ಹೊಸದಿಲ್ಲಿ: ಅದಾನಿ-ಹಿಂಡನ್‌ಬರ್ಗ್ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕೆ ವಹಿಸಬೇಕು ಎಂಬ ಮನವಿಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದ್ದು, ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ವೇ ತನಿಖೆ ಮುಂದುವರಿಸಲಿ ಎಂದು ತೀರ್ಪು ನೀಡಿದೆ. ಜತೆಗೆ, 3 ತಿಂಗಳ ಒಳಗಾಗಿ ತನಿಖೆ ಪೂರ್ಣಗೊಳಿಸುವಂತೆಯೂ ಸೆಬಿಗೆ ಸೂಚಿಸಿದೆ.
ಸುಪ್ರೀಂ ತೀರ್ಪು ಹೊರಬೀಳುತ್ತಿದ್ದಂತೆಯೇ ಉದ್ಯಮಿ ಗೌತಮ್ ಅದಾನಿ ಅವರು “ಸತ್ಯಮೇವ ಜಯತೇ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಷೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಿಸಿ ಅದಾನಿ ಗ್ರೂಪ್ ವಂಚನೆ ಮಾಡುತ್ತಿತ್ತು ಎಂದು ಅಮೆರಿಕದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್ ತನ್ನ ವರದಿಯಲ್ಲಿ ಆರೋಪಿಸಿತ್ತು.
“ಅದಾನಿ ಗ್ರೂಪ್ ವಿರುದ್ಧ ಕೇಳಿ ಬಂದಿದ್ದ 24 ಆರೋಪಗಳ ಪೈಕಿ 22ನ್ನು ಸೆಬಿಯೇ ತನಿಖೆ ನಡೆಸಿದೆ. ಉಳಿದಿರುವ 2 ಪ್ರಕರಣಗಳನ್ನು ವಿಶೇಷ ತನಿಖಾ ಸಮಿತಿಗೆ ವರ್ಗಾಯಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಹೀಗಾಗಿ, ಇನ್ನು 3 ತಿಂಗಳಲ್ಲಿ ಸೆಬಿ ಉಳಿದ 2 ಪ್ರಕರಣಗಳ ತನಿಖೆಯನ್ನೂ ಪೂರ್ತಿಗೊಳಿಸಿ ವರದಿ ಸಲ್ಲಿಸಬೇಕು’ ಎಂದು ನ್ಯಾ| ಡಿ.ವೈ. ಚಂದ್ರಚೂಡ್, ನ್ಯಾ| ಜೆ.ಬಿ. ಪರ್ದಿವಾಲಾ, ನ್ಯಾ| ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿದೆ.
ಅದಾನಿ ಗ್ರೂಪ್ ವಿರುದ್ಧ ತನಿಖೆ ನಡೆಸಿದ ಸೆಬಿಯ ವರದಿಯನ್ನು ನಂಬಲು ಸಾಧ್ಯವಿಲ್ಲ ಎಂಬ ಉದ್ಯಮಿ ಜಾರ್ಜ್ ಸೊರೊಸ್ ನೇತೃತ್ವದ ಆರ್ಗನೈಸ್ಡ್ ಕ್ರೈಮ್ ಆ್ಯಂಡ್ ಕರಪ್ಶನ್ ರಿಪೋರ್ಟಿಂಗ್ ಪ್ರಾಜೆಕ್ಟ್ (ಒಸಿಸಿಆರ್‌ಪಿ)ನ ಆರೋಪವನ್ನು ಒಪ್ಪಲು ಸಾಧ್ಯವಿಲ್ಲ. ಮಾಧ್ಯಮ ವರದಿಗಳನ್ನು ಆಧರಿಸಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿತು.
ನ್ಯಾಯಪೀಠ ಹೇಳಿದ್ದೇನು?
– ವಿದೇಶಿ ಹೂಡಿಕೆದಾರರು, ಆಕ್ಷೇಪಗಳ ಸಲ್ಲಿಸುವಿಕೆ ಮತ್ತು ಬಹಿರಂಗಪಡಿಸುವಿಕೆಗೆ ಕುರಿತು ಸೆಬಿ ಜಾರಿ ಮಾಡಿದ ನಿಯಮ ಗಳ ವಿರುದ್ಧ ಸಲ್ಲಿಸಲಾಗಿರುವ ಆಕ್ಷೇಪಗಳಲ್ಲಿ ಹುರುಳಿಲ್ಲ.
– ಸೆಬಿ ತನಿಖೆಗಳಲ್ಲಿ ಪಾರದರ್ಶಕತೆ ಇಲ್ಲ ಎಂಬ ಆರೋಪಗಳಲ್ಲಿ ಸಮರ್ಥನೀಯ ಅಂಶವಿಲ್ಲ. ಹಿಂಡನ್‌ಬರ್ಗ್ ವರದಿಯಲ್ಲಿ ಇರುವಂತೆ ಷೇರುಪೇಟೆ ವಿಚಾರ ದಲ್ಲಿ ನಿಯಮ ಉಲ್ಲಂಘನೆ ಆಗಿದ್ದರೆ, ಕೇಂದ್ರ ಸರಕಾರಅದರ ವಿರುದ್ಧ ಕ್ರಮ ಕೈಗೊಳ್ಳಬೇಕು.
-ವಿಶ್ವಾಸರ್ಹತೆ ಇಲ್ಲದೆ, ಮೂರನೇ ಸಂಸ್ಥೆ ನೀಡಿದ ವರದಿಯನ್ನು ಸಾಕ್ಷ್ಯವೆಂದು ನಂಬಲಾಗದು
– ಸೆಬಿ ತನಿಖಾ ವ್ಯಾಪ್ತಿಯನ್ನು ಪ್ರಶ್ನೆ ಮಾಡುವ ವಿಚಾರದಲ್ಲಿ ಸುಪ್ರೀಂಕೋರ್ಟ್‌ಗೆ ಸೀಮಿತ ವ್ಯಾಪ್ತಿ ಇದೆ. ತನಿಖೆ ಹಸ್ತಾಂತರ ಮಾಡಲು ಸೂಕ್ತ ಆಧಾರ ಬೇಕು.