ಬೆಂಗಳೂರು: ಕರ್ನಾಟಕ ಒಳಗೊಂಡಂತೆ ಕರಾವಳಿಯ ಆಳ ಸಮುದ್ರದಲ್ಲಿ ’12 ನಾಟಿಕಲ್ ಮೈಲ್’ ಆಚೆಗೆ ಬೆಳಕು ಮೀನುಗಾರಿಕೆ ಅಥವಾ ಬುಲ್ ಅಥವಾ ಪೇರ್ ಟ್ರಾಲಿಂಗ್‌ಅನ್ನು ನಿಷೇಧಿಸಿ ಕೇಂದ್ರ ಸರ್ಕಾರ 2017ರ ನ.10ರಂದು ಹೊರಡಿಸಿದ್ದ ಆದೇಶಕ್ಕೆ ಮನ್ನಣೆ ನೀಡಿರುವ ಹೈಕೋರ್ಟ್, ಕೇಂದ್ರ ಸರ್ಕಾರದ ಆದೇಶ ಪಾಲಿಸುವಂತೆ ನಿರ್ದೇಶನ ನೀಡಿದೆ.
ಉಡುಪಿಯ ಮಲ್ಪೆ ಬಂದರಿನ ಅಖೀಲ ಕರ್ನಾಟಕ ಪರ್ಸೆ ಸೀನ್ ಮೀನು ಗಾರರ ಸಂಘ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾ.ಅಲೋಕ್ ಅರಾಧೆ ಅವರಿದ್ದ ಏಕಸದಸ್ಯ ಪೀಠ ‘ಈ ಹಿಂದೆ ಷರತ್ತು ಬದ್ಧ ಮೀನುಗಾರಿಕೆಗೆ ಅವಕಾಶ ನೀಡಿ 2018ರ ಡಿ.21ರಂದು ನೀಡಿದ್ದ ಆದೇಶವನ್ನು ಬುಧವಾರ ಮಾರ್ಪಾಡು ಮಾಡಿ ಕೇಂದ್ರದ ಆದೇಶ ಪಾಲನೆ ಮಾಡಲು ಅರ್ಜಿದಾರರಿಗೆ ನಿರ್ದೇಶನ ನೀಡಿತು.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ವಕೀಲೆ ಎಂ.ಸಿ ನಾಗಶ್ರೀ , ಎಲ್‌ಇಡಿ, ಹಾಲೋಜನ್ ಮತ್ತಿತರ ಬೆಳಕು ಬಳಸಿ ಸಮುದ್ರಾಳದಲ್ಲಿ ಯಾಂತ್ರೀಕೃತ ದೋಣಿಗಳ ಮೂಲಕ ಮೀನುಗಾರಿಕೆ ಮಾಡಲಾಗುತ್ತಿದೆ. ಇದರಿಂದ ಅಪರೂಪದ ಮೀನಿನ ಸಂತತಿ ಹಾಗೂ ಮೀನು ಮರಿಗಳನ್ನೂ ಸಹ ಹಿಡಿಯಲಾಗುತ್ತಿತ್ತು. ಇದು ಮೀನುಗಳ ಉತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
”ಕೋಟ್ಯಂತರ ರೂ. ಬಂಡವಾಳ ಹೂಡಿ ಯಾಂತ್ರಿಕೃತ ದೋಣಿ ಖರೀದಿಸಿ ಬೆಳಕು ಬಳಸಿ ಮೀನುಗಾರಿಕೆ ಮಾಡಲಾಗುತ್ತಿದ್ದು, ಕೇಂದ್ರದ ನಿರ್ಧಾರದಿಂದ ಅದನ್ನೇ ಅವಲಂ ಬಿಸಿರುವ ಕುಟುಂಬಗಳಿಗೆ ತೊಂದರೆ ಆಗಿದೆ. ಕೇಂದ್ರ ರಾಜ್ಯಗಳ ಅಭಿಪ್ರಾಯ ಕೇಳದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ನಿರ್ಧಾರ ಮರು ಪರಿಶೀಲಿಸುವಂತೆ ಕೋರಿದ್ದರೂ ಸಹ ಸ್ಪಂದಿಸಿಲ್ಲ” ಎಂದು ವಿವರಿಸಿದರು.
ಈ ಮಧ್ಯೆ ಪಾರಂಪರಿಕ ಮೀನುಗಾರರು ಮಧ್ಯಂತರ ಅರ್ಜಿ ಸಲ್ಲಿಸಿ ಬೆಳಕು ಮೀನುಗಾರಿಕೆ ನಿಷೇಧಿಸು ವಂತೆ ಕೋರಿದ್ದರು. ಇದೀಗ ಹೈಕೋರ್ಟ್ ಆದೇಶದಿಂದ ಪಾರಂಪರಿಕ ಮೀನು ಗಾರರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಕರ್ನಾಟಕ, ಕೇರಳ, ಗೋವಾ ಮತ್ತು ಮಹಾರಾಷ್ಟ್ರ ಒಳಗೊಂಡ ‘ವಿಶೇಷ ವಿತ್ತ ವಲಯ’ (ಇಇಜೆಡ್) ದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಲ್‌ಇಡಿ ಮತ್ತಿತರ ಬೆಳಕು ಬಳಸಿ ಸಮುದ್ರಾಳದಲ್ಲಿ ಮೀನುಗಾರಿಕೆ ನಡೆಸಲಾಗುತ್ತಿತ್ತು. ಅದು ಮೀನು ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬುದನ್ನು ಪರಿಗಣಿಸಿ ಕೇಂದ್ರ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ ಬೆಳಕು ಮೀನುಗಾರಿಕೆಯನ್ನು ನಿಷೇಧಿಸಿ 2017ರ ನ.10ರಂದು ಆದೇಶ ಹೊರಡಿ ಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.