Advertisement

ಉತ್ತರದಲ್ಲಿ ಎತ್ತರ, ದಕ್ಷಿಣದಲ್ಲಿ ನೆಲೆಗಾಗಿ ಹುಡುಕಾಟ

08:34 PM May 24, 2019 | Lakshmi GovindaRaj |

ಹಿಂದಿ ಬಾಹುಳ್ಯದ ಉತ್ತರ ಭಾರತ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಅಭೂತಪೂರ್ವ ಜಯಭೇರಿ ಬಾರಿಸಿ ಮತ್ತೂಮ್ಮೆ ಅಧಿಕಾರದ ಗದ್ದುಗೆ ಏರಿದ ಬಿಜೆಪಿ, ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಹೊರತುಪಡಿಸಿ ಸಂಪೂರ್ಣವಾಗಿ ನೆಲಕಚ್ಚಿದೆ. ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ತಂತ್ರಗಳು ಇಲ್ಲಿ ಫ‌ಲಿಸಿಲ್ಲ. ತೆಲಂಗಾಣ, ಕೇರಳ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ 99 ಲೋಕಸಭಾ ಕ್ಷೇತ್ರ ಒಳಗೊಂಡಿದ್ದು, ಈ ಪೈಕಿ ತೆಲಂಗಾಣದಲ್ಲಿ ಮಾತ್ರ ಬಿಜೆಪಿ 4 ಸ್ಥಾನ ಗಳಿಸಿದೆ.

Advertisement

ಉಳಿದ ಮೂರು ರಾಜ್ಯಗಳಲ್ಲಿ ಸೊನ್ನೆ ಸುತ್ತುವ ಮೂಲಕ ಹೀನಾಯವಾಗಿ ಸೋಲನ್ನಪ್ಪಿದೆ. ದೇಶದಲ್ಲೇ ಮೋದಿ ಅಲೆ ಸುನಾಮಿಯಂತೆ ಅಪ್ಪಳಿಸಿ ಘಟಾನುಘಟಿ ನಾಯಕರ ರಾಜಕೀಯ ಭವಿಷ್ಯವನ್ನು ಕಮರುವಂತೆ ಮಾಡಿದ್ದರೆ ಇತ್ತ ಈ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಎದುರು ಸಂಪೂರ್ಣವಾಗಿ ಮಂಡಿಯೂರಿದೆ.

ದೇವರನಾಡಲ್ಲಿ ಫ‌ಲಿಸದ ಹಿಂದುತ್ವ ತಂತ್ರ: ಯುಡಿಎಫ್ ಹಾಗೂ ಎಲ್‌ಡಿಎಫ್ ಭದ್ರಕೋಟೆ ಕೇರಳದಲ್ಲಿ ಒಂದಿಷ್ಟು ಕ್ಷೇತ್ರಗಳನ್ನು ತನ್ನ ವಶಕ್ಕೆ ಪಡೆಯಲು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ವ್ಯೂಹಾತ್ಮಕ ತಂತ್ರ ರೂಪಿಸಿದ್ದ ಬಿಜೆಪಿ ಖಾತೆ ತೆರೆಯುವಲ್ಲಿಯೂ ವಿಫ‌ಲವಾಗಿದೆ. ಕೆಲವು ತಿಂಗಳ ಹಿಂದೆ ಶಬರಿಮಲೆ ದೇಗುಲದಲ್ಲಿ ಮಹಿಳೆಯರ ಮುಕ್ತ ಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

“ಈ ತೀರ್ಪು ಹಿಂದೂಗಳ ಧಾರ್ಮಿಕ ಭಾವನಗಳಿಗೆ ವಿರುದ್ಧವಾಗಿದೆ, ಆಡಳಿತಾರೂಢ ಎಲ್‌ಡಿಎಫ್ ಹಿಂದೂ ವಿರೋಧಿ ಧೋರಣೆ ತೋರುತ್ತಿದೆ. ಹಿಂದೂ ಕಾರ್ಯಕರ್ತರನ್ನು ಹತ್ಯೆಗೈಯ್ಯಲಾಗುತ್ತಿದೆ’ ಎಂಬ ವಿಷಯಗಳನ್ನು ಮುನ್ನೆಲೆಗೆ ತಂದು ಹಿಂದೂ ಮತಗಳನ್ನು ಕ್ರೋಡೀಕರಿಸಲು ಕಮಲ ಪಡೆ ತಂತ್ರಗಳನ್ನು ಹೆಣೆದಿತ್ತು. ಈ ಭಾವನಾತ್ಮಕ ವಿಚಾರ ಗಳನ್ನೇ ಮುಂದಿಟ್ಟುಕೊಂಡು ಹಲವು ರ್ಯಾಲಿ, ಸಮಾವೇಶ ಆಯೋಜಿಸಿತ್ತು.

