Advertisement

ದ್ವಿ. ಪಿಯು ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಕಬ್ಬಿಣದ ಕಡಲೆ!

01:43 AM Mar 15, 2023 | Team Udayavani |

ಮಂಗಳೂರು: ಮಂಗಳವಾರ ನಡೆದ ದ್ವಿತೀಯ ಪಿಯು ರಸಾಯನ ಶಾಸ್ತ್ರ ಪರೀಕ್ಷೆಯಲ್ಲಿ ಎದುರಾದ ಕಠಿನ ಪ್ರಶ್ನೆಗಳು ವಿದ್ಯಾರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿವೆ.

Advertisement

ಕಠಿನ ಪ್ರಶ್ನೆಗಳನ್ನು ಕಂಡು ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿ, ಬಹುತೇಕ ಪರೀಕ್ಷಾ ಕೇಂದ್ರದಲ್ಲಿ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪೋಷಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ. ಜ್ಞಾನ ಆಧಾರಿತವಾಗಿ ಪ್ರಶ್ನೆಗಳನ್ನು ನೀಡಬೇಕು ಎಂದು ನಿಯಮಗಳಿವೆ. ಅದರ ಬದಲು “ಅಪ್ಲಿಕೇಷನ್‌’ ಆಧಾರಿತ ಪ್ರಶ್ನೆಗಳನ್ನೇ ಈ ಬಾರಿ ನೀಡಲಾಗಿದೆ ಹಾಗೂ ಶೇ. 75ರಷ್ಟು ಪ್ರಶ್ನೆಗಳು ಇದೇ ಮಾದರಿಯಲ್ಲಿ ಬಂದಿದೆ.

ಮಾದರಿ ಪ್ರಶ್ನೆಪತ್ರಿಕೆಯನ್ನು ಅಭ್ಯಸಿಸಿ ಅದೇ ಸ್ವರೂಪದಲ್ಲಿ ಪ್ರಶ್ನೆಗಳು ಬರಲಿವೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಗೂ ಮುನ್ನ ಶಿಕ್ಷಕರು ಮಾರ್ಗದರ್ಶನ ನೀಡಿದ್ದರು. ಆದರೆ ಮಾದರಿ ಪ್ರಶ್ನೆಪತ್ರಿಕೆಯಂತೆ ಮಂಗಳವಾರದ ಪ್ರಶ್ನೆಗಳು ಇರಲಿಲ್ಲ. ಇಲಾಖಾ ಮಾರ್ಗಸೂಚಿಯಂತೆ ಪ್ರಶ್ನೆಪತ್ರಿಕೆ ರೂಪಿಸಿಲ್ಲ ಎಂಬುದು ವಿದ್ಯಾರ್ಥಿಗಳ ಆಕ್ಷೇಪ.

ಬಹು ಆಯ್ಕೆ ಪ್ರಶ್ನೆಗಳನ್ನು ಈ ಬಾರಿ ನೀಡಲಾಗುವುದು ಎಂದು ಇಲಾಖೆ ಹಾಗೂ ಶಿಕ್ಷಣ ಸಚಿವರು ಕೂಡ ತಿಳಿಸಿದ್ದರು. ಜತೆಗೆ ಮಾದರಿ ಪ್ರಶ್ನೆಪತ್ರಿಕೆ ಕೂಡ ಅದೇ ಸ್ವರೂಪದಲ್ಲಿ ಸಿದ್ಧಪಡಿಸಲಾಗಿತ್ತು. ಅದರಂತೆಯೇ ತಯಾರಿ ಕೂಡ ಪಿಯು ವಿಭಾಗದಲ್ಲಿ ನಡೆದಿತ್ತು. ಆದರೆ ಪರೀಕ್ಷೆಯಲ್ಲಿ ಇದೆಲ್ಲಕ್ಕಿಂತ ಭಿನ್ನವಾದ ಪ್ರಶ್ನೆ ಕೇಳಲಾಗಿದೆ ಹಾಗೂ ನೇರವಾಗಿ ಕೇಳಬೇಕಾದ ಪ್ರಶ್ನೆಯನ್ನು ತಿರುಚಿ ಕೇಳಿ ಮಕ್ಕಳಿಗೆ ಗೊಂದಲ ಸೃಷ್ಟಿಸಲಾಗಿದೆ ಎಂಬ ಅಳಲು ಪೋಷಕರಿಂದ ವ್ಯಕ್ತವಾಗಿದೆ.

