ಕಾರವಾರ: ದೇವಬಾಗ ಅಂಬಿಗರವಾಡದಲ್ಲಿ 120 ಮೀಟರ್ ಉದ್ದಕ್ಕೆ ಕಡಲ್ಕೊರೆತ ಆಗಿರುವುದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನಕ್ಕೆ ಬಂದಿದ್ದು, ತಕ್ಷಣ 1 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿರುವ ಶಾಸಕಿ ರೂಪಾಲಿ ನಾಯ್ಕ ಉದಯವಾಣಿ ಪತ್ರಿಕೆ ವರದಿ ಗಮನಿಸಿ ಮುಖ್ಯಮಂತ್ರಿಗಳ ಗಮನಸೆಳೆದರು. ಸಮಸ್ಯೆ ಆಲಿಸಿದ ಮುಖ್ಯಮಂತ್ರಿ ತಕ್ಷಣ ಸಮುದ್ರ ಕೊರೆತ ತಡೆಗೆ ಒಂದು ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೇವಬಾಗ ಕಡಲತೀರದಲ್ಲಿ ಜು.27 ರಿಂದ ಸತತ ಮಳೆ ಬೀಳುತ್ತಿದೆ. ಈಗಲೂ ಮಳೆ ಮುಂದುವರಿದಿದೆ. 20 ವರ್ಷಗಳ ಹಿಂದೆ ಮಾಡಿದ್ದ ಅಲೆತಡೆಗೋಡೆ ಕಾಮಗಾರಿ ಸಹ ಸಮುದ್ರದ ಪಾಲಾಗಿದೆ. ಹೊಸದಾಗಿ ರಸ್ತೆಯ ಅಂಚಿಗೆ 120 ಮೀ. ಕಡಲ್ಕೊರೆತವಾಗಿದೆ. ಸ್ಥಳೀಯರು ಆತಂಕದಿಂದ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಗಮನವನ್ನು ಕಾರವಾರ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಸೆಳೆದರು. ಇದನ್ನು ಅರಿತ ಮುಖ್ಯಮಂತ್ರಿಗಳು ಸಂಬಂಧಿತ ಇಲಾಖೆಗೆ 1 ಕೋಟಿ ರೂ. ಬಿಡುಗಡೆಗೆ ಆದೇಶ ನೀಡಿದ್ದಾರೆ.