ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರೇ ಸರ್ಕಾರದ ಕೆಲವು ರಹಸ್ಯ ದಾಖಲೆಗಳನ್ನು ಕಳವು ಮಾಡಿದ್ದಾರೆಯೇ? ಬೈಡೆನ್ ಅವರ ಖಾಸಗಿ ನಿವಾಸದಲ್ಲಿ ಸರ್ಕಾರದ ಕೆಲವೊಂದು ವರ್ಗೀಕೃತ ದಾಖಲೆಗಳು ಪತ್ತೆಯಾಗಿದ್ದು, ಅಧ್ಯಕ್ಷರನ್ನು ಮುಜುಗರಕ್ಕೀಡುಮಾಡಿದೆ. ಈ ಪ್ರಕರಣವು ಅಮೆರಿಕದಲ್ಲಿ ದೊಡ್ಡ ಮಟ್ಟಿನ ಸಂಚಲನಕ್ಕೆ ಕಾರಣವಾಗಿದೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಂಬಂಧಪಟ್ಟ ಹಗರಣವನ್ನು ಅಧಿಕಾರಿಗಳು ತನಿಖೆ ನಡೆಸುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ. ಟ್ರಂಪ್ ಅವರು 2021ರಲ್ಲಿ ಅಧ್ಯಕ್ಷ ಸ್ಥಾನ ಕಳೆದುಕೊಂಡ ಬಳಿಕ ಭಾರೀ ಪ್ರಮಾಣದ ರಹಸ್ಯ ದಾಖಲೆಗಳನ್ನು ತಮ್ಮ ಫ್ಲೋರಿಡಾದ ಮನೆಯಲ್ಲಿ ಇಟ್ಟುಕೊಂಡಿದ್ದರು. ಆಗಸ್ಟ್‌ನಲ್ಲಿ ಎಫ್ಬಿಐ ಅಧಿಕಾರಿಗಳು ಶೋಧ ನಡೆಸಿದಾಗ, ಸುಮಾರು 11 ಸಾವಿರ ದಾಖಲೆಗಳು ಸಿಕ್ಕಿದ್ದವು.
ತಮ್ಮ ಮನೆಯಲ್ಲಿ ರಹಸ್ಯ ದಾಖಲೆಗಳು ಪತ್ತೆಯಾಗಿರುವ ಕುರಿತು ಪ್ರತಿಕ್ರಿಯಿಸಿರುವ ಬೈಡೆನ್, “ನಾವು ನ್ಯಾಯ ಇಲಾಖೆಯ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ನಮ್ಮ ಮನೆಯ ದಾಸ್ತಾನು ಕೊಠಡಿಯಲ್ಲಿ ಮತ್ತು ನನ್ನ ವೈಯಕ್ತಿಕ ಲೈಬ್ರರಿಯಲ್ಲಿ “ಗೌಪ್ಯತೆಯ ಗುರುತು’ ಇರುವ ಕೆಲವು ದಾಖಲೆಗಳು ಸಿಕ್ಕಿವೆ. ನ್ಯಾಯ ಇಲಾಖೆಗೆ ಕೂಡಲೇ ಮಾಹಿತಿ ನೀಡಲಾಗಿದೆ.
ಎಲ್ಲವೂ ಸದ್ಯದಲ್ಲೇ ಬಯಲಾಗಲಿದೆ’ ಎಂದಿದ್ದಾರೆ. ಆದರೆ, ಸುದ್ದಿಗಾರರ ಮರುಪ್ರಶ್ನೆಗೆ ಉತ್ತರ ಕೊಡಲು ಬೈಡೆನ್ ನಿರಾಕರಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಅಟಾರ್ನಿ ಜನರಲ್ ಮೆರ್ರಿಕ್ ಗಾರ್ಲೆಂಡ್ ಅವರು ವಿಶೇಷ ವಕೀಲರನ್ನು ನೇಮಿಸಿದ್ದಾರೆ.
Related Articles
ಪ್ರತಿಪಕ್ಷಗಳ ಕಿಡಿ:
ದಾಖಲೆ ಕಳವು ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ರಿಪಬ್ಲಿಕನ್ ಹೌಸ್ ಸ್ಪೀಕರ್ ಕೆವಿನ್ ಮ್ಯಾಕ್‌ಕಾರ್ಥಿ, “ಈ ಕುರಿತು ಕಾಂಗ್ರೆಸ್‌ನಿಂದ ಕೂಡಲೇ ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ. ಜತೆಗೆ, ಟ್ರಂಪ್ ಮನೆಗೆ ದಾಳಿ ಮಾಡಿದಂತೆ ಬೈಡೆನ್ ಮನೆ ಮೇಲೆ ಎಫ್ಬಿಐ ಯಾವಾಗ ದಾಳಿ ಮಾಡುತ್ತದೆ ಎಂದು ಪ್ರಶ್ನಿಸಿದ್ದಾರೆ.
ಅಧ್ಯಕ್ಷ ಬೈಡೆನ್ ಅವರು ವರ್ಗೀಕೃತ ಮತ್ತು ರಹಸ್ಯ ದಾಖಲೆಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಅವರ ನಿವಾಸದಲ್ಲಿ ಸಿಕ್ಕಿರುವ ರಹಸ್ಯ ದಾಖಲೆಗಳಲ್ಲಿ ಏನಿದೆ ಎಂದೇ ಅವರಿಗೆ ಗೊತ್ತಿಲ್ಲ. ದಾಖಲೆಗಳನ್ನು ನೋಡಿ ಅವರೇ ಅಚ್ಚರಿಗೀಡಾದರು.
– ಶ್ವೇತಭವನ