Advertisement

ರಹಸ್ಯ ಸಮಾಲೋಚನೆ; ಬೊಮ್ಮಾಯಿ, ಸುಧಾಕರ್‌ ಜತೆ ಚರ್ಚಿಸಿದ ಬಿ.ಎಲ್‌. ಸಂತೋಷ್‌

11:27 PM Aug 21, 2020 | mahesh |

ಬೆಂಗಳೂರು: ದಿಢೀರ್‌ ಬೆಳವಣಿಗೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಗೃಹಸಚಿವ ಬಸವರಾಜ ಬೊಮ್ಮಾಯಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ಅವರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

Advertisement

ಶುಕ್ರವಾರ ಇಬ್ಬರು ಸಚಿವರನ್ನು ಪಕ್ಷದ ಕಚೇರಿ “ಜಗನ್ನಾಥ ಭವನ’ಕ್ಕೆ ಕರೆಸಿಕೊಂಡ ಸಂತೋಷ್‌ ಅವರು ಹಲವಾರು ಮಹತ್ವದ ವಿಚಾರ ಚರ್ಚಿಸಿದ್ದಾರೆ ಎನ್ನಲಾಗಿದೆ.  ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ, ರಾಜ್ಯದಲ್ಲಿ ಕೊರೊನಾ ನಿರ್ವಹಣೆ ಬಗ್ಗೆ ಬಿ.ಎಲ್‌. ಸಂತೋಷ್‌ ಮಾಹಿತಿ ಪಡೆದಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಆದರೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮತ್ತು ಪ್ರಸಕ್ತ ರಾಜಕೀಯ ವಿಚಾರಗಳ ಬಗ್ಗೆಯೂ ಭೇಟಿ ಸಂದರ್ಭದಲ್ಲಿ ಪ್ರಸ್ತಾವವಾಗಿದೆ ಎಂದು ಹೇಳಲಾಗಿದೆ.

ಪ್ರಮುಖವಾಗಿ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಪ್ರಕರಣದಲ್ಲಿ ಎಸ್‌ಡಿಪಿಐ ಪಾತ್ರ, ಕಾಂಗ್ರೆಸ್‌ ಪಾಲಿಕೆ ಸದಸ್ಯರ ಕೈವಾಡ, ರಾಜಕೀಯವಾಗಿ ಬಿಜೆಪಿ ಸಾಗುತ್ತಿರುವ ಹಾದಿ, ರಾಜ್ಯದಲ್ಲಿ ಪಕ್ಷ ಸಂಘಟನೆ ಮತ್ತಿತರ ವಿಚಾರಗಳ ಬಗ್ಗೆ ಹೆಚ್ಚು ಚರ್ಚೆಯಾಗಿದೆ ಎಂದು ತಿಳಿದು ಬಂದಿದ್ದು, ರಾಜಕೀಯ ವಲಯದಲ್ಲಿ ನಾನಾ ವ್ಯಾಖ್ಯಾನಗಳು ಕೇಳಿ ಬರುತ್ತಿವೆ.

ನಾನಾ ರಾಜ್ಯಗಳಲ್ಲಿ ಕೋವಿಡ್ ನಿರ್ವಹಣೆ ಕುರಿತು ಪ್ರಧಾನಿ ಕಾರ್ಯಾಲಯ ನಿರಂತರ ಮಾಹಿತಿ ಪಡೆದುಕೊಳ್ಳುತ್ತಿದೆ. ಪಕ್ಷದ ಕಡೆಯಿಂದಲೂ ಈ ಬಗ್ಗೆ ಸಲಹೆ, ಸೂಚನೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ವೈದ್ಯ ಶಿಕ್ಷಣ ಸಚಿವ ಸುಧಾಕರ್‌ ಅವರನ್ನು ಸಂತೋಷ್‌ ಅವರು ರಾಜ್ಯ ಬಿಜೆಪಿ ಕಚೇರಿಗೆ ಕರೆಸಿಕೊಂಡು ಮಾಹಿತಿ ಪಡೆದರು ಎನ್ನಲಾಗಿದೆ.

ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಎಲ್‌. ಸಂತೋಷ್‌ ಅವರು ರಾಜ್ಯಕ್ಕೆ ಆಗಾಗ ಭೇಟಿ ನೀಡಿದ್ದರೂ ಸಚಿವರನ್ನು ಪಕ್ಷದ ಕಚೇರಿಗೆ ಕರೆಸಿಕೊಂಡು ಮಾತುಕತೆ ನಡೆಸಿದ ಉದಾಹರಣೆ ಇಲ್ಲ. ಸಂಘಟನೆ ಕುರಿತು ಅಧಿಕೃತ ಸಭೆಗಳಲ್ಲಿ ಮುಖ್ಯಮಂತ್ರಿ ಸಹಿತ ಸಚಿವರೊಂದಿಗೆ ಅವರ ಭೇಟಿ ಆಗುತ್ತಿತ್ತು. ಆದರೆ ಈ ಬಾರಿ ಪ್ರಮುಖ ಇಲಾಖೆಗಳ ಹೊಣೆ ಹೊತ್ತಿರುವ ಇಬ್ಬರು ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

Advertisement

ಡಿ.ಜೆ. ಹಳ್ಳಿ ಗಲಭೆ ಮತ್ತು ಕೋವಿಡ್‌ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದ್ದು, ಇದಕ್ಕೆ ರಾಜಕೀಯವಾಗಿ ವಿಶೇಷ ಅರ್ಥವಿಲ್ಲ ಎಂದು ಪಕ್ಷದ ನಾಯಕರು ಹೇಳಿದ್ದಾರೆ. ಆದರೆ ಕೇಂದ್ರ ಬಿಜೆಪಿ ವಲಯದಲ್ಲಿ ಬಿ.ಎಲ್‌. ಸಂತೋಷ್‌ ಪ್ರಭಾವಿಯಾಗಿರುವುದರಿಂದ ರಾಜ್ಯದ ವಿದ್ಯಮಾನದ ಬಗ್ಗೆ ಅವರು ನೀಡುವ ವರದಿ ನಿರ್ಣಾಯಕವಾಗಿರುತ್ತದೆ. ಸಚಿವರ ಕಾರ್ಯವೈಖರಿ ಬಗ್ಗೆಯೂ ಅವರು ಹೈಕಮಾಂಡ್‌ಗೆ ವರದಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ರವಿವಾರ ಮಹತ್ವದ ಸಭೆ
ಈ ನಡುವೆ ಬಿ.ಎಲ್‌. ಸಂತೋಷ್‌ ನೇತೃತ್ವ ದಲ್ಲಿ ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳ ಸಭೆ ರವಿವಾರ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ರಾಜ್ಯ ಬಿಜೆಪಿಯ ನಾನಾ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ ಬಾಕಿಯಿದ್ದು, ಈ ಬಗ್ಗೆಯೂ ಬಿ.ಎಲ್‌. ಸಂತೋಷ್‌ ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ಕಲ್ಪಿಸುವ ಬಗ್ಗೆಯೂ ನಿರ್ಧಾರವಾಗಲಿದೆ ಎನ್ನಲಾಗಿದೆ.

ಈ ನಡುವೆ ಬಿ.ಎಲ್‌. ಸಂತೋಷ್‌ ನೇತೃತ್ವದಲ್ಲಿ ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳ ಸಭೆ ರವಿವಾರ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ರಾಜ್ಯ ಬಿಜೆಪಿಯ ನಾನಾ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ ಬಾಕಿಯಿದ್ದು, ಈ ಬಗ್ಗೆಯೂ ಬಿ.ಎಲ್‌. ಸಂತೋಷ್‌ ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ಕಲ್ಪಿಸುವ ಬಗ್ಗೆಯೂ ನಿರ್ಧಾರವಾಗಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next