ಬೆಂಗಳೂರು: ಇಂದಿನಿಂದ (ಎ.5) ದ್ವಿತೀಯ ಪಿಯುಸಿ- 2023ರ ಮೌಲ್ಯಮಾಪನ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾಹಿತಿ ನೀಡಿದೆ.
20 ದಿನಗಳ ಕಾಲ ನಡೆಯುವ ಮೌಲ್ಯಮಾಪನ ಕಾರ್ಯದಲ್ಲಿ 25 ಸಾವಿರ ಉಪನ್ಯಾಸಕರನ್ನು ನಿಯೋಜಿಸಲಾಗಿದೆ. ಒಟ್ಟಾರೆ 37 ವಿಷಯಗಳಲ್ಲಿ 7.27 ಲಕ್ಷ ವಿದ್ಯಾರ್ಥಿಗಳು ಬರೆದಿರುವ 45 ಲಕ್ಷ ಉತ್ತರ ಪತ್ರಿಕೆಗಳಿವೆ. ಇವುಗಳು ಮೌಲ್ಯಮಾಪನಕ್ಕೆ ಒಳಗಾಗಲಿದೆ.
ಮೌಲ್ಯಮಾಪನ ಮುಗಿಸಿ ಮೇ ಮೊದಲ ವಾರದಲ್ಲಿ ಫಲಿತಾಂಶವನ್ನು ಪ್ರಕಟಿಸುವ ಉದ್ದೇಶವನ್ನು ಮಂಡಳಿ ಹೊಂದಿದೆ.
ಹೆಚ್ಚು ಶಿಕ್ಷಕರು ಗೈರಾದರೆ ಹೆಚ್ಚುವರಿ ಪಟ್ಟಿ ಬಿಡುಗಡೆ?: ಮೌಲ್ಯಮಾಪನಕ್ಕೆ ನಿಗದಿಯಾಗಿರುವ ಹಲವು ಶಿಕ್ಷಕರನ್ನು ಚುನಾವಣಾ ಕೆಲಸಕ್ಕೂ ಬಳಸಿಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಕೆಲ ಶಿಕ್ಷಕರು ಮೌಲ್ಯಮಾಪನಕ್ಕೆ ಗೈರಾಗುವ ಸಂಭವವೂ ಇದೆ. ಚುನಾವಣಾ ಕಾರಣದಿಂದ ಎಷ್ಟು ಮಂದಿ ಶಿಕ್ಷಕರು ಗೈರಾಗುತ್ತಾರೆ ಎಂಬುದನ್ನು ಗಮನಿಸಿ ಮೌಲ್ಯಮಾಪಕರ ಹೆಚ್ಚುವರಿ ಪಟ್ಟಿಯನ್ನು ಬಿಡುಗಡೆ ಮಾಡುವ ಬಗ್ಗೆ ಮಂಡಳಿ ತೀರ್ಮಾನಕ್ಕೆ ಬರಲಿದೆ ಎಂದು ತಿಳಿದು ಬಂದಿದೆ.
ಒಂದು ವೇಳೆ ಶೇ. 25ಕ್ಕಿಂತ ಹೆಚ್ಚು ಮೌಲ್ಯಮಾಪಕರು ಗೈರಾದರೆ ಮೌಲ್ಯಮಾಪನದ ಅವಧಿ ತಿಂಗಳು ಮೀರಬಹುದು. ಆದ್ದರಿಂದ ಇಷ್ಟೊಂದು ಪ್ರಮಾಣದಲ್ಲಿ ಶಿಕ್ಷಕರು ಗೈರಾದರೆ ಹೆಚ್ಚುವರಿ ಪಟ್ಟಿ ಬಿಡುಗಡೆ ಮಾಡಿ ಮೌಲ್ಯಮಾಪನವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಚಿಂತನೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಲ್ಲಿದೆ. ರಾಜ್ಯಾದ್ಯಂತ ಮಾ.9ರಿಂದ 29ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆದಿತ್ತು.