ರಬಕವಿ-ಬನಹಟ್ಟಿ: ರಬಕವಿ ಬನಹಟ್ಟಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬೆಳಗಿನ ಜಾವ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಕರ್ಯವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಜಗದಾಳ ಮತ್ತು ನಾವಲಗಿ ಗ್ರಾಮದ ವಿದ್ಯಾರ್ಥಿನಿಯರು ಬಸ್ ನಿಲ್ದಾಣದ ನಿಯಂತ್ರಕರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಶಾಲಾ ಕಾಲೇಜುಗಳು ಆರಂಭವಾಗಿವೆ. ತಾಲ್ಲೂಕಿನ ನಾವಲಗಿ, ಜಗದಾಳ ಮತ್ತು ಸುತ್ತ ಮುತ್ತಲಿನ ತೋಟಗಳಲ್ಲಿ ವಸತಿ ಇರುವ ನೂರಾರು ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರುತ್ತಾರೆ. ಈ ಮೊದಲು ನಾವಲಗಿ ಗ್ರಾಮಕ್ಕೆ ಬೆಳಗ್ಗೆ7.15 ಕ್ಕೆ ಬಸ್ ಆಗಮಿಸುತ್ತಿತ್ತು. ಇದರಿಂದಾಗಿ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಕಾಲೇಜುಗಳಿಗೆ ಬರುತ್ತಿದ್ದರು.
ಈಗ ಬಸ್ ನ್ನು ರದ್ದುಗೊಳಿಸಿದ್ದರಿಂದ ವಿದ್ಯಾರ್ಥಿಗಳು ಕಾಲೇಜು ತಲುಪುವಷ್ಟರಲ್ಲಿ ಮೊದಲ ಅವಧಿ ಮುಕ್ತಾಯವಾಗಿರುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಬೆಳಗಿನ ಜಾವ ನಾವಲಗಿ 7.15 ಕ್ಕೆ ಬರುತ್ತಿರುವ ಬಸ್ ನ್ನು ಪುನಃ ಆರಂಭಿಸಬೇಕು.
ಅದೇ ರೀತಿಯಾಗಿ ಹಳಿಂಗಳಿ, ಮದನಮಟ್ಟಿ ಹಾಗೂ ಬೇರೆ ಬೇರೆ ಗ್ರಾಮಕ್ಕೆ ತೆರಳುವ ವಿದ್ಯಾರ್ಥಿಗಳು ಮಧ್ಯಾಹ್ನ 1 ರಿಂದ 2.30 ರವರೆಗೆ ಬಸ್ ನಿಲ್ದಾಣದಲ್ಲಿಯೇ ಕುಳಿತುಕೊಳ್ಳಬೇಕಾಗಿದೆ. ಈ ವಿದ್ಯಾರ್ಥಿಗಳು ಮಧ್ಯಾಹ್ನ 3 ಗಂಟೆಗೆ ಮನೆಗಳಿಗೆ ತೆರಳುತ್ತಿದ್ದಾರೆ.
ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ನೀಡಿ ಸರಿಯಾದ ಸಮಯದಲ್ಲಿ ಬಸ್ ಓಡಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯಾರ್ಥಿನಿಯರು ಮನವಿಯಲ್ಲಿ ತಿಳಿಸಿದ್ದಾರೆ.
ಪವಿತ್ರಾ ಪುರಾಣಿಕಮಠ, ಕವಿತಾ ಅಸ್ಕಿ, ಪಲ್ಲವಿ ಪುರಾಣಿಕಮಠ, ಸವಿತಾ ಅಸ್ಕಿ, ಭುವನೇಶ್ವರಿ ಬಂಗಿ, ಸುಶೀಲಾ ತಿಪ್ಪಿಮಠ ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಇದ್ದರು