ ಮುಖ್ಯ ನಿರ್ದೇಶಕ ಡಾ| ಮಹಮ್ಮದ್ ಅಶೀಲ್ ಅಂದು ಹೇಳಿದ್ದರು. ಕಾಸರಗೋಡು ಜಿಲ್ಲೆಯ 11 ಗ್ರಾಮ ಪಂಚಾಯತ್ ಪ್ರದೇಶದ ತೋಟಗಾರಿಕಾ ನಿಗಮದ ಗೇರು ತೋಟಗಳಿಗೆ ನಿರಂತರವಾಗಿ ಮಾರಕ ಕೀಟ ನಾಶಕ ಎಂಡೋಸಲ್ಫಾನನ್ನು ಹೆಲಿಕಾಪ್ಟರ್ ಬಳಸಿ ಕೆಲವು ವರ್ಷಗಳ ಕಾಲ ಸಿಂಪಡಿಸಲಾಗಿತ್ತು.
ಸಿಂಪಡನೆ ಪರಿಣಾಮ ಘೋರಹೆಲಿಕ್ಯಾಪ್ಟರ್ ಬಳಸಿ ಎಂಡೋಸಲ್ಫಾನ್ ಸಿಂಪಡಿಸಿದ ದುಷ್ಪರಿಣಾಮವಾಗಿ ವಾಯು, ನೀರು ಮಾಲಿನ್ಯಗೊಂಡು ಸಾವಿರಾರು ಮಂದಿ ವಿವಿಧ ರೋಗಗಳಿಗೆ ತುತ್ತಾಗಿದ್ದಾರೆ. ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಹುಟ್ಟುವಾಗಲೇ ಅಂಗವಿಕಲರಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ನೂರಾರು ಮಂದಿ ನಡೆದಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರೆ, ನೂರಾರು ಮಂದಿ ಮಾರಕ ಕ್ಯಾನ್ಸರ್ ರೋಗ ಮೊದಲಾದವುಗಳಿಂದ ಬಳಲುತ್ತಿದ್ದಾರೆ. ಎಂಡೋ ದುರಂತದಿಂದಾಗಿ ಜಿಲ್ಲೆಯ ಕರಾಳ ದಿನಗಳೆಂದೇ ಗುರುತಿಸಿಕೊಂಡಿದೆ. ಆತಂಕ ದೂರವಾಗಿಲ್ಲ
ಎಂಡೋಸಲ್ಫಾನ್ ಆತಂಕ ಇನ್ನೂ ದೂರವಾಗಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾರೆಲ್‌ಗಳಲ್ಲಿರುವ ಎಂಡೋಸಲ್ಫಾನ್ ನಿಷ್ಕ್ರಿಯಗೊಳಿಸಬೇಕೆಂದು ಎಂಡೋ ಸಂತ್ರಸ್ತ ಜನಪರ ಒಕ್ಕೂಟದ ಪದಾಧಿಕಾರಿಗಳಾದ ದಯಾಬಾಯಿ, ಮುನೀಸಾ ಅಂಬಲತ್ತರ, ಅಂಬಲತ್ತರ ಕುಂಞಿಕೃಷ್ಣನ್, ಕೆ.ಚಂದ್ರಾವತಿ ಹೇಳಿದ್ದಾರೆ. ಒಕ್ಕೂಟದ ಬೇಡಿಕೆಗಳು
. 2017 ರಲ್ಲಿ ನಡೆದ ವಿಶೇಷ ವೈದ್ಯಕೀಯ ಶಿಬಿರದಲ್ಲಿ ಪತ್ತೆಯಾದ ಅರ್ಹರಾದ ಸಂತ್ರಸ್ತರನ್ನು ಎಂಡೋ ಸಂತ್ರಸ್ತರ ಯಾದಿಯಲ್ಲಿ ಸೇರ್ಪಡೆಗೊಳಿಸಿ ಉಚಿತ ಚಿಕಿತ್ಸೆ ಮತ್ತು ಧನಸಹಾಯ ನೀಡಬೇಕು.
. 2011ರಲ್ಲಿ ಪತ್ತೆಯಾದ 1,318 ಮಂದಿ ಪೈಕಿ ಯಾದಿಯಿಂದ ಕೈಬಿಟ್ಟ 610 ಮಂದಿಗೆ ಸಹಾಯವೊದಗಿಸಬೇಕು.
