Advertisement

ಸುಸೂತ್ರವಾಗಿ ನಡೆದ ದ್ವಿತೀಯ ಪಿಯು ಪರೀಕ್ಷೆ: ಮೊದಲ ದಿನ 23,771 ಅಭ್ಯರ್ಥಿಗಳು ಗೈರು

10:41 PM Mar 09, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಗುರುವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಸುಸೂತ್ರವಾಗಿ ನಡೆದಿದ್ದು, ನೋಂದಣಿ ಮಾಡಿಕೊಂಡಿರುವ 5,33,797 ಅಭ್ಯರ್ಥಿಗಳ ಪೈಕಿ 23,771 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ.

Advertisement

ಮೊದಲ ದಿನದ ಪರೀಕ್ಷೆಯು ರಾಜ್ಯಾದ್ಯಂತ ಸುಸೂತ್ರವಾಗಿ ನಡೆದಿದೆ. ಒಂದೆರಡು ಕಡೆಗಳಲ್ಲಿ ಸಣ್ಣ ಪುಟ್ಟ ಕಿರಿಕ್‌ ನಡೆದಿರುವುದು ಹೊರತುಪಡಿಸಿದರೆ ಉಳಿದಂತೆ ಯಾವುದೇ ಸಮಸ್ಯೆಗಳಾಗಿಲ್ಲ. ಪರೀಕ್ಷೆ ಸುಲಭವಾಗಿತ್ತು. ಈ ಬಾರಿ ಬಹು ಆಯ್ಕೆ ಮಾದರಿಯ ಪ್ರಶ್ನೆಗಳು ಇದ್ದರಿಂದ ಹೆಚ್ಚಿನ ಅಂಕಗಳಿಸಬಹುದು. ಪಠ್ಯಕ್ರಮದಲ್ಲಿರುವ ಪ್ರಶ್ನೆಗಳನ್ನೇ ಕೇಳಲಾಗಿದ್ದು, ಉತ್ತಮ ಅಂಕಗಳಿಸುವಂತಹ ನಿರೀಕ್ಷೆಗಳಿವೆ ಎಂದು ಪರೀಕ್ಷೆ ಬಳಿಕ ಹೊರಬಂದ ಬಹುತೇಕ ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ. ಮಾ.11ರಂದು ಗಣಿತ ಮತ್ತು ಶಿಕ್ಷಣ ಶಾಸ್ತ್ರದ ಪರೀಕ್ಷೆಗಳು ನಡೆಯಲಿವೆ.

ಮೊದಲ ದಿನ ಕನ್ನಡ ಮತ್ತು ಅರೇಬಿಕ್‌ ವಿಷಯದ ಪರೀಕ್ಷೆ ನಡೆದಿದೆ. ಈ ಎರಡು ವಿಷಯಗಳಿಗೆ 5,33,797 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 5,10,026 (ಶೇ.95.55) ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಉಳಿದ 23,771 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಪೊಲೀಸ್‌ ಬಂದೋಬಸ್ತ್:
ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಭದ್ರತೆಯಲ್ಲಿ ಲೋಪವಾಗದಂತೆ ಹಾಗೂ ಅಕ್ರಮಗಳು ನಡೆಯದಂತೆ ಸಿಸಿ ಕ್ಯಾಮೆರಾ ಕಣ್ಗಾವಲು ಇರಿಸಲಾಗಿತ್ತು. ಪರೀಕ್ಷಾ ಕೇಂದ್ರದ ಸುತ್ತಲಿನ ಜೆರಾಕ್ಸ್‌ ಕೇಂದ್ರಗಳು ಪರೀಕ್ಷೆ ಅವಧಿಯಲ್ಲಿ ಬಂದ್‌ ಆಗಿದ್ದವು. ಸೈಬರ್‌ ಸೆಂಟರ್‌ ಟ್ಯೂಷನ್‌ ಕೇಂದ್ರಗಳು, ಕಂಪ್ಯೂಟರ್‌, ಗೇಮ್ಸ್ ಕೇಂದ್ರಗಳ ಮೇಲೆ ನಿಗಾ ಇಡಲಾಗಿತ್ತು. ಮೊಬೈಲ್‌, ಸ್ಮಾರ್ಟ್‌ವಾಚ್‌, ಇಯರ್‌ಫೋನ್‌ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ಸ್‌ ಸಾಧನಗಳನ್ನು ನಿಷೇಧಿಸಲಾಗಿತ್ತು.

ಕಾಪಿಗೆ ಯತ್ನಿಸಿದ ಇಬ್ಬರು ಡಿಬಾರ್‌
ಯಾದಗಿರಿ ಹಾಗೂ ಚಿಕ್ಕೋಡಿಯ ಪರೀಕ್ಷಾ ಕೇಂದ್ರಗಳಲ್ಲಿ ನಕಲು ಮಾಡಲು ಹೋಗಿ ಸಿಕ್ಕಿಬಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಅಧಿಕಾರಿಗಳು ಡಿಬಾರ್‌ ಮಾಡಿದ್ದಾರೆ. ಇನ್ನು ಸಚಿವ ಬಿ.ಸಿ.ನಾಗೇಶ್‌ ತಮ್ಮ ಸ್ವ-ಕ್ಷೇತ್ರ ತಿಪಟೂರಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪರೀಕ್ಷಾ ಸಿದ್ಧತೆ ಪರಿಶೀಲಿಸಿದರು. ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಶುಭ ಹಾರೈಸಿರುವುದು ವಿಶೇಷವಾಗಿತ್ತು.

Advertisement

ಹಿಜಾಬ್‌ ಕಿರಿಕ್‌
ಬೆಂಗಳೂರಿನ ಮಲ್ಲೇಶ್ವರದ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳು ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಲು ಆಗಮಿಸಿದ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ಸ್ಪಷ್ಪಪಡಿಸಿದರು. ಪರೀಕ್ಷೆ ಆರಂಭಕ್ಕೂ ಮುನ್ನ ಕೊನೆಯ ಕ್ಷಣದಲ್ಲಿ ವಿದ್ಯಾರ್ಥಿನಿ ಹಿಜಾಬ್‌ ತೆಗೆದು ಪರೀಕ್ಷೆ ಬರೆದಳು.

Advertisement

Udayavani is now on Telegram. Click here to join our channel and stay updated with the latest news.

Next