ಜೆಇಇ, ನೀಟ್‌ ಸ್ವರೂಪದ ಪ್ರಶ್ನೆಗಳು!
ದ್ವಿತೀಯ ಪಿಯು ಪರೀಕ್ಷೆಯ ರಸಾಯನಶಾಸ್ತ್ರ ಪ್ರಶ್ನೆಗಳು ಜೆಇಇ, ನೀಟ್‌ ಮಾದರಿಯ ಸ್ವರೂಪದಲ್ಲಿದ್ದವು. ಕಠಿನ ಪ್ರಶ್ನೆಪತ್ರಿಕೆ ವಿಚಾರ ರಾಜ್ಯ ಮಟ್ಟದ ಕೆಮೆಸ್ಟ್ರಿ ಫೋರಂನ ಗಮನಕ್ಕೆ ಬಂದಿದ್ದು, ಇಲಾಖೆಯ ಬೆಂಗಳೂರಿನ ಪ್ರಮುಖ ಅಧಿಕಾರಿಗಳ ಜತೆಗೆ ಈ ಕುರಿತಂತೆ ಗಮನಸೆಳೆಯುವ ಪ್ರಯತ್ನ ನಡೆಯಲಿದೆ ಎಂದು ಮಂಗಳೂರಿನ ಶಿಕ್ಷಕರೊಬ್ಬರು ತಿಳಿಸಿದ್ದಾರೆ.

Advertisement

ದ್ವಿ. ಪಿಯುಸಿ ಪರೀಕ್ಷೆ ಉಡುಪಿ: 17 ಗೈರು
ಉಡುಪಿ, ಮಾ. 14: ಮಂಗಳವಾರ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉಡುಪಿ 17 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಯಾವುದೇ ಪರೀಕ್ಷೆ ಅಕ್ರಮ ಅಥವಾ ಡಿಬಾರ್‌ ದಾಖಲಾಗಿಲ್ಲ.

ರಸಾಯನಶಾಸ್ತ್ರ ಪರೀಕ್ಷೆಗೆ ನೋಂದಾಯಿಸಿ ಕೊಂಡಿದ್ದ 6,163 ವಿದ್ಯಾರ್ಥಿಗಳಲ್ಲಿ 6,147 ವಿದ್ಯಾರ್ಥಿಗಳು ಹಾಜರಾಗಿದ್ದು, 16 ಮಂದಿ ಗೈರು ಹಾಜರಾಗಿದ್ದಾರೆ. ಮೂಲ ವಿಜ್ಞಾನ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 145 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಮನಃಶಾಸ್ತ್ರ ಪರೀಕ್ಷೆಗೆ ನೋಂದಾಯಿಸಿ
ಕೊಂಡಿದ್ದ 7 ವಿದ್ಯಾರ್ಥಿಗಳಲ್ಲಿ 6 ಮಂದಿ ಹಾಜರಾಗಿದ್ದಾರೆ. ಒಟ್ಟಾರೆಯಾಗಿ ಮಂಗಳ ವಾರದ ಪರೀಕ್ಷೆಯಲ್ಲಿ ಶೇ. 99.73ರಷ್ಟು ಹಾಜರಾತಿ ದಾಖಲಾಗಿದೆ.

13 ಸಾವಿರ ವಿದ್ಯಾರ್ಥಿಗಳು
ಮಂಗಳವಾರ ರಸಾಯನಶಾಸ್ತ್ರ ಪರೀಕ್ಷೆಗೆ ದ.ಕ. ಜಿಲ್ಲೆಯಲ್ಲಿ ಒಟ್ಟು 13,981 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, ಈ ಪೈಕಿ 13,947 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 34 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಪುನರಾವರ್ತಿತರ ಪೈಕಿ 153 ಮಂದಿಯಲ್ಲಿ 128 ಮಂದಿ ಹಾಜರಾಗಿದ್ದು, 25 ಮಂದಿ ಗೈರಾಗಿದ್ದಾರೆ. ಮೂಲಗಣಿತ ಪರೀಕ್ಷೆಯಲ್ಲಿ ನೋಂದಣಿಯಾದ ಎಲ್ಲ 618 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಪುನರಾವರ್ತಿತ 8 ಮಂದಿಯ ಪೈಕಿ 6 ಮಂದಿ ಹಾಜರಾಗಿ ಇಬ್ಬರು ಗೈರಾಗಿದ್ದಾರೆ. ಮನಃಶಾಸ್ತ್ರ ಪರೀಕ್ಷೆಯಲ್ಲಿ ನೋಂದಣಿಯಾದ 224 ವಿದ್ಯಾರ್ಥಿಗಳ ಪೈಕಿ 222 ಮಂದಿ ಹಾಜರಾಗಿ, ಇಬ್ಬರು ಗೈರಾಗಿದ್ದು, ಪುನರಾವರ್ತಿತರ ಪೈಕಿ ನೋಂದಣಿಯಾದ ಇಬ್ಬರೂ ಹಾಜರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next