Advertisement

ಸತ್ತರೆ ಶವ ಸಂಸ್ಕಾರಕ್ಕೆ ಜಾಗದ ಹುಡುಕಾಟ!

04:01 PM Jan 10, 2020 | Suhan S |

ನರೇಗಲ್ಲ: ಕೋಚಲಾಪುರ ಗ್ರಾಮದಲ್ಲಿ ಯಾರದಾರೂ ಸತ್ತರೆ ಶವ ಮನೆಯಲ್ಲಿ ಇಟ್ಟುಕೊಂಡು ಸಂಸ್ಕಾರಕ್ಕಾಗಿ ಜಾಗದ ಹುಡುಕಾಟ ನಡೆಸಬೇಕು. ಈ ಸಮಸ್ಯೆ ಇಂದು ನಿನ್ನೆಯದಲ್ಲ. ಹಲವು ದಶಕಗಳಿಂದ ಈ ಊರಿನವರಿಗೆ ಸ್ಮಶಾನ ಸಮಸ್ಯೆ ಬಗೆಹರಿದಿಲ್ಲ. ಗ್ರಾಮದಲ್ಲಿ ಹಲವು ದಶಕಗಳಿಂದ ರುದ್ರಭೂಮಿ ಇಲ್ಲದೇ ಇಲ್ಲಿನ ನಿವಾಸಿಗಳು ಸಾಕಷ್ಟು ಪರದಾಟ ನಡೆಸುತ್ತಿದ್ದಾರೆ.

Advertisement

ಜಮೀನು ಹೊಂದಿದವರು ತಮ್ಮ ಹೊಲಗಳಲ್ಲಿ ಶವ ಸಂಸ್ಕಾರ ಮಾಡುತ್ತಾರೆ. ಆದರೆ ಬಡವರು ಸತ್ತರೆ ರಸ್ತೆಯಲ್ಲೇ ಅಂತ್ಯ ಸಂಸ್ಕಾರ ಮಾಡಿ ಕೈಮುಗಿದು ಬರುತ್ತಾರೆ. ಮಳೆಗಾಲದ ಸಮಯದಲ್ಲಿ ಸತ್ತ ಶವಗಳನ್ನು ಸುಡುವುದಕ್ಕೆ ಯಾವುದೇ ರೀತಿಯ ಸೌಲಭ್ಯ ಇಲ್ಲದೇ ನಡು ರಸ್ತೆಯಲ್ಲಿ ಶವಗಳನ್ನು ಸುಡುವ ಅಥವಾ ಮಣ್ಣು ಮಾಡುವ ಸ್ಥಿತಿ ಇಲ್ಲಿದೆ.

ಗ್ರಾಮದಲ್ಲಿ 720ಕ್ಕೂ ಅಧಿಕ ಮನೆಗಳಿದ್ದು, ಇಲ್ಲಿ ರಡ್ಡಿ, ವೀರಶೈವ ಲಿಂಗಾಯತ, ಕುಂಬಾರ, ಹಡಪದ, ಮುಸ್ಲಿಂ ಸೇರಿದಂತೆ ಅನೇಕ ಜಾತಿಯ ಜನರು ವಾಸಮಾಡುತ್ತಾರೆ. ಆದರೆ, ಮುಸ್ಲಿಂಸಮಾಜದವರಿಗೆ ಸ್ಮಶಾನವಿದೆ. ಇವರಿಗೆ ಯಾವುದೇ ರೀತಿಯ ತೊಂದರೆಯಿಲ್ಲ. ಇನ್ನೂಳಿದ ಜಾತಿಯ ಜನರು ಅಂತ್ಯ ಸಂಸ್ಕಾರಕ್ಕೆ ಹೊಲಹೊಲ ತಿರುಗಾಡಿ ಯಾರದೋ ಹೊಲದಲ್ಲಿ ಮುಚ್ಚುವ, ಸುಡುವ ಪರಿಸ್ಥಿತಿಯಿದೆ. ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ತಹಶೀಲ್ದಾರ್‌ಗೆ ಹತ್ತು ಹಲವಾರು ಲಿಖೀತ ಅರ್ಜಿ ಮತ್ತು ಮೌಖೀಕವಾಗಿ ಸ್ಥಳೀಯ ಶಾಸಕರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಈಗಾಗಲೇ ತಾಲೂಕು ಆಡಳಿತದಿಂದ ಯಾವ ಗ್ರಾಮದಲ್ಲಿ ಸ್ಮಶಾನವಿಲ್ಲ ಎಂಬುದನ್ನು ಸರ್ವೇ ಮಾಡಿದ್ದು, ಅಲ್ಲದೇ ಆ ಗ್ರಾಮಗಳಲ್ಲಿ ಡಂಗುರ ಸಾರಲಾಗಿದೆ. ಸ್ಮಶಾನ ಇಲ್ಲದ ಗ್ರಾವದಲ್ಲಿನ ಜಮೀನು ಹೊಂದಿದ್ದ ಮಾಲೀಕರು ರುದ್ರಭೂಮಿಗೆ ತಮ್ಮ ಜಮೀನುಗಳನ್ನು ಸರ್ಕಾರಕ್ಕೆ ನೀಡುವುದಕ್ಕೆ ಮುಂದಾಗುತ್ತಿಲ್ಲ. ರೈತರು ಸ್ಮಶಾನಕ್ಕೆ ಭೂಮಿಯನ್ನು ಕೊಟ್ಟರೆ ಸರ್ಕಾರದಿಂದ ಖರೀದಿ ಮಾಡಿ ಪ್ರತಿಯೊಂದು ಸಮಾಜಕ್ಕೆ ಸ್ಮಶಾನ ವ್ಯವಸ್ಥೆ ಕಲ್ಪಿಸಲಾಗುವುದು. ವೀರಣ್ಣ ಅಡಗತ್ತಿ, ನರೇಗಲ್ಲ ಕಂದಾಯ ನಿರೀಕ್ಷಕ

 

Advertisement

-ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next