Advertisement

ಸಮುದ್ರ ದಿನಾಚರಣೆ-ಕಾಂಡ್ಲಾ ಬಿತ್ತೋತ್ಸವ

03:05 PM Jun 09, 2022 | Team Udayavani |

ಕಾರವಾರ: ವಿಶ್ವ ಸಮುದ್ರ ದಿನವಾದ ಇಂದು ನಾವೆಲ್ಲಾ ಸಮುದ್ರದ ಆರೋಗ್ಯದ ಬಗ್ಗೆ ಚಿಂತನೆ ಮಾಡಬೇಕಿದೆ. ವಾತಾವರಣದಲ್ಲಿ ತಾಪಮಾನ ಹೆಚ್ಚಿದರೆ, ಹಿಮಗಡ್ಡೆಗಳು ಕರಗಿ, ಸಮುದ್ರದ ಮಟ್ಟ ಏರುತ್ತದೆ. ಹಾಗಾಗಿ ಅರಣ್ಯ ಉಳಿಸಿ, ವಾತಾವರಣದಲ್ಲಿ ತಾಪಮಾನ ಏರಿಕೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಕಾರವಾರ ವಿಭಾಗದ ಡಿಸಿಎಫ್‌ ಪ್ರಶಾಂತ ನುಡಿದರು.

Advertisement

ಕಡವಾಡ ಗ್ರಾಮದ ನದಿ ಹಿನ್ನೀರು ಪ್ರದೇಶದಲ್ಲಿ ಓಶನ್‌ ಡೇ ಹಾಗೂ ಕಾಂಡ್ಲಾ ಬಿತ್ತೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

1992 ರಲ್ಲಿ ಕೆನಡಾದಲ್ಲಿನ ಸಮುದ್ರ ಅಭಿವೃದ್ಧಿ ಸಂಸ್ಥೆ ವಿಶ್ವ ಕಡಲದಿನ ಆಚರಣೆಗೆ ಪ್ರಸ್ತಾವನೆಯನ್ನು ಯುನೈಟೆಡ್‌ ನೇಶನ್‌ ಮುಂದಿರಿಸಿತು. ಮತ್ತು ಅದೇ ವರ್ಷ ವರ್ಲ್ಡ್ ಓಶನ್‌ ಡೇ ಆಚರಣೆಗೆ ಚಾಲನೆ ನೀಡಲಾಯಿತು.ಅಂದಿನಿಂದ ವಿಶ್ವ ಸಮುದ್ರ ದಿನ ಆಚರಿಸಲಾಗುತ್ತಿದೆ ಎಂದರು.

ಕಾಂಡ್ಲಾ ಸಹ ನದಿ ಮತ್ತು ಸಮುದ್ರ ಸೇರುವ ಸಂಗಮ ಸ್ಥಳದ ದಂಡೆ ಹಾಗೂ ನದಿ ಹಿನ್ನೀರಿನಲ್ಲಿ ಬೆಳೆಯುವ ಸಸ್ಯ. ಕಡಲ್ಕೊರೆತ ಮತ್ತು ಭೂ ಸವೆತ ತಡೆಯಲು ಕಾಂಡ್ಲಾ ಸಸ್ಯದ ಬೆಳವಣಿಗೆ ಅವಶ್ಯವಾಗಿದೆ. ಕಾರವಾರ ಕಾಳಿ ನದಿ ಹಿನ್ನೀರಲ್ಲಿ ಕಾಂಡ್ಲಾ ಹೇರಳವಾಗಿದ್ದು, ಈಗ ಮೂರು ಜಾತಿಯ ಕಾಂಡ್ಲಾ ಬೀಜ ಸಂಗ್ರಹಿಸಿ ಈಗ ನೆಡಲಾಗುತ್ತಿದೆ. ಬಿತ್ತೋತ್ಸವ ಕಾರ್ಯಕ್ರಮದ ಉದ್ದೇಶವೇ ಕಾಂಡ್ಲಾ ಸಸ್ಯಗಳನ್ನು ಹೆಚ್ಚಿಸುವುದಾಗಿದೆ. ಜೀವ ವೈವಿಧ್ಯ ರಕ್ಷಣೆ, ಮೀನಿನ ಹಾಗೂ ಏಡಿಗಳ ಸಂತಾನೋತ್ಪತ್ತಿ ಸಹ ಕಾಂಡ್ಲಾವನದಿಂದ ಆಗುತ್ತದೆ ಎಂದು ಡಿಸಿಎಫ್‌ ಪ್ರಶಾಂತ ವಿವರಿಸಿದರು.

ಕಾಂಡ್ಲಾ ಕಾಡು ಬೆಳೆಸಲು ಸರ್ಕಾರ ಸಹ ಪ್ರೋತ್ಸಾಹ ನೀಡಿದೆ. ಕಾಂಡ್ಲಾ ಸಸಿ ಕಡಿಯುವುದು ಅಪರಾಧವಾಗಿದೆ. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

Advertisement

ಈಚಿನ 5 ವರ್ಷಗಳಲ್ಲಿ ಕಾಂಡ್ಲಾ ಉತ್ತರ ಕನ್ನಡದಲ್ಲಿ ಹೆಚ್ಚಿದೆ. ಇದು ಪರಿಸರ ರಕ್ಷಣೆ ಹಾಗೂ ನದಿ ಸಮುದ್ರಗಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಸಹಾಯ ಮಾಡುತ್ತಿದೆ ಎಂದರು.

ವಿದ್ಯಾರ್ಥಿಗಳು ಸಮುದ್ರ, ನದಿ, ಜೀವ ವೈವಿಧ್ಯದ ಬಗ್ಗೆ ಹೆಚ್ಚು ಆಸಕ್ತಿ ಬೆಳಸಿಕೊಳ್ಳಬೇಕು ಎಂದು ಡಿಸಿಎಫ್‌ ಪ್ರಶಾಂತ ಹೇಳಿದರು.

ಕಾರವಾರ ಕೋಸ್ಟಲ್‌ ಮತ್ತು ಮರೀನ್‌ ಸೆಲ್‌ ಸಹಕಾರ ನೀಡಿತ್ತು. ಕಡಲ ಜೀವಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರೊ| ಶಿವಕುಮಾರ್‌ ಹರಗಿ, ಕಠಿಣಕೋಣ ಹೈಸ್ಕೂಲ್‌ ಶಿಕ್ಷಕ ವಿನಾಯಕ ನಾಯ್ಕ, ದರ್ಶನ್‌ ನಾಯ್ಕ, ರಾಜೇಂದ್ರ ನಾಯ್ಕ ಹಾಗೂ ವಿದ್ಯಾರ್ಥಿಗಳು, ಆರ್‌ಎಫ್‌ಒ ಪ್ರಮೋದ್‌ ಬಿ., ಡಿಆರ್‌ಎಫ್‌ಒ ಪ್ರಕಾಶ್‌ ಯರಗಟ್ಟಿ, ಗ್ಯಾಸ್‌ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಭಾರ ಪ್ರಾಂಶುಪಾಲರು ಉಪಸ್ಥಿತರಿದ್ದು, ಕಾಂಡ್ಲಾ ಮಾಹಿತಿ ಪಡೆದು, ಕಾಂಡ್ಲಾ ಬೀಜಗಳನ್ನು ನದಿ ಹಿನ್ನೀರಲ್ಲಿ ಬಿತ್ತಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next