ಬೆಂಗಳೂರು: ಎಸ್‌ಸಿ/ಎಸ್‌ಟಿ ಜನಾಂಗಕ್ಕೆ ಮೀಸಲಿಟ್ಟಿದ್ದ 11 ಸಾವಿರ ಕೋಟಿ ರೂ.ಗಳನ್ನು 5 ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕೆಂದು ಮೀಸಲಿರಿಸಿದ ಹಣವನ್ನು ಯಾವುದೇ ಕಾರಣಕ್ಕೂ ಇತರ ಸಮುದಾಯ ಅಥವಾ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ಸರಕಾರ ಸ್ಪಷ್ಟನೆ ನೀಡಿದೆ.
5 ಗ್ಯಾರಂಟಿಗಳಿಗೆ ಎಸ್‌ಸಿಪಿ, ಟಿಎಸ್‌ಪಿಯ 11 ಸಾವಿರ ಕೋಟಿ ರೂ.ಗಳನ್ನು ಬಳಸುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್.ಡಿ. ಮಹದೇವಪ್ಪ ಹೇಳಿಕೆ ಕೊಟ್ಟಿದ್ದರು. ಇದನ್ನು ವಿರೋಧಿಸಿ ಆ.4ರಂದು ಬಿಜೆಪಿ ಎಸ್‌ಸಿ ಮೋರ್ಚಾ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸರಕಾರ, ಎಸ್‌ಸಿಪಿ – ಟಿಎಸ್‌ಪಿ ಕಾಯ್ದೆ 2013ರ ಪ್ರಕಾರವೇ ಅನುದಾನವನ್ನು ಬಳಸಲಾಗುತ್ತದೆ. ಯಾವುದೇ ಕಾರಣಕ್ಕೂ ಇತರ ಉದ್ದೇಶಕ್ಕೆ ಬಳಸುವುದಿಲ್ಲ ಎಂದಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿಪಿ – ಟಿಎಸ್‌ಪಿ ಕಾಯ್ದೆ ಪ್ರಕಾರ 2023-24ನೇ ಸಾಲಿನಲ್ಲಿ 34,294 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 4,031 ಕೋಟಿ ರೂ. (ಶೇ.13) ಹೆಚ್ಚಳವಾಗಿದೆ. ಈ ಅನುದಾನದಲ್ಲಿ 11,144 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗೆ ಒದಗಿಸಿದ್ದು, ಈ ಯೋಜನೆಯಡಿ ಬರುವ ಎಸ್‌ಸಿ, ಎಸ್‌ಟಿ ಸಮುದಾಯದ ಫಲಾನುಭವಿಗಳಿಗೇ ಇದನ್ನು ಖರ್ಚು ಮಾಡಲಾಗುತ್ತದೆ. ಇನ್ನೂ 22 ಸಾವಿರ ಕೋಟಿ ರೂ.ಗಳನ್ನು ಇದೇ ಸಮುದಾಯದ ಇನ್ನಿತರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಗ್ಯಾರಂಟಿ ಕಾರ್ಯಕ್ರಮಗಳು ಎಸ್‌ಸಿ, ಎಸ್‌ಟಿ ಜನರಿಗೆ ನೇರವಾಗಿ ಪ್ರಯೋಜನವಾಗುತ್ತಿರುವ ಹಿನ್ನೆಲೆಯಲ್ಲಿ ನಿಯಮಾನುಸಾರ ಇದಕ್ಕೆಂದೇ ಭಾಗಶಃ ಅನುದಾನವನ್ನು ಹಂಚಿಕೆ ಮಾಡಲಾಗಿದೆ.
ಯೋಜನೆ ಎಸ್‌ಸಿಪಿ, ಟಿಎಸ್‌ಪಿ ಅನುದಾನ (ಕೋಟಿ ರೂ.ಗಳಲ್ಲಿ)
ಗೃಹಲಕ್ಷ್ಮೀ- 5,075.00
ಅನ್ನಭಾಗ್ಯ- 2,779.97
ಗೃಹಜ್ಯೋತಿ- 2,410.00
ಶಕ್ತಿ- 812.00
ಯುವನಿಧಿ- 67.50
ಒಟ್ಟು- 11,144.47