ತಿರುವನಂತಪುರ, ತ್ರಿಶ್ಯೂರ್‌ ಮತ್ತಿತರ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿತ್ತು. ಆದರೆ, ಇದ್ಯಾವ ತಂತ್ರವೂ ಫ‌ಲಿಸಿಲ್ಲ. 20 ಕ್ಷೇತ್ರಗಳ ಸಂಸತ್‌ ಸದಸ್ಯ ಬಲದ ಕೇರಳದಲ್ಲಿ ಯುಡಿಎಫ್ 19 ಸ್ಥಾನ ದೋಚಿಕೊಂಡಿದೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಮರು ಹಾಗೂ ಕ್ರೈಸ್ತರು ಕಾಂಗ್ರೆಸ್‌ ಕೈಹಿಡಿದಿದ್ದರಿಂದ ಬಿಜೆಪಿ ಕಳಪೆ ಸಾಧನೆ ತೋರಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ತೆಲಂಗಾಣದಲ್ಲಿ ಟಿಆರ್‌ಎಸ್‌ ವೇಗಕ್ಕೆ ಬ್ರೇಕ್‌: ದಕ್ಷಿಣ ರಾಜ್ಯಗಳ ಪೈಕಿ ತೆಲಂಗಾಣದಲ್ಲಿ ಮಾತ್ರ ಬಿಜೆಪಿಗೆ ತುಸು ನಿರಾಳ ಮೂಡಿಸಿದೆ. 17 ಸಂಸತ್‌ ಸದಸ್ಯ ಬಲದ ಈ ರಾಜ್ಯದಲ್ಲಿ 4 ಸ್ಥಾನ ಪಡೆದಿರುವ ಬಿಜೆಪಿ ಅಸ್ತಿತ್ವ ಉಳಿಸಿಕೊಂಡಿದೆ. ಕ್ಲೀನ್‌ ಸ್ವೀಪ್‌ ಮಾಡಿ ಕಿಂಗಮೇಕರ್‌ ಆಗುವ ನಿರೀಕ್ಷೆ ಹೊಂದಿದ್ದ ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಅವರನ್ನು ಕಟ್ಟಿ ಹಾಕುವಲ್ಲಿ ಅಲ್ಪಮಟ್ಟಿಗೆ ಯಶಸ್ವಿಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 100 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡು ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿದ್ದ ಬಿಜೆಪಿಗೆ ಹಾಲಿ ಫ‌ಲಿತಾಂಶ ಮುಂದಿನ ದಿನಗಳಲ್ಲಿ ಪಕ್ಷ ವಿಸ್ತರಿಸುವುದಕ್ಕೆ ಸಹಾಯವಾಗಲಿದೆ.

ಆಂಧ್ರದಲ್ಲಿ ಜಗನ್‌ ಅಲೆ: 25 ಸಂಸತ್‌ ಬಲದ ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ನೇತಾರ ಜಗನ್‌ಮೋಹನ್‌ ರೆಡ್ಡಿ ಕ್ಲೀನ್‌ ಸ್ವೀಪ್‌ ಮಾಡಿ ಎಲ್ಲ ಪಕ್ಷಗಳನ್ನೂ ಧೂಳಿಪಟ ಮಾಡಿದ್ದಾರೆ. ಈ ಬಾರಿ ಜಗನ್‌ ಫಿನಿಕ್ಸ್‌ ಪಕ್ಷಿಯಂತೆ ಮೇಲೆದ್ದು, ನಾಯ್ದುಗೆ ಮುಖಭಂಗ ಉಂಟುಮಾಡಿದ್ದಾರೆ. ದೇಶದಲ್ಲಿ ಮೋದಿ ಅಲೆ ಇದ್ದರೆ, ಆಂಧ್ರದಲ್ಲಿ ಜಗನ್‌ ಅಲೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ದಾಖಲಿಸುವಂತೆ ಮಾಡಿದೆ.

ಆಂಧ್ರ ವಿಭಜನೆ ನಂತರ ಮೊದಲ ಬಾರಿ ಅಧಿಕಾರಕ್ಕೇರಿದ್ದ ನಾಯ್ಡು ಅವರ ವೈಫ‌ಲ್ಯಗಳು ಹಾಗೂ ಆಡಳಿತವಿರೋಧಿ ಅಲೆಯನ್ನು ಮುಂದಿಟ್ಟುಕೊಂಡು ಜಗನ್‌ ರಾಜ್ಯದಲ್ಲಿ 3,648 ಕಿ.ಮೀ. ಪಾದಯಾತ್ರೆ ನಡೆಸಿ ಪ್ರತಿ ಹಳ್ಳಿಗಳನ್ನೂ ಸುತ್ತಿ ಜನರಿಗೆ ಹತ್ತಿರವಾಗಿ, ಅನುಕಂಪದ ಲಾಭ ಪಡೆಯುವಲ್ಲಿ ಸಫ‌ಲರಾಗಿದ್ದಾರೆ. ಜಗನ್‌ ವೇಗಕ್ಕೆ ಕಮಲ ಮುದುಡಿ ಹೋಗಿದೆ.

