Advertisement

Sculptural Elegance: ಲಕ್ಕುಂಡಿಯ ಶಿಲ್ಪಕಲಾ ಲಾಲಿತ್ಯ

05:03 PM Sep 17, 2024 | Team Udayavani |

ಕೃಷ್ಣೆ ಮತ್ತು ತುಂಗಭದ್ರೆಯರು ಒಟ್ಟುಗೂಡುವ ನಡುವಣ ಫ‌ಲವತ್ತಾದ ಪ್ರದೇಶವೊಂದಿದೆ. ಬೆಳೆ ಮತ್ತು ಕಲೆ ವಿಜೃಂಭಿಸಿದ ನೆಲವದು. ಸಾವಿರ ವರುಷದ ಹಿಂದೆ ನಾಣ್ಯವನ್ನು ಟಂಕಿಸುತ್ತಿದ್ದ ಟಂಕಸಾಲೆಯ “ಪೊಗಂದ್ಯಾಣ’ವೂ ಹೌದು. ಬಯಲುಸೀಮೆಯ ಗದಗಕ್ಕೆ ಆಗ್ನೇಯದಲ್ಲಿರುವ ಲಕ್ಕುಂಡಿಯೇ ಈ ಕಲಾಗ್ರಾಮ. ಕಲ್ಯಾಣ ಚಾಲುಕ್ಯರು ವೈಭವದಿಂದ ಆಳಿ, ಗತಿಸಿದ ಲಕ್ಕುಂಡಿಯು ಲೊಕ್ಕಿ ಅಥವಾ ಲೊಕ್ಕಿಗುಂಡಿಯಾಗಿತ್ತಂತೆ.

Advertisement

ಲಕ್ಕುಂಡಿಯ ಹಸಿರು ಹೊಲಗಳ ಮಧ್ಯೆ, ಜನನಿಬಿಡ ಬೀದಿಗಳ ನಡುವೆ, ಓಣಿಗಳ ಕೊನೆಯಲ್ಲಿ ಸುಪ್ತವಾಗಿರುವ ದೇವಾಲಯ ಮತ್ತು ಕಲ್ಯಾಣಿಗಳಲ್ಲಿ ಪ್ರಪಂಚದ ಅತ್ಯುತ್ತಮ ವಾಸ್ತುಶಿಲ್ಪ ಅಡಗಿದೆ. 19ನೇ ಶತಮಾನದ ವಾಸ್ತುಶಿಲ್ಪ ಮತ್ತು ಕಲಾ ಇತಿಹಾಸಕಾರ ಜೇಮ್ಸ್ ಬರ್ಗೆಸ್‌ ಪ್ರಕಾರ, ಇದು ಭಾರತದಲ್ಲಿ ಹಿಂದೂ ವಾಸ್ತುಶಿಲ್ಪವನ್ನು ಪ್ರದರ್ಶಿಸುವ ಅತ್ಯುತ್ತಮ ಕೇಂದ್ರ.

ಸುಮಾರು 50 ದೇವಾಲಯಗಳು, 101 ಹಂತದ ಬಾವಿಗಳು ಮತ್ತು 29 ಶಾಸನಗಳನ್ನು ಈ ಹಳ್ಳಿಯಲ್ಲಿ ಸಂರಕ್ಷಿಸಿ ಕಾಪಿಡಲಾಗಿದೆ. ಲಕ್ಕುಂಡಿಯಂದಾಕ್ಷಣ ಸಾಮಾನ್ಯವಾಗಿ ಗಮನಕ್ಕೆ ಬರುವುದು ಇಲ್ಲಿನ ಬ್ರಹ್ಮಜಿನಾಲಯ ಮತ್ತು ಸುಪ್ರಸಿದ್ಧ ವಾದದ್ದು ದಾನಚಿಂತಾಮಣಿ ಅತ್ತಿಮಬ್ಬೆಯಿಂದ. ಬ್ರಹ್ಮ ಜಿನಾಲಯದ ಕೆಳ ಪಾರ್ಶ್ವದಲ್ಲೇ ಮ್ಯೂಸಿಯಂ ಇದೆ. ಚಿಕ್ಕ ಜಿನಾಲಯ ಬ್ರಹ್ಮ ಜಿನಾಲಯದ ಪಕ್ಕದಲ್ಲಿದೆ.

