ವರದಿ: ಬಸವರಾಜ ಹೊಂಗಲ್
ಧಾರವಾಡ: ತಲೆ ಸುತ್ತು ಬಂದು ಬೀಳುತ್ತಿರುವ ಜ್ವರ ಬಾಧಿತರು, ಪ್ರತಿ ಮನೆಯಲ್ಲೂ ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳು, ಕಫ ಅಧಿಕವಾಗಿ ಹುಬ್ಬಳ್ಳಿ-ಧಾರವಾಡ ಆಸ್ಪತ್ರೆಗಳತ್ತ ದೌಡಾಯಿಸುತ್ತಿರುವ ಹಳ್ಳಿಗರು, ಬರೀ ಪ್ಯಾರಾಸಿಟಮಾಲ್ ಮಾತ್ರೆ, ಒಂದಿಷ್ಟು ಆ್ಯಂಟಿ ಬಯೋಟಿಕ್‌ಗಳನ್ನೇ ಅವಲಂಬಿಸಿ ಜನರನ್ನು ಟ್ರೀಟ್ ಮಾಡುತ್ತಿರುವ ಸ್ಥಳೀಯ ವೈದ್ಯರು. ಒಟ್ಟಿನಲ್ಲಿ ಗ್ರಾಮಗಳಲ್ಲೆಲ್ಲ ಆತಂಕದ ವಾತಾವರಣ..!
ಹೌದು. ಕೊರೊನಾ ಎರಡನೇ ಅಲೆ ಅತೀ ಕ್ರೂರತೆ ಮೆರೆದು ಚಿಕಿತ್ಸೆ ಸಿಗದೇ ಸಂಕಷ್ಟಕ್ಕೊಳಗಾಗಿರುವ ಜನಸಾಮಾನ್ಯರ ಮಧ್ಯೆ 1ನೇ ಅಲೆ ಕೊರೊನಾದಲ್ಲಿ ಯಾವುದೇ ಸಂಕಷ್ಟಕ್ಕೊಳಗಾಗದೇ ಹಳ್ಳಿಯಲ್ಲಿ ಕೆಲಸ ಮಾಡಿಕೊಂಡಿದ್ದ ಗ್ರಾಮೀಣರಿಗೆ ಈ ಬಾರಿ ಸೀಜನ್ ಜ್ವರ ತೀವ್ರ ಬಾಧಿಸುತ್ತಿದ್ದು, ಕೆಲ ಹಳ್ಳಿಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಕೆಲ ಹಳ್ಳಿಗಳಲ್ಲಿ ಸ್ಥಳೀಯ ವೈದ್ಯರೇ ಇದೀಗ ದೇವರಾಗಿ ಕೆಲಸ ಮಾಡುತ್ತಿದ್ದು, ತಮ್ಮ ಬಳಿ ಇರುವ ಪ್ಯಾರಾಸಿಟಮಾಲ್ ಮತ್ತು ಆ್ಯಂಟಿ ಬಯೋಟಿಕ್ ಮಾತ್ರೆಗಳಿಂದಲೇ ಈ ಸೀಜನ್ ಜ್ವರವನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅಷ್ಟೇಯಲ್ಲ, ಈ ಕ್ಷಣದವರೆಗೂ ಯಾವುದೇ ಸಾವು ಸಂಭವಿಸದಿರುವುದು ಮಾತ್ರ ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಜಿಲ್ಲೆಯ ಕಲಘಟಗಿ ತಾಲೂಕಿನ 15ಕ್ಕೂ ಹೆಚ್ಚು ಹಳ್ಳಿ, ಧಾರವಾಡ ತಾಲೂಕಿನ 25 ಹಳ್ಳಿಗಳು, ಕುಂದಗೋಳ ತಾಲೂಕಿನ 13, ಅಳ್ನಾವರ ತಾಲೂಕಿನ 5, ಹುಬ್ಬಳ್ಳಿ ತಾಲೂಕಿನ 15 ಹಳ್ಳಿಗಳು ಹಾಗೂ ನವಲಗುಂದ ತಾಲೂಕಿನ 18ಕ್ಕೂ ಅಧಿಕ ಗ್ರಾಮಗಳಲ್ಲಿ ಪ್ರತಿ ಬಾರಿಯಂತೆ ಏಪ್ರಿಲ್-ಮೇ ತಿಂಗಳಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿವೆ. ಆದರೆ ಕೊರೊನಾ 2ನೇ ಅಲೆಯ ಮಧ್ಯೆ ಮೊದಲೇ ಆತಂಕದಲ್ಲಿರುವ ಹಳ್ಳಿಗರಿಗೆ ಇದೀಗ ನೆಗಡಿ, ಕೆಮ್ಮು, ಕಫ ಮತ್ತು ಜ್ವರವನ್ನೇ ಪ್ರಧಾನವಾಗಿಟ್ಟುಕೊಂಡು ಬಾಧಿಸುತ್ತಿರುವ ಸೀಜನ್ ಜ್ವರ ಅಕ್ಷರಶಃ ಹಳ್ಳಿಗರು ಕೈಚೆಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ.