. ಎಲ್ಲ ಸಂತ್ರಸ್ತರಿಗೂ 5 ಲಕ್ಷ ರೂ. ಮತ್ತು ಜೀವನಪೂರ್ತಿ ಚಿಕಿತ್ಸೆ . ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸಬೇಕು.
. ರಾಷ್ಟ್ರೀಯ ಮಾನವ ಹಕ್ಕು ಕೇಂದ್ರ-ರಾಜ್ಯ ಸರಕಾರಗಳಿಗೆ ನೀಡಿದ ನಿರ್ದೇಶಗಳ ಪೂರ್ಣವಾಗಿ ಜಾರಿ.
. ಸಂತ್ರಸ್ತರ ಎಲ್ಲ ಸಾಲ ಮಾನದಂಡ ನೋಡದೆ ಮನ್ನಾ.
. ಬಡ್ಸ್ ಶಾಲೆಗಳಿಗೆ ವೈಜ್ಞಾನಿಕ ವ್ಯವಸ್ಥೆ ಏರ್ಪಡಿಸಬೇಕು.
. ಸೂಕ್ತ ರೀತಿಯಲ್ಲಿ ಪುನರ್ವಸತಿ ಕಲ್ಪಿಸಬೇಕು, ಟ್ರಿಬ್ಯೂನಲ್ ಸ್ಥಾಪಿಸಬೇಕು, ಸಂತ್ರಸ್ತರಿಗೆ ರೇಶನ್ ವ್ಯವಸ್ಥೆ ಪುನರ್ ಕಲ್ಪಿಸಬೇಕು.
. ಜಿಲ್ಲೆಯ ಗೋದಾಮುಗಳಲ್ಲಿರುವ ಎಂಡೋಸಲ್ಫಾನ್ ಕೀಟನಾಶಕ ನಿಷ್ಕ್ರಿಯಗೊಳಿಸಬೇಕು.
. ಸಂತ್ರಸ್ತ ಕುಟುಂಬದ ಒಬ್ಬರಿಗಾದರೂ ಶಿಕ್ಷಣ ಅರ್ಹತೆಯಂತೆ ಉದ್ಯೋಗ ಕಲ್ಪಿಸಬೇಕು. ಆದ್ಯತೆ ಇವರಿಗೆ
ಮನೆಯಿಲ್ಲದವರು, ಎಂಡೋಸಲ್ಫಾನ್ ಸಂತ್ರಸ್ತರು, ಅಂಗವಿಕಲರು, ಹಿಂದುಳಿದ ಜನಾಂಗದವರು ಮೊದಲಾದವರ ಅಭ್ಯುದಯ ಯೋಜನೆಗಳಿಗೆ, ಮಹಿಳಾ ಸಬಲೀಕರಣ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು.
– ಎ.ಜಿ.ಸಿ. ಬಶೀರ್,
ಅಧ್ಯಕ್ಷರು, ಜಿ. ಪಂಚಾಯತ್ 2017ರಲ್ಲಿ ನಡೆದ ಪ್ರತ್ಯೇಕ ವೈದ್ಯಕೀಯ ಶಿಬಿರದಲ್ಲಿ ಪತ್ತೆಹಚ್ಚಲಾದ 1,905 ಮಂದಿ ಸಂತ್ರಸ್ತರನ್ನು ಪಟ್ಟಿಯಲ್ಲಿ ಒಳಪಡಿಸಿ ಉಚಿತ ಚಿಕಿತ್ಸೆ ಮತ್ತು ಇತರ ಸೌಲಭ್ಯಗಳನ್ನು ನೀಡಬೇಕು, ಈಗಾಗಲೇ ಪಟ್ಟಿಯಲ್ಲಿ ಒಳಪಟ್ಟಿರುವ 3,547 ಮಂದಿಗೆ ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶದಂತೆ ತಲಾ 5 ಲಕ್ಷ ರೂ. ಕೂಡಲೇ ನೀಡಬೇಕು, ಆವಶ್ಯಕವಾದ ಚಿಕಿತ್ಸಾ ಸೌಕರ್ಯವನ್ನು ಜಿಲ್ಲೆಯಲ್ಲಿಯೇ ಒದಗಿಸಬೇಕು.
– ಅಂಬಲತ್ತರ ಕುಂಞಕೃಷ್ಣನ್,
ಪ್ರಧಾನ ಕಾರ್ಯದರ್ಶಿ,
ಎಂಡೋಸಲ್ಫಾನ್ ಸಂತ್ರಸ ಜನಪರ ಒಕ್ಕೂಟ