Advertisement

ಎಸ್‌ಸಿ, ಎಸ್‌ಟಿಗಳು ಭಾರತದ ಸಂಸ್ಕೃತಿಯ ತಳಹದಿ: ಸಿಎಂ

10:21 PM Jan 07, 2023 | Team Udayavani |

ಮೈಸೂರು: ಕೃಷಿ, ಕಾರ್ಖಾನೆ ಸೇರಿ ದುಡಿಮೆಯಲ್ಲಿ ತೊಡಗಿರುವ ತಳಸಮುದಾಯದ ದುಡಿಯುವ ವರ್ಗದವರೇ ರಾಜ್ಯದ ಆರ್ಥಿಕತೆಗೆ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಶನಿವಾರ ಭಾರತೀಯ ಜನತಾ ಪಕ್ಷದ ಪರಿಶಿಷ್ಟ ಜಾತಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಭಾರತದ ಸಂಸ್ಕೃತಿ ಹಾಗೂ ಭವಿಷ್ಯ ನಿರ್ಮಾಣದ ಕೆಲಸವನ್ನು ತಳಸಮುದಾಯಗಳು ಮಾಡುತ್ತಿವೆ. ತಳಸಮುದಾಯಗಳಿಗೆ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕು ನೀಡುವತ್ತ ಸರ್ಕಾರದ ನಿರ್ಣಯಗಳಿರುತ್ತವೆ ಎಂದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು ಭಾರತದ ಸಂಸ್ಕೃತಿಯ ತಳಹದಿಯಾಗಿವೆ. ಈ ಸಂಸ್ಕೃತಿ ಭಾರತದ ಅಸ್ಮಿತೆಯಾಗಿದೆ. ಈ ಸಂಸ್ಕೃತಿ ಭಾರತಕ್ಕೆ ವಿಶಿಷ್ಟ ಸ್ಥಾನವನ್ನು ನೀಡಿದೆ. ಭಾರತದ ಅಸ್ಮಿತೆ ಹಾಗೂ ಅಭಿವೃದ್ಧಿಯನ್ನು ಕಾಯ್ದುಕೊಳ್ಳಲು ಈ ಸಮುದಾಯಗಳನ್ನು ಅಭಿವೃದ್ಧಿಗೊಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ತಳಸಮುದಾಯದ ಶ್ರೇಯೋಭಿವೃದ್ಧಿಗೆ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಇರಬೇಕೆನ್ನುವ ಕಾರಣದಿಂದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದಕ್ಕೆ ಕಾನೂನಿನ ಬಲವನ್ನು ನೀಡುವ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು.

ಕಾಂಗ್ರೆಸ್‌ ಪಕ್ಷದವರಿಗೆ ಅಂಬೇಡ್ಕರ್‌ ಅವರ ಹೆಸರನ್ನು ಬಳಸಿಕೊಳ್ಳುವುದು ಗೊತ್ತಿದೆಯೇ ಹೊರತು, ಸಮುದಾಯಗಳನ್ನು ಮೇಲೆತ್ತುವ ಕೆಲಸವನ್ನು ಮಾಡಲಿಲ್ಲ. ಕೇವಲ ವೋಟ್‌ ಬ್ಯಾಂಕ್‌ ಆಗಿ ಪರಿವರ್ತನೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

Advertisement

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾತನಾಡಿ, ಬಿಜೆಪಿ ಎಂದೂ ಕೂಡ ದಲಿತರ ವಿರೋಧಿಯಾಗಿಲ್ಲ. ಆದರೂ ಕಾಂಗ್ರೆಸ್‌ ನಾಯಕರು ಬಿಜೆಪಿ ದಲಿತ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ಸಿಗರು ಎಂದರು.

ಕೇಂದ್ರ ಸಚಿವ ನಾರಾಯಣಸ್ವಾಮಿ, ಬಿಜೆಪಿ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್‌ ಸಿಂಗ್‌ ಆರ್ಯ, ಪ್ರಧಾನ ಕಾರ್ಯದರ್ಶಿ ಮಹಾಂತ ಶಂಭುನಾಥ, ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next