ಲಕ್ಕುಂಡಿಯ ದೇವಾಲಯಗಳಲ್ಲಿ ಪ್ರಮುಖವಾದುದೆಂದರೆ ಕಾಶಿ ವಿಶ್ವೇಶ್ವರ ದೇವಾಲಯ. ಇದು ದ್ವಿಕೂಟವಾಗಿದ್ದು ಎರಡು ಗರ್ಭಗೃಹ, ಅರ್ಧಮಂಟಪ ಹಾಗೂ ನವರಂಗಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಎತ್ತರವಾದ ಪಾಣಿಪೀಠದ ಮೇಲೆ ಶಿವಲಿಂಗವಿದೆ. ಗರ್ಭಗೃಹದ ದ್ವಾರ ಬಂಧವು ವಿಪುಲವಾದ ಕೆತ್ತನೆಗಳಿಂದ ಕೂಡಿದ್ದು ದ್ವಾರದ ಎರಡೂ ಕಡೆಗಳಲ್ಲಿ ವಾದ್ಯ ವಾದಕರ, ನರ್ತಕಿಯರ ಹಾಗೂ ಶಿಲಾಬಾಲಿಕೆಯರ ಹುಬ್ಬು ಶಿಲ್ಪಗಳನ್ನು ಬಿಡಿಸಲಾಗಿದೆ. ಅರ್ಧಮಂಟಪ ದ್ವಾರದ ಎರಡೂ ಕಡೆಗಳಲ್ಲಿ ಅಲಂಕೃತ ಕಂಬಗಳಿವೆ. ನಟರಾಜನ ಕಿರುಶಿಲ್ಪ ಮೇಲ್ಭಾಗದ ಪದಕದಲ್ಲಿದೆ.

ದ್ವಾರ ಬಂಧಗಳನ್ನು ಗಮನಿಸಿದಾಗ, ದೇವಾಲಯದ ಮುಖ್ಯ ದ್ವಾರಬಂಧವಾದ ನವರಂಗದ ದ್ವಾರ ಮತ್ತು ದಕ್ಷಿಣ ಭಾಗದ ದ್ವಾರಗಳು ದ್ವಾರಬಂಧ ಮಾದರಿಗಳಿಗೆ ಅತ್ಯುತ್ತಮ ಮಾದರಿಗಳಾಗಿವೆ. ದಕ್ಷಿಣದ ದ್ವಾರವನ್ನುಗಮನಿಸಿದಾಗ ಅದೊಂದು ನವಶಾಖಾ ದ್ವಾರ. ಒಂಭತ್ತು ಅವರಣಗಳ ವಿಶಿಷ್ಟ  ಕಲಾತ್ಮಕ ದ್ವಾರವಿದು. ನನ್ನೇಶ್ವರ ದೇವಾಲಯದಲ್ಲಿ ಗರ್ಭಗೃಹ, ಅರ್ಧಮಂಟಪ, ನವರಂಗ ಹಾಗೂ ಮುಂಭಾಗದಲ್ಲಿ ತೆರೆದ ಮುಖಮಂಟಪಗಳಿವೆ.

Advertisement

ಗರ್ಭಗೃಹದಲ್ಲಿ ಶಿವಲಿಂಗವಿದ್ದು, ನವರಂಗಕ್ಕೆ ಪೂರ್ವ ಹಾಗೂ ದಕ್ಷಿಣದಿಂದ ಎರಡು ಪ್ರವೇಶದ್ವಾರಗಳಿವೆ. ನವರಂಗದ ಕಂಬಗಳ ನುಣುಪು ಕನ್ನಡಿಗೂ ಸ್ಪರ್ಧೆ ನೀಡುವಂತದ್ದು.  ಮುಂದಿರುವ ವಸ್ತುವಿನ ತಲೆಕೆಳಗಾದ ಸ್ಪಷ್ಟ ಪ್ರತಿಬಿಂಬ ಬರುವಷ್ಟು ನಿಖರ ನುಣುಪು. ನವರಂಗಕ್ಕಿರುವ ಮಹಾದ್ವಾರಬಂಧವು ಅಲಂಕಾರಿಕ ಸಂಕೀರ್ಣ ಕೆತ್ತನೆಗಳನ್ನು ಹೊಂದಿದೆ.

