Advertisement

ಎಸ್‌ಸಿಪಿ/ಟಿಎಸ್‌ಪಿ ಅನುದಾನ: ಪ್ರಗತಿ ಸಾಧಿಸಲು ಡಿಸಿ ಸೂಚನೆ 

04:48 PM Mar 19, 2017 | Harsha Rao |

ಮಡಿಕೇರಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿರುವ ಅನುದಾನವನ್ನು ಮಾರ್ಚ್‌ 31ರೊಳಗೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.  
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

Advertisement

ಕೆಲವು ಇಲಾಖೆಗಳು ಉತ್ತಮ ಪ್ರಗತಿ ಸಾಧಿಸಿವೆ. ಕೆಲವು ಇಲಾಖೆಗಳ ಭೌತಿಕ ಕಾರ್ಯಕ್ರಮವಾಗಿದ್ದು, ಆರ್ಥಿಕ ಪ್ರಗತಿ ಸಾಧಿಸಿಲ್ಲ. ಇನ್ನು ಕೆಲವು ಇಲಾಖೆಗಳು ಕಾರ್ಯಕ್ರಮವನ್ನೇ ಅನುಷ್ಠಾನಗೊಳಿಸಿಲ್ಲ. ಈ ರೀತಿ ಆದರೆ ಸರ್ಕಾರಕ್ಕೆ ವರದಿ ನೀಡುವುದು ಕಷ್ಟವಾಗಲಿದೆ ಎಂದು ಅವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.  

ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ಪಂಚಾಯತ್‌ ರಾಜ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ, ಆರೋಗ್ಯ, ಲೋಕೋಪಯೋಗಿ, ಪ್ರವಾಸೋದ್ಯಮ, ಕಾರ್ಮಿಕ ಹೀಗೆ ನಾನಾ ಇಲಾಖೆಗಳು ತಮ್ಮ ಇಲಾಖಾ ವ್ಯಾಪ್ತಿಯ ಕಾರ್ಯಕ್ರಮಗಳನ್ನು ಪರಿಶಿಷ್ಟರಿಗೆ ತಲುಪಿಸಬೇಕು. ಭೌತಿಕ ಕಾರ್ಯಕ್ರಮವಾಗಿದ್ದಲ್ಲಿ ಆರ್ಥಿಕ ಪ್ರಗತಿಯ ಅಂಕಿ ಅಂಶಗಳ ಮಾಹಿತಿಯನ್ನು ಒದಗಿಸುವಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಪ್ರವಾಸೋದ್ಯಮ ಇಲಾಖೆಯಲ್ಲಿ ಪರಿಶಿಷ್ಟರಿಗೆ ಪ್ರವಾಸಿ ಟ್ಯಾಕ್ಸಿ ವಿತರಿಸುವ ಕಾರ್ಯಕ್ರಮ ಪ್ರಗತಿ ಸಾಧಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಅವರು, ಪ್ರವಾಸಿ ಟ್ಯಾಕ್ಸಿ ವಿತರಣೆ ಸಂಬಂಧಿಸಿದಂತೆ ತಮ್ಮ ಗಮನಕ್ಕೆ ತಂದು ಪ್ರಗತಿ ಸಾಧಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಅಸಮಾಧಾನ ವ್ಯಕ್ತಪಡಿಸಿದರು. 

ಮಾರ್ಚ್‌ 31ರೊಳಗೆ ಪರಿಶಿಷ್ಟರಿಗೆ ಮೀಸಲಿಟ್ಟಿರುವ ಅನುದಾನವನ್ನು ವಿನಿಯೋಗ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಕೆ ನೀಡಿದರು. 

Advertisement

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಾಯಾದೇವಿ  ಗಲಗಲಿ, ಐಟಿಡಿಪಿ ಇಲಾಖಾ ಅಧಿಕಾರಿ ಪ್ರಕಾಶ್‌ ಅವರು ತಮ್ಮ ಇಲಾಖಾ ವ್ಯಾಪ್ತಿಯ ಪ್ರಗತಿ ಮಾಹಿತಿ ನೀಡಿದರು.  ಜಿ.ಪಂ. ಉಪ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕೆ.ರಾಮಪ್ಪ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ| ನಾಗರಾಜು, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಬಿ.ಆರ್‌. ಗಿರೀಶ್‌, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಕೆ.ಟಿ. ದರ್ಶನ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಮಮ್ತಾಜ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಜಿ.ಆರ್‌. ಬಸವರಾಜು, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಸಿ. ಜಗನ್ನಾಥ್‌, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಶಂಕರ್‌, ಪ್ರಾದೇಶಿಕ ಸಾರಿಗೆ ಇಲಾಖೆಯ ರೀಟಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಅವರು ತಮ್ಮ ಇಲಾಖಾ ವ್ಯಾಪ್ತಿಯ ಹಲವು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next