ವಾಡಿ (ಚಿತ್ತಾಪುರ): ಗ್ರಾಮೀಣ ಜನರ ಪ್ರತಿರೋಧದ ನಡುವೆಯೂ ಚಿತ್ತಾಪುರ ತಾಲ್ಲೂಕಿನಲ್ಲಿ ಜಲಜೀವನ ಮಿಷನ್ ಯೋಜನೆ ಜಾರಿಗೆ ತರಲು ಅಧಿಕಾರಿಗಳ ಪ್ರಯತ್ನ ಮುಂದು ವರೆದಿದ್ದು, ಕಮರವಾಡಿ ಗ್ರಾಪಂ ವ್ಯಾಪ್ತಿಯ ಮೌಳಿ ತಾಂಡಾದ ಮನೆಗಳಿಗೆ ಈಗ ಮೀಟರ್ ನಳಗಳ ಜೋಡಣೆ ಕಾರ್ಯ ಶೇ.100 ರಷ್ಟು ಪೂರ್ಣಗೊಂಡಿದೆ.
ಕೃಷಿ ಮತ್ತು ಕೂಲಿ ಕೆಲಸವನ್ನೇ ನಂಬಿ ಜೀವನ ಸಾಗಿಸುತ್ತಿರುವ ಮೌಳಿ ತಂಡಾದ ಬಂಜಾರಾ (ಲಂಬಾಣಿ) ಕುಟುಂಬಗಳು, ಮೀಟರ್ ನಳಗಳಿಂದ ಆತಂಕಕ್ಕೀಡಾಗಿದ್ದಾರೆ. ಕೇವಲ ೩೬ ಮನೆಗಳಿರುವ ಈ ಕಿರು ತಾಂಡಾದಲ್ಲಿ ಶೇ.೯೯ ರಷ್ಟು ಬಿಪಿಎಲ್ ಬಡವರಿದ್ದಾರೆ. ಸ್ವಾತಂತ್ರಾöತ್ರ್ಯಾ ನಂತರದಿಂದ ಇಲ್ಲಿನ ಜನರು ದೂರದಲ್ಲಿ ಹರಿಯುತ್ತಿದ್ದ ಹಳ್ಳದ ನೀರು ತಂದು ಕುಡಿದು ಬುದಿಕಿದ್ದಾರೆ. ನಂತರ ಪಂಚಾಯತಿ ಕೊರೆಸಿದ ಸಾರ್ವಜನಿಕ ಕೊಳವೆ ಬಾವಿ ಇವರಿಗೆ ಆಸರೆಯಾಗಿತ್ತು. ನಳಗಳ ಸೌಲಭ್ಯದಿಂದ ವಂಚಿತರಾಗಿದ್ದ ತಾಂಡಾದ ಜನರ ಪ್ರತಿಯೊಂದು ಮನೆಗೆ ೭೫ ವರ್ಷಗಳ ಬಳಿಕ ನಳ ಸಂಪರ್ಕ ನೀಡಲಾಗಿದೆ. ಮನೆಗೆ ಕುಡಿಯುವ ನೀರಿನ ನಳ ಬಂದಿದೆ ಎಂದು ಖುಷಿ ಪಡುತ್ತಿದ್ದ ಜನರೀಗ ನಳಕ್ಕೆ ಅಳವಡಿಸಲಾಗಿರುವ ಮೀಟರ್ ಕಂಡು ಚಿಂತಿತರಾಗಿದ್ದಾರೆ. ಮುಂದೊಂದು ದಿನ ಪ್ರತಿ ತಿಂಗಳು ಬಿಲ್ ಬಂದರೆ ಹೇಗೆ? ಎಂಬ ಆತಂಕ ಅವರನ್ನು ಕಾಡುತ್ತಿದೆ.