ಹಳ್ಳಿಗಳಲ್ಲಿ ನಿಂತಿಲ್ಲ ಮದುವೆ: 2ನೇ ಅಲೆ ಕೊರೊನಾ ಸಾವಿನ ಸಂಚಲನವನ್ನೇ ಸೃಷ್ಟಿಸಿದ್ದರೂ, ಕೆಲವಷ್ಟು ಜನ ಹಳ್ಳಿಗರಿಗೆ ಇನ್ನು ಬುದ್ಧಿ ಬಂದಂತೆ ಕಾಣುತ್ತಿಲ್ಲ. ಅಷ್ಟೇಯಲ್ಲ, ಈ ರೋಗದ ಗಂಭೀರತೆ ಅವರ ಮನೆ ಬಾಗಿಲಿಗೆ ಬಂದು ನಿಂತಿದ್ದರೂ ಮದುವೆ ಸಂಭ್ರಮದಿಂದ ಅವರಿಗೆ ಹೊರಗೆ ಬರಲು ಆಗುತ್ತಿಲ್ಲ. ಹೀಗಾಗಿ ಏ.23ರಿಂದಲೇ ವಾರಾಂತ್ಯ ಕರ್ಫ್ಯೂ ಮತ್ತು ಏ.27ರಿಂದ ಸಂಪೂರ್ಣ ಕರ್ಫ್ಯೂ ಘೋಷಣೆಯಾದರೂ ಇನ್ನು ಮದುವೆ ನಿಶ್ಚಯಿಸಿದವರು ಹೇಗಾದರೂ ಮಾಡಿ ಮದುವೆ ಮಾಡಿ ಮುಗಿಸುವ ಪ್ರಯತ್ನದಲ್ಲೇ ಇದ್ದಾರೆ. ಹೀಗಾಗಿ ಏ. 27, 29 ಹಾಗೂ ಮೇ 2ರಂದು ಅತೀ ಹೆಚ್ಚು ಮದುವೆ ಸಮಾರಂಭಗಳು ಹಳ್ಳಿಗಳಲ್ಲಿ ನಿಶ್ಚಯವಾಗಿದ್ದು ನಡೆಯುತ್ತಲೇ ಇವೆ.
ಆಯುರ್ವೇದ ಮದ್ದೆ?: ಸೀಜನ್ ಜ್ವರಕ್ಕೆ ಹಳ್ಳಿಗರು ಪ್ಯಾರಾಸಿಟಮಾಲ್, ಆ್ಯಂಟಿಬಯೋಟಿಕ್ ಜತೆಗೆ ಶುಂಠಿ ಕಷಾಯ ಸೇರಿದಂತೆ ಹಳ್ಳಿಯ ಮನೆ ಮದ್ದುಗಳನ್ನು ಮಾಡುತ್ತಿದ್ದಾರೆ. ತುಳಸಿ ತಪ್ಪಲ, ದಾಲಚಿನ್ನಿ, ಮೆಣಸಿನ ಕಾಡೆ, ಚಹಾದ ತಪ್ಪಲಿನ ಸೂಪು, ಸಾಬುದಾನಿ ಗಂಜಿ, ಹುರುಳಿ ಸಂಗಟಿ, ಅಜವಾನದ ಸಿಗರೇಟು, ಲಿಂಬೆಹಣ್ಣು, ಮಾವಿನ ಕಾಯಿ ಪಳುವು, ದೇಶಿ ಅಕ್ಕಿ ಗಂಜಿ ಸೇರಿದಂತೆ ಆಹಾರ ಔಷಧಿಗಳನ್ನೇ ಹೆಚ್ಚಾಗಿ ಪರಸ್ಪರ ಮಾತಾಡಿಕೊಂಡು ಬಳಸುತ್ತಿದ್ದಾರೆ. ಮಲೆನಾಡಿನ ಭಾಗದಂತಿರುವ ಕಲಘಟಗಿ, ಧಾರವಾಡ ಮತ್ತು ಅಳ್ನಾವರ ತಾಲೂಕಿನಲ್ಲಿ ಹಿತ್ತಲ ಮದ್ದಿಗೆ ಹೆಚ್ಚು ಪ್ರಾಶಸ್ತÂ ಲಭಿಸುತ್ತಿದ್ದು, ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಮುಗಿ ಬಿದ್ದಿದ್ದಾರೆ.
ಕರ್ಫ್ಯೂ ಸಂಕಷ್ಟ : ಇನ್ನು ಸಣ್ಣಪುಟ್ಟ ಜ್ವರ, ತಲೆನೋವು ಇತ್ಯಾದಿ ತೊಂದರೆಗಳಾದರೆ ಧಾರವಾಡ-ಹುಬ್ಬಳ್ಳಿಯತ್ತ ಮುಖ ಮಾಡುವ ಗ್ರಾಮಾಂತರ ಪ್ರದೇಶದ ಜನರಿಗೆ ಇದೀಗ ಕರ್ಫ್ಯೂ ಸಂಕಷ್ಟ ತಂದೊಡ್ಡಿದೆ. ತಮಗೆ ಬೇಕೆಂದಾಗ ನಗರಕ್ಕೆ ಬಂದು ಚಿಕಿತ್ಸೆ ಪಡೆಯಲು ಸದ್ಯಕ್ಕೆ ಅವಕಾಶವೇ ಇಲ್ಲ. ಹೆಚ್ಚು ಕಡಿಮೆ ಸಣ್ಣಪುಟ್ಟ ಕ್ಲಿನಿಕ್‌ಗಳು ಕೊರೊನಾ ಭಯದಿಂದ ಕದ ಹಾಕಿಕೊಂಡಿವೆ. ವೈದ್ಯರೂ ಕೊರೊನಾಕ್ಕೆ ಹೆದರಿದ್ದಾರೆ.