ತ.ನಾಡಿನಲ್ಲಿ ಸೂರ್ಯ ಕಿರಣಕ್ಕೆ ಮುದುಡಿದ ತಾವರೆ: ತಮಿಳುನಾಡಿನಲ್ಲಿ ಜಯಲಲಿತಾ ಹಾಗೂ ಕರುಣಾನಿಧಿ ಇಲ್ಲದ ಮೊದಲು ಎದುರಾದ ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಿಸುವ ನಿರೀಕ್ಷೆ ಇತ್ತು. ಎಐಎಡಿಎಂಕೆ ಒಡಕಿನ ಲಾಭ ಪಡೆಯಲು ಬಿಜೆಪಿ ಹವಣಿಸಿತ್ತು. ಆದರೆ, ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌ ಇದಕ್ಕೆ ಆಸ್ಪದವನ್ನೇ ನೀಡದೆ ತಮ್ಮ ಮೈತ್ರಿ ಕೂಟಕ್ಕೆ 31 ಸ್ಥಾನ ತಂದುಕೊಟ್ಟಿದ್ದಾರೆ.

ಈ ಪೈಕಿ ಡಿಎಂಕೆ 23 ಕ್ಷೇತ್ರದಲ್ಲಿ ಸೂರ್ಯ ಪ್ರಜ್ವಲಿಸುವಂತೆ ಮಾಡಿದ್ದಾರೆ. 8 ಸ್ಥಾನ ಪಡೆದಿರುವ ಕಾಂಗ್ರೆಸ್‌ ನಿಟ್ಟಿಸಿರುವ ಬಿಟ್ಟಿದ್ದರೆ, ಆಡಳಿತಾರೂಢ ಎಐಎಡಿಎಂಕೆ ಒಂದು ಸ್ಥಾನ ಮಾತ್ರ ಗಳಿಸಿದೆ. ದೇಶಾದ್ಯಂತ ಮೋದಿ ಅಲೆ ಇದ್ದರೂ ತಮಿಳುನಾಡಿಗೆ ಮಾತ್ರ ಯಾವುದೇ ಪರಿಣಾಮ ಬೀರಿಲ್ಲ.

ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ಪೋನ್‌ ರಾಧಾಕೃಷ್ಣನ್‌, ರಾಜ್ಯ ಬಿಜೆಪಿ ಘಟಕದ ನಾಯಕಿ ತಮಿಳುಸೈ ಸುಂದರ ರಾಜನ್‌ ಡಿಎಂಕೆ ಮೈತ್ರಿಕೂಟದ ಎದುರು ಪರಾಭವಗೊಂಡಿದ್ದಾರೆ. ಏತನ್ಮಧ್ಯೆ, ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿ.ವೈಥಿಲಿಂಗಂ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಮಿತ್ರ ಪಕ್ಷವಾದ ಎಐಎನ್‌ಆರ್‌ಸಿ ಪಾರ್ಟಿ ಅಭ್ಯರ್ಥಿ ನಾರಾಯಣ ಸ್ವಾಮಿ ಕೇಶವನ್‌ 84 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ದಾಖಲೆ: ದಕ್ಷಿಣ ಭಾರತದ ಹೆಬ್ಟಾಗಿಲು ಎಂದೇ ಭಾವಿಸಲಾಗಿ ರುವ ಕರ್ನಾಟಕದಲ್ಲಿ ಬಿಜೆಪಿ 25 ಸ್ಥಾನ ಪಡೆದು ದಾಖಲೆ ಜಯಗಳಿಸಿದೆ. ಬಿಜೆಪಿ ವೇಗಕ್ಕೆ ಕಡಿವಾಣ ಹಾಕಲು ಮೈತ್ರಿಯಾಗಿ ಚುನಾವಣೆ ಎದುರಿಸಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅತ್ಯಂತ ಕಳಪೆ ಸಾಧನೆ ತೋರಿ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿವೆ. ಮೋದಿ ಅಲೆ ಎದುರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಘಟಾನುಘಟಿ ನಾಯಕರು ಮುಗ್ಗರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next