ಲಕ್ನೋ: ಇಲ್ಲಿನ ಗೌತಮ್ ಪಳ್ಳಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿರುವ ರೈಲ್ವೇ ಅಧಿಕಾರಿಯೊಬ್ಬರ 14 ವರ್ಷದ ಮಗಳು ಶನಿವಾರದಂದು ತನ್ನ ತಾಯಿ ಹಾಗೂ ತಮ್ಮನನ್ನು ಗುಂಡಿಟ್ಟು ಕೊಂದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬೆಚ್ಚಿಬೀಳಿಸುವ ಮಾಹಿತಿ ಲಭಿಸುತ್ತಿದೆ.
ಹುಡುಗಿಯ ಕೋಣೆಯಲ್ಲಿ ಪೊಲೀಸರಿಗೆ ಸಿಕ್ಕಿರುವ ವಸ್ತುಗಳು ಆಕೆಯ ಮನಸ್ಥಿತಿ ವಿಚಿತ್ರವಾಗಿತ್ತು ಎಂಬುದನ್ನು ಸಾಬೀತುಪಡಿಸುವಂತಿದೆ ಹಾಗೂ ಹುಡುಗಿ ಮಾನಸಿಕ ತೊಂದರೆಯಿಂದ ಬಳಲುತ್ತಿರಬಹುದೆಂಬ ಶಂಕೆಯನ್ನು ಪೊಲೀಸರು ಇದೀಗ ವ್ಯಕ್ತಪಡಿಸುತ್ತಿದ್ದಾರೆ.
ಹುಡುಗಿಯ ಕೋಣೆಯಲ್ಲಿ ದೊರತಿರುವ ಪುಸ್ತಕಗಳ ಪುಟಗಳಲ್ಲಿ ಆಕೆ ತನ್ನನ್ನು ತಾನು ‘disqualified human’ (ಅನರ್ಹ ವ್ಯಕ್ತಿ) ಎಂದು ಬರೆದುಕೊಂಡಿದ್ದಾಳೆ ಮಾತ್ರವಲ್ಲದೆ ಗೀಚಿದ ರೀತಿಯಲ್ಲಿ ಹಲವಾರು ಬರಹಗಳು ಮತ್ತು ಪ್ಲಾಸ್ಟಿಕ್ ತಲೆಬುರುಡೆ ಪೊಲೀಸರಿಗೆ ಲಭಿಸಿದೆ.
ಈ ಹುಡುಗಿ ‘ಅನೂಹ್ಯ ವರ್ತನೆ’ಯನ್ನು ಹೊಂದಿದ್ದಳು ಎಂಬುದು ಇದರಿಂದ ಸಾಬೀತಾಗುತ್ತಿದೆ ಎಂದು ಲಕ್ನೋ ಪೊಲೀಸ್ ಕಮಿಷನರ್ ಸುಜೀತ್ ಪಾಂಡೆ ಅವರು ಅಭಿಪ್ರಾಯಪಟ್ಟಿದ್ದಾರೆ. ಮತ್ತು ಈ ಪ್ರಕರಣದಲ್ಲಿ ಹುಡುಗಿಯನ್ನು ಮಾನಸಿಕ ತಜ್ಞರ ಬಳಿಗೆ ಕರೆದುಕೊಂಡು ಹೋಗುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರೈಲ್ವೇ ಅಧಿಕಾರಿಯೊಬ್ಬರ ಪುತ್ರಿಯಾಗಿರುವ ಈಕೆ ಶನಿವಾರದಂದು ಕೋಣೆಯಲ್ಲಿ ಮಲಗಿದ್ದ ತಾಯಿ ಮತ್ತು ತಮ್ಮನನ್ನು 0.22 ಬೋರ್ ಪಿಸ್ತೂಲ್ ನಿಂದ ಗುಂಡು ಹೊಡೆದು ಸಾಯಿಸಿದ್ದಳು.