ಕೈಯಿಂದ ಪಂಪ್ ಮಾಡಿ ನೀರು ತರಲಾಗುತ್ತಿದ್ದ ತಾಂಡಾದ ಜಲಮೂಲ ಕೊಳವೆ ಬಾವಿಗೂ ಈಗ ಸೀಲ್ಡೌನ್ ಮಾಡಲಾಗಿದ್ದು, ಜಲಜೀವನ ಮಿಷನ್ ಮೀಟರ್ ನಳದ ಯೋಜನೆಯ ನಿಜಬಣ್ಣ ಬಯಲಾಗಿದೆ. ಕೊಳವೆ ಬಾವಿಯಿಂದ ಜನರ ಮನೆಗಳಿಗೆ ನೇರ ಪೈಪ್‌ಲೈನ್ ಜೋಡಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ಒಂದು ತಾಸು ನೀರು ಕೊಡಲಾಗುತ್ತಿದೆ. ಸಾರ್ವಜನಿಕರಿಂದ ರೂ.೭೦೦ ಮೀಟರ್ ಶುಲ್ಕ ಪಡೆದಿರುವ ಜಲಜೀವನ್ ಮಿಷನ್ ಯೋಜನೆಯ ಅಧಿಕಾರಿಗಳು, ಶುದ್ಧ ನೀರು ಸರಬರಾಜು ಮಾಡದೆ ಪ್ಲೋರಾಯ್ಡ್ಯುಕ್ತ ಬೋರ್‌ವೆಲ್ ನೀರನ್ನೇ ನೇರವಾಗಿ ಪೂರೈಸಲಾಗುತ್ತಿದೆ ಎಂಬ ಆರೋಪ ತಾಂಡಾ ಜನರಿಂದ ಕೇಳಿಬಂದಿದೆ.
ನಳಗಳಿಗೆ ಬೀಗ ಹಾಕುತ್ತಿದ್ದಾರೆ ಜನರು: ಜಲಜೀವನ್ ಮಿಷನ್ ಯೋಜನೆಯ ನಳಗಳು ಮೀಟರ್ ಇಲ್ಲದೆ ಜೋಡಣೆ ಕಂಡಿಲ್ಲ. ಯೋಜನೆಯ ಬಗ್ಗೆ ಅರಿಯದ ಮೌಳಿ ತಂಡಾದ ಮುಗ್ದ ಜನರಿಗೆ ನಳ ಕೊಟ್ಟು ಅಧಿಕಾರಿಗಳು ಮೀಟರ್ ಅಳವಡಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಹೆಚ್ಚು ನೀರು ಬಳಸಿದರೆ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಜನರು ಕೂಲಿ ಕೆಲಸಕ್ಕೆ ಹೋಗುವಾಗ ನಳಗಳಿಗೆ ಬೀಗ ಜಡಿದು ಹೋಗುತ್ತಿದ್ದಾರೆ. ಕೆಲವರು ಮೀಟರ್ ಕಿತ್ತುಹಾಕಿ ನೇರವಾಗಿ ಪೈಪ್‌ದಿಂದ ನೀರು ಪಡೆಯುತ್ತಿದ್ದಾರೆ. ಒಟ್ಟಾರೆ ನಿಗೂಢತೆ ಕಾಪಾಡಿಕೊಂಡಿರುವ ಮೀಟರ್ ನಳ ಯೋಜನೆ ಮಾತ್ರ ಗ್ರಾಮೀಣ ಜನರ ನಿದ್ದೆಗೆಡಿಸಿದೆ.
“ಮೀಟರ್ ಹಚ್ಚಿ ನಮಗೆ ನಿದ್ದೆ ಬರದಂಗೆ ಮಾಡಿದ್ದಾರೆ. ಕುಡಿಯಲು ಉಚಿತವಾಗಿ ನೀರು ಕೊಡಬೇಕಾದ ಸರ್ಕಾರ ವಿದ್ಯುತ್ ಬಿಲ್ ಮಾದರಿಯಲ್ಲಿ ನೀರಿಗೂ ದರ ನಿಗದಿಪಡಿಸಲು ಮುಂದಾಗಿದೆ. ಹೊಲಗಳಲ್ಲಿ ಕೂಲಿ ಕೆಲಸ ಮಾಡಿ ಬದುಕುವ ನಾವು ನೀರಿನ ಬಿಲ್ ಕಟ್ಟಲು ಸಾಧ್ಯವಿಲ್ಲ. ನಳ ಇರಲಿ ಪಂಚಾಯಿತಿಗೆ ವಾರ್ಷಿಕ ತೆರಿಗೆ ಪಾವತಿಸುತ್ತೇವೆ. ಆದರೆ ಈ ಮೀಟರ್ ಮಾತ್ರ ಬೇಡ”
-ಠಾಕೂರ ರಾಠೋಡ. ಮೌಳಿ ತಾಂಡಾ ನಿವಾಸಿ.
ವರದಿ : ಮಡಿವಾಳಪ್ಪ ಹೇರೂರ