ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪೂರಕ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಶೇ. 28.30ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಪಾಸಾದವರ ಸಂಖ್ಯೆ ಶೇ. 2ರಷ್ಟು ಹೆಚ್ಚಿದೆ.
ಜೂನ್ 29ರಿಂದ ಜುಲೈ 10ರವರೆಗೆ ಒಟ್ಟು 301 ಪರೀಕ್ಷಾ ಕೇಂದ್ರಗಳಲ್ಲಿ ಈ ಪೂರಕ ಪರೀಕ್ಷೆ ನಡೆದಿತ್ತು. ಪರೀಕ್ಷೆ ಬರೆದ
2,24,879 ವಿದ್ಯಾರ್ಥಿಗಳಲ್ಲಿ 63,652 ಜನ ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇ. 26.34 ಅಭ್ಯರ್ಥಿಗಳು ಪೂರಕ ಪರೀಕ್ಷೆಯಲ್ಲಿ ಪಾಸಾಗಿದ್ದರು. ಆನ್ ಲೈನಲ್ಲೂ ಫಲಿತಾಂಶ ಲಭ್ಯವಿದ್ದು, ಕಾಲೇಜುಗಳಲ್ಲಿ ಶುಕ್ರವಾರ ಪ್ರಕಟಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಶೇ. 31.20 ವಿದ್ಯಾರ್ಥಿನಿಯರು ಪಾಸ್: ಪರೀಕ್ಷೆಗೆ ಹಾಜರಾದ 1,33,216 ಬಾಲಕರ ಪೈಕಿ 35,051 ಮಂದಿ ಪಾಸಾಗಿದ್ದು, ಶೇ. 26.31 ಫಲಿತಾಂಶ ಬಂದಿದೆ. ಅದೇ ರೀತಿ, 91,663 ವಿದ್ಯಾರ್ಥಿನಿಯರ ಪೈಕಿ 28,601 ಮಂದಿ ಉತ್ತೀರ್ಣರಾಗಿ, ಶೇ. 31.20ರಷ್ಟು ಫಲಿತಾಂಶ ಬಂದಿದೆ. ಪೂರಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ 1,11,712 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 30,660 ಜನ ಪಾಸಾಗಿ ಶೇ. 27.45 ಫಲಿತಾಂಶ ಗಳಿಸಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ 1,13,167 ಮಂದಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 32,992 ಮಂದಿ ಉತ್ತೀರ್ಣರಾಗಿ, ಶೇ. 29.15ರಷ್ಟು ಫಲಿತಾಂಶ ಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಉತ್ತರ ಪತ್ರಿಕೆಯ ಪ್ರತಿ, ಮರುಮೌಲ್ಯಮಾಪನ ಹಾಗು ಮರುಎಣಿಕೆಗೆ ಆನ್‌ಲೈನ್ ಅರ್ಜಿ ಸಲ್ಲಿಸ ಬಹುದಾಗಿದೆ. ನಕಲು ಪ್ರತಿಗೆ ಅರ್ಜಿ ಸಲ್ಲಿಸಲು ಜು. 30 ಕೊನೆಯ ದಿನ. ಉತ್ತರ ಪತ್ರಿಕೆಯ ಮರುಮೌಲ್ಯಮಾಪನ , ಮರುಎಣಿಕೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 4 ಕೊನೆಯ ದಿನ.