ಮಾಣಿಕೇಶ್ವರ, ಮಾಣಿಕ್ಕೇಶ್ವರ ಅಥವಾ ಮಾಣಿಕ್ಯೇಶ್ವರ ದೇವಾಲಯವು ಗ್ರಾಮದ ಉತ್ತರ ಭಾಗದಲ್ಲಿರುವ ಮುಸುಕಿನ ಬಾವಿಯ ದಂಡೆಯ ಮೇಲೆ ನಿರ್ಮಾಣವಾಗಿದೆ. ದೇವಾಲಯದ ಮುಂಭಾಗದಲ್ಲಿರುವ ಮುಸುಕಿನ ಬಾವಿ ಎಂದು ಕರೆಯಲಾಗುವ ಸುಂದರವಾದ ಕಲ್ಯಾಣಿಯೂ ಕುಸುರಿ ಕಲೆಗಳ ಅದ್ಭುತವೇ.

ಕಲ್ಯಾಣಿಯ ವಿನ್ಯಾಸವು ಬಹು ಸೊಗಸಾಗಿ ಒಳಭಾಗದಲ್ಲಿ ಕೋಷ್ಟಾಲಯಗಳ ರಚನೆಗಳಿಂದ ಕೂಡಿದೆ. ಪೂರ್ವ ಪಶ್ಚಿಮವಾಗಿ ಮತ್ತು ದಕ್ಷಿಣದಿಕ್ಕಿನಿಂದ  ಬಾವಿಗೆ ಹೋಗಲು ಮೆಟ್ಟಿಲುಗಳನ್ನು ರಚಿಸಲಾಗಿದೆ. ದಕ್ಷಿಣಭಾಗದಲ್ಲಿ ಇರುವಂತಹ ಪ್ರವೇಶ ದ್ವಾರವು ಚರಿತ್ರೆಯಲ್ಲಿ ದಾಖಲಾಗುವ ತಾಂತ್ರಿಕ ನಿರೂಪಣೆಗೆ ಸಾಕ್ಷಿಯಾಗಿದೆ. ಮುಸುಕಿನ ಬಾವಿಯ ಚಿತ್ರ ಅಂಚೆಚೀಟಿಯಾಗಿಯೂ ಬಿಡುಗಡೆಯಾಗಿದೆ.

ಬಳಪದ ಕಲ್ಲುಗಳಲ್ಲಿ ಕಟ್ಟಿರಬಹುದಾದ ಈ ರಮ್ಯ ದೇಗುಲಗಳು ವಾಸ್ತುಶಿಲ್ಪದ ಸೋಜಿಗಗಳು. ಕಂಬದ ಮೇಲಿನ ಹೂಗೀಚುಗಳು, ಅಲಂಕಾರಿಕ ಗೀಟುಗಳು ಮಾಸದೇ ಇನ್ನೂ ಉಳಿದದ್ದು ನಮ್ಮ ಪುಣ್ಯವೇ.  ಅಷ್ಟೂ ದೇವಾಲಯಗಳ ಭಿತ್ತಿಗಳು ಕೆತ್ತನೆಗಳಿಂದ, ಪುರಾಣಗಳ ಕಥಾನಕಗಳಿಂದ ಆವೃತವಾಗಿವೆ. ಕಣ್ಣು ಹೊರಳಿದಷ್ಟೂ ವಿನ್ಯಾಸಗಳೇ.

ಪರಂಪರೆಯ ತಾಣಗಳಾಗಿರುವ ಈ ಎಲ್ಲಾ ಪ್ರದೇಶಗಳು

- ವಿಶ್ವನಾಥ ಭಟ್